ಸಕ್ಕರೆನಾಡು ಮಂಡ್ಯ ಒಂದು ವಿನೂತನ ಕಾರ್ಯಕ್ರಮಕ್ಕೆ ಮುನ್ನುಡಿ ಬರೆಯುತ್ತಿದೆ. ಮೈಸೂರು, ಬೆಂಗಳೂರು ಮತ್ತು ಮಂಡ್ಯ ನಗರಗಳಲ್ಲಿನ ಐಟಿ ಕಂಪನಿಗಳಲ್ಲಿ ಕೆಲಸ ಮಾಡುವ ಉತ್ಸಾಹಿ ಯುವಕರು ಇದೇ ಭಾನುವಾರ ಮಂಡ್ಯ ತಾಲ್ಲೂಕಿನ ಆಲಕೆರೆ ಗ್ರಾಮದ ರೈತರೊಬ್ಬರ ಭತ್ತದ ನಾಟಿಗೆ ನೆರವಾಗಲು ಗದ್ದೆಗೆ ಇಳಿಯುವ ಮೂಲಕ ‘ಮುಯ್ಯಾಳು ಸಂಸ್ಕೃತಿ’ಯನ್ನು ಮತ್ತೆ ಮುನ್ನೆಲೆಗೆ ತರುತ್ತಿದ್ದಾರೆ.
ಭಾರತದಲ್ಲೇ ಮೊದಲು ಎಂದು ಹೇಳಲಾಗುತ್ತಿರುವ ಆಲಕೆರೆಯ ‘ರೈತರ ಶಾಲೆ’ ಸಂಸ್ಥೆ ಈ ನೆಲದ ನಂಟು ಕಾರ್ಯಕ್ರಮವನ್ನು ಆಯೋಜಿಸಿದೆ. ಉದ್ಯೋಗದ ಜತೆಗೆ ತಿಂಗಳಿಗೊಮ್ಮೆ ಸಮಾಜಕ್ಕೆ, ಸರ್ಕಾರಿ ಶಾಲೆಗೆ ನೆರವಾಗುವ ‘ಕನ್ನಡ ಮನಸ್ಸುಗಳು – ಕರ್ನಾಟಕ’ ತಂಡದ ಸಹಯೋಗದಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮದಲ್ಲಿ ಮಂಡ್ಯದ ಹತ್ತಾರು ಸಂಘ ಸಂಸ್ಥೆಗಳು, ಶಾಲಾ ಕಾಲೇಜುಗಳ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಭಾಗಿಯಾಗುತ್ತಿದ್ದಾರೆ.
ಏನಿದು ಮುಯ್ಯಾಳು ಸಂಸ್ಕೃತಿ?
ಹಿಂದಿನ ಕಾಲದಲ್ಲಿ ರೈತರು ಹಣದ ಕೂಲಿಗೆ ಬದಲು ಮುಯ್ಯಾಳು ಆಧಾರದ ಮೇಲೆ ಬೇಸಾಯದ ಕೆಲಸಗಳನ್ನು ಪರಸ್ಪರ ಸಹಕಾರದ ಮೇಲೆ ಮಾಡಿ ಮುಗಿಸುತ್ತಿದ್ದರು. ಈಗ ಅದೇ ಮುಯ್ಯಾಳು ಪದ್ಧತಿಯನ್ನು ರೈತರ ಶಾಲೆ ಜಾರಿಗೆ ತರುತ್ತಿದೆ. ರೈತ ಕುಟುಂಬಗಳ ಸದಸ್ಯರು ಪರಸ್ಪರ ಹೊಂದಾಣಿಕೆ ಮಾಡಿಕೊಂಡು ಕೂಲಿ ಪಡೆಯದೆ ಅವರ ಹೊಲದಲ್ಲಿ ಇವರು, ಇವರ ಹೊಲದಲ್ಲಿ ಅವರು ಕೆಲಸ ಮಾಡುವುದೇ ಮುಯ್ಯಾಳು ಪದ್ಧತಿ. ಇದರಿಂದ ಕೆಲಸ ಹಗುರವಾಗುತ್ತದೆ. ಹಣದ ಉಳಿತಾಯವೂ ಆಗುತ್ತದೆ.
“ಕಳೆದ ತಿಂಗಳು ನಾನು ಮೈಸೂರಿನಲ್ಲಿ ಹೊಸದಾಗಿ ಆರಂಭಿಸಿದ ಪೆಟ್ರೋಲ್ ಬಂಕ್ ಕೆಲಸಗಳಿಗೆ ನಂಬಿಕಸ್ಥರು ಬೇಕಿತ್ತು. ಆಗ ವಾರಗಟ್ಟಲೆ ನನ್ನ ಜತೆ ನಿಂತವರು ರೈತರ ಶಾಲೆಯ ಸ್ಥಾಪಕರಾದ ಪ್ರೊ. ಸತ್ಯಮೂರ್ತಿ. ಅವರ ಋಣವನ್ನು ಹೇಗಾದರೂ ತೀರಿಸಬೇಕಲ್ಲ ಎಂದು ಯೋಚಿಸುತ್ತಿದ್ದೆ. ಉದ್ಯಮಿಯಾದ ನನಗೆ ಕೃಷಿ ಜಮೀನಿಲ್ಲ. ಆದರೆ, ವ್ಯವಸಾಯ ಮಾಡಬೇಕೆಂಬ ಹಂಬಲವಿದೆ. ಹೀಗಾಗಿ, ಈ ಭಾನುವಾರ ಆಲಕೆರೆಯಲ್ಲಿ ನಡೆಯಲಿರುವ ಗದ್ದೆ ನಾಟಿಯಲ್ಲಿ ಮುಯ್ಯಾಳಾಗಿ ಒಂದು ದಿನ ದುಡಿಯಲು ನಿರ್ಧರಿಸಿದ್ದೇನೆ” ಎಂದು ಎಲ್ಲರೊಳಗೊಂದಾಗು ಮಂಕುತಿಮ್ಮ ಟ್ರಸ್ಟ್ ಅಧ್ಯಕ್ಷ ವಿನಯ್ ಕುಮಾರ್ ಎಂ ಸಂತಸ ವ್ಯಕ್ತಪಡಿಸಿದ್ದಾರೆ.

“ಮಹಾನಗರಗಳ ಆಕರ್ಷಣೆಗೆ ಒಳಗಾಗಿ ಹಳ್ಳಿಗಳನ್ನು ತೊರೆಯುತ್ತಿರುವ ಯುವಜನತೆ ಒಂದು ಕಡೆಯಾದರೆ, ಕೃಷಿ ಕೆಲಸಗಳಿಗೆ ಜನರಿಲ್ಲದೆ ಉತ್ತರ ಪ್ರದೇಶ, ಬಿಹಾರಗಳಿಂದ ಕೂಲಿ ಕಾರ್ಮಿಕರನ್ನು ಕರೆತರುತ್ತಿರುವ ದುರಿತ ಕಾಲದಲ್ಲಿ ಇಂದು ನಾವಿದ್ದೇವೆ. ಇದೊಂದು ಗಂಭೀರ ಸಮಸ್ಯೆ. ಇದಕ್ಕೆ ಪರಿಹಾರವೇನು? ಎಂದು ಹುಡುಕುತ್ತಾ ಹೊರಟಾಗ ಗದ್ದೆ ನಾಟಿಗೆ ನೆಲದ ನಂಟು ಇರುವ ಯುವಜನರನ್ನು ಯಾಕೆ ಕರೆತರಬಾರದು ಎಂಬ ಆಲೋಚನೆ ಬಂತು. ಈ ಬಾರಿ ಐದು ಎಕರೆ ಜಮೀನಿಗೆ ಉಚಿತವಾಗಿ ನಾಟಿ ಮಾಡಿಸುತ್ತಿದ್ದೇವೆ. ನೂರು ಮಂದಿ ಮುಯ್ಯಾಳುಗಳನ್ನು ಗದ್ದೆಗೆ ಇಳಿಸುತ್ತಿದ್ದೇವೆ. ಮುಂದಿನ ವರ್ಷ ಕನಿಷ್ಠ 50 ಎಕರೆ ನಾಟಿ ಮಾಡಿಸುವ ಗುರಿ ಇದೆ” ಎನ್ನುತ್ತಾರೆ ʼರೈತರ ಶಾಲೆʼಯ ಮುಖ್ಯಸ್ಥ ಪ್ರೊ. ಸತ್ಯಮೂರ್ತಿ.

ಇದನ್ನೂ ಓದಿ: ಮಂಡ್ಯ | ಶಿಕಾರಿಪುರ ಅಲೆಮಾರಿ ಹಕ್ಕಿಪಿಕ್ಕಿ ಸಮುದಾಯ ಜನರ ಬದುಕು ಅತಂತ್ರ
“ನನ್ನ ಅಪ್ಪ, ಅಜ್ಜ, ಮುತ್ತಜ್ಜ ಎಲ್ಲರೂ ರೈತರು. ಹೊಲಗದ್ದೆಗಳಲ್ಲಿ ಆಡಿ ಬೆಳೆದವರು ನಾವು. ಈ ಕರ್ನಾಟಕದ ಕೃಷಿ ಕ್ಷೇತ್ರ ಸಂಕಷ್ಟದಲ್ಲಿದೆ. ಅನ್ನ ಕೊಡುವ ರೈತನನ್ನು ನಾವು ಒಂಟಿಯಾಗಲು ಬಿಡಬಾರದು. ಬೆಂಗಳೂರಿನಲ್ಲಿ ನಾವು ಬದುಕು ಕಟ್ಟಿಕೊಂಡಿದ್ದರೂ ನೆಲದ ನಂಟು ನಮ್ಮನ್ನು ಇನ್ನಿಲ್ಲದಂತೆ ಕಾಡುತ್ತದೆ. ನನ್ನದೇ ಸಮಾನ ಆಲೋಚನೆಯ ಐಟಿ ಕಂಪನಿಗಳಲ್ಲಿ ಕೆಲಸ ಮಾಡುವ ಅನೇಕ ಗೆಳೆಯರು ಶನಿವಾರವೇ ಮಂಡ್ಯಕ್ಕೆ ಬರುತ್ತಿದ್ದೇವೆ. ಭಾನುವಾರ ಇಡೀ ದಿನ ಆಲಕೆರೆಯ ರೈತರ ಗದ್ದೆ ನಾಟಿಯಲ್ಲಿ ಶ್ರಮದಾನ ಮಾಡಲಿದ್ದೇವೆ. ನೀವೂ ಬನ್ನಿ” ಎಂದು ಕನ್ನಡ ಮನಸ್ಸುಗಳು ಕರ್ನಾಟಕ ಸಂಸ್ಥೆಯ ಮುಖ್ಯಸ್ಥ ಪವನ್ ಧರೆಗುಂಡಿ ಮನವಿ ಮಾಡಿದ್ದಾರೆ.

ನೆಲದ ನಂಟು ಕಾರ್ಯಕ್ರಮಕ್ಕೆ ಬರುವ ಮುಯ್ಯಾಳುಗಳು ದುಬಾರಿ ಬಟ್ಟೆ ಧರಿಸಿ ಬಂದು ಗದ್ದೆ ನಾಟಿಯಲ್ಲಿ ಪಾಲ್ಗೊಳ್ಳದಂತೆ ರೈತರ ಶಾಲೆ ಮನವಿ ಮಾಡಿದೆ. ಇಷ್ಟೇ ಅಲ್ಲದೆ ವೇದಿಕೆ ಕಾರ್ಯಕ್ರಮವನ್ನು ರದ್ದುಗೊಳಿಸಿ, ಭಾಷಣ, ಸನ್ಮಾನ, ಹಾರ ತುರಾಯಿಗಳನ್ನು ನಿಷೇಧಿಸಿ ಹೊಸ ಮಾದರಿ ಹಾಕಿಕೊಟ್ಟಿದೆ. ಕಲಾನಿಕೇತನ ಶಾಲೆಯ ಕಲಾವಿದರು ಸ್ಥಳದಲ್ಲೇ ವ್ಯವಸಾಯದ ಕುರಿತು ಚಿತ್ರ ಬಿಡಿಸಲಿದ್ದಾರೆ. ಜನಪದ ಗಾಯಕರಾದ ಗಾಮನಹಳ್ಳಿ ಸ್ವಾಮಿ ಮತ್ತು ಗಾನಾಸುಮ ಅವರು ಹಳ್ಳಿ ಹಾಡುಗಳನ್ನು ಪ್ರಸ್ತುತ ಪಡಿಸಲಿದ್ದಾರೆ. ಜಮೀನಿನಲ್ಲಿ ಶ್ರಮದಾನ ಮಾಡಿ ಒಂದು ದಿನವನ್ನು ರೈತರ ಜತೆ ಕಳೆಯುವಂತೆ ಪ್ರೀತಿಯಿಂದ ಮನವಿ ಮಾಡಿದೆ.





