ಪ್ರವಾಸಕ್ಕೆ ಬಂದಿದ್ದ ವೇಳೆ ನಾಲೆಯಲ್ಲಿ ಕೊಚ್ಚಿಹೋಗಿದ್ದ ಐದು ಮಕ್ಕಳ ಪೈಕಿ ನಾಲ್ವರ ಮೃತದೇಹ ಪತ್ತೆಯಾದ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನಲ್ಲಿ ನಡೆದಿದೆ. ಬದುಕುಳಿದಿರುವ ನಾಲ್ಕು ವರ್ಷದ ಬಾಲಕನಿಗೆ ಮೈಸೂರಿನ ಕೆ ಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದ್ದು, ಘಟನೆ ಅರಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಏನಿದು ಘಟನೆ: ನಿನ್ನೆ (ನ.1) ಮೈಸೂರಿನ ಶಾಂತಿನಗರದಲ್ಲಿರುವ ಮದರಸಾದಿಂದ ಮೂವರು ಸಿಬ್ಬಂದಿಗಳೊಂದಿಗೆ ಒಟ್ಟು 15 ಮಕ್ಕಳು ಪ್ರವಾಸಕ್ಕೆ ಆಗಮಿದ್ದರು. ಮಂಡ್ಯ ಕೊಪ್ಪಲು ಬಳಿಯ ನಾಲೆಯಲ್ಲಿ ಮಕ್ಕಳು ಆಟವಾಡುತ್ತಿದ್ದ ವೇಳೆ ಅಚಾನಕ್ಕಾಗಿ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದರು. ಕೊಚ್ಚಿಹೋದ ಮಕ್ಕಳನ್ನು ಆಯಿಷಾ (14), ಮೊಹಮ್ಮದ್ ಆಯನ್ (4), ಹನಿ (14), ಅಫ್ರಿನ್ (13) ಮತ್ತು ಥರ್ಬಿನ್ (13) ಎಂದು ಗುರುತಿಸಲಾಗಿದೆ. ಸ್ಥಳೀಯರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ತಕ್ಷಣ ಶೋಧ ಕಾರ್ಯ ಆರಂಭಿಸಿ ಆಯಿಷಾ ಮತ್ತು ಆಯನ್ ಅವರನ್ನು ರಕ್ಷಣೆ ಮಾಡಿ ಮೈಸೂರಿನ ಕೆ ಆರ್ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಿಸದೆ ಆಯಿಷಾ ಮೃತಪಟ್ಟಿದ್ದಾರೆ.
ಇದನ್ನೂ ಓದಿ: ಆಂಧ್ರಪ್ರದೇಶ | ಶ್ರೀಕಾಕುಳಂನ ವೆಂಕಟೇಶ್ವರ ಸ್ವಾಮಿ ದೇಗುಲದಲ್ಲಿ ಕಾಲ್ತುಳಿತ: ಕನಿಷ್ಠ 9 ಮಂದಿ ಸಾವು
ಸಂಜೆಯಾಗಿದ್ದರಿಂದ ನಿನ್ನೆ ಶೋಧ ಕಾರ್ಯ ಸ್ಥಗಿತಗೊಳಿಸಿದ್ದ ಸಿಬ್ಬಂದಿ, ಇಂದು ಮತ್ತೆ ಶೋಧ ಕಾರ್ಯ ಆರಂಭಿಸಿದ್ದರು. ಬೆಳಿಗ್ಗೆಯೇ ಅಫ್ರಿನ್ ಶವ ನಾಲೆಯಲ್ಲಿ ಪತ್ತೆಯಾಗಿತ್ತು. ಬಳಿಕ ಮಧ್ಯಾಹ್ನದ ಹೊತ್ತಿಗೆ ಹನಿ, ಥರ್ಬಿನ್ ಮೃತದೇಹ ಕೂಡ ನಾಲೆಯಲ್ಲಿ ಬಿದ್ದ ಜಾಗದಿಂದ 7 ಕಿ.ಮೀ ದೂರದಲ್ಲಿ ಸಿಕ್ಕಿವೆ. ಸದ್ಯ ಮರಣೋತ್ತರ ಪರೀಕ್ಷೆಗಾಗಿ ಮೈಸೂರಿನ ಕೆ ಆರ್ ಆಸ್ಪತ್ರೆಗೆ ಮೃತದೇಹಗಳನ್ನು ರವಾನೆ ಮಾಡಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸೂಚನೆ: ಪ್ರವಾಸ ಅಥವಾ ಪಿಕ್ನಿಕ್ ಸಂದರ್ಭದಲ್ಲಿ ನದಿ, ನಾಲೆ, ಕೆರೆ ಮುಂತಾದ ನೀರಿನ ಪ್ರದೇಶಗಳಲ್ಲಿ ಮಕ್ಕಳನ್ನು ನಿರ್ಲಕ್ಷ್ಯದಿಂದ ಇಳಿಯಲು ಬಿಡಬಾರದು. ಇಂತಹ ಸ್ಥಳಗಳಲ್ಲಿ ನೀರಿನ ಆಳ, ಹರಿವು ಅಥವಾ ಅಡಿಯಲ್ಲಿ ಇರುವ ಕಲ್ಲುಗಳ ಬಗ್ಗೆ ಸ್ಪಷ್ಟ ಮಾಹಿತಿ ಇರದೇ ಇರುವುದರಿಂದ ಕ್ಷಣಾರ್ಧದಲ್ಲೇ ಅಪಘಾತ ಸಂಭವಿಸಬಹುದು. ಪೋಷಕರು ಹಾಗೂ ಗುರುಗಳು ಸದಾ ಕಣ್ಗಾವಲಿಟ್ಟು ಮಕ್ಕಳ ಸುರಕ್ಷತೆಯನ್ನು ಮೊದಲ ಆದ್ಯತೆಯಾಗಿ ಪರಿಗಣಿಸಬೇಕು. ಸ್ಥಳೀಯ ಆಡಳಿತ ಅಪಾಯ ಪ್ರದೇಶಗಳಲ್ಲಿ ಎಚ್ಚರಿಕಾ ಫಲಕಗಳು ಹಾಗೂ ಭದ್ರತಾ ಕ್ರಮಗಳನ್ನು ಕಡ್ಡಾಯಗೊಳಿಸಬೇಕು.





