ತೋಟದಲ್ಲಿ ಕೆಲಸ ಮಾಡುತ್ತಿದ್ದ ರೈತನ ಮೇಲೆ ಹುಲಿಯೊಂದು ದಾಳಿ ನಡೆಸಿ ಗಾಯಗೊಳಿಸಿರುವ ಘಟನೆ ಮಂಡ್ಯ ತಾಲೂಕಿನ ಗೊರವಾಲೆ ಬಳಿ ನಿನ್ನೆ ಬೆಳಗ್ಗೆ ನಡೆದಿದೆ.
ಹುಲಿ ದಾಳಿಯಿಂದ ಕೃಷಿ ಕೆಲಸಗಾರ ತಿರುಮಲೆ (60) ಎಂಬ ವ್ಯಕ್ತಿ ಗಾಯಗೊಂಡಿದ್ದು, ಸದ್ಯ ಮಂಡ್ಯ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹುಲಿ ದಾಳಿಯಿಂದ ತಿರುಮಲೆ ಅವರ ಬಲ ತೊಡೆ, ಬಲಗೈ ಮೇಲೆ ಗಂಭೀರ ಗಾಯಗಳಾಗಿವೆ.
ಸ್ಥಳೀಯರ ತೋಟವೊಂದರಲ್ಲಿ ಸುಮಾರು 15 ವರ್ಷದಿಂದ ಕೆಲಸ ನಿರ್ವಹಿಸುತ್ತಿರುವ ತಿರುಮಲೆ ಮಂಗಳವಾರ ಬೆಳಿಗ್ಗೆ 7.45 ಸಮಯದಲ್ಲಿ ಆಡುಗಳಿಗೆ ಸೊಪ್ಪು ಕತ್ತರಿಸುತ್ತಿದ್ದಾಗ, ಏಕಾಏಕಿ ಹುಲಿ ದಾಳಿ ನಡೆಸಿದೆ. ಇದರಿಂದಾಗ ಗಾಬರಿಗೊಂಡ ತಿರುಮಲೆ, ಕೂಡಲೇ ಕಿರುಚಿಕೊಂಡು, ಕೈಯಲ್ಲಿದ್ದ ಕುಡುಗೋಲಿನಿಂದ ಹುಲಿ ಮೇಲೆ ಪ್ರತಿ ದಾಳಿ ನಡೆಸಲು ಮುಂದಾಗಿದ್ದಾರೆ. ಅಷ್ಟರಲ್ಲಿ ತಿರುಮಲೆಯ ಕಿರುಚಾಟವನ್ನು ಕೇಳಿ ಸ್ಥಳೀಯರು ಅತ್ತ ದೌಡಾಯಿಸಿದಾಗ ಹುಲಿಯು ಅಲ್ಲಿಂದ ಕಣ್ಮರೆಯಾಗಿದೆ.
ಇದನ್ನೂ ಓದಿ: ಮಂಡ್ಯ | ಮಹರ್ಷಿ ವಾಲ್ಮೀಕಿ ಒಂದು ಸಮುದಾಯಕ್ಕೆ ಸೀಮಿತರಲ್ಲ: ಜಿಲ್ಲಾಧಿಕಾರಿ ಡಾ. ಕುಮಾರ
ಈ ಭಾಗದಲ್ಲಿ ಆಗಾಗ ಚಿರತೆಗಳು ಕಾಣಿಸಿಕೊಳ್ಳುವುದು ಸಾಮಾನ್ಯ. ಆದರೆ ಈಗ ಹುಲಿ ಕಾಣಿಸಿಕೊಂಡು ಭೀತಿಯನ್ನುಂಟು ಮಾಡಿದೆ. ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳು ಹುಲಿಯನ್ನು ಸೆರೆ ಹಿಡಿಯಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಅಲ್ಲದೇ ಹುಲಿ ದಾಳಿಯಿಂದ ಗಾಯಗೊಂಡಿರುವ ತಿರುಮಲೆಯವರಿಗೆ ಸೂಕ್ತ ಪರಿಹಾರ ನೀಡಬೇಕೆಂದು ಒತ್ತಾಯಿಸಿದ್ದಾರೆ.





