ಗೆಜ್ಜಲಗೆರೆ ಕೈಗಾರಿಕಾ ಪ್ರದೇಶವಾಗಿ ಅಭಿವೃದ್ಧಿಯಾಗುವ ಮೊದಲೇ ಅಲ್ಲಿ ಭೂಮಿಯ ಬೆಲೆ ಏರಿಕೆಯಾಗಿತ್ತು ಮತ್ತು ಇದು ಸ್ವಾಭಾವಿಕ ಪ್ರಕ್ರಿಯೆಯೇ ಹೊರತು ಯಾವುದೇ ವ್ಯಕ್ತಿಯ ಲಾಭಕ್ಕಾಗಿ ಅಲ್ಲ. ಶಾಸಕರು ರಿಯಲ್ ಎಸ್ಟೇಟ್ ಲಾಭಕ್ಕಾಗಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂಬ ಆರೋಪಗಳನ್ನು ಕಾಂಗ್ರೆಸ್ ಮುಖಂಡ ಎಚ್ ಎಲ್ ಸತೀಶ್ ತಳ್ಳಿಹಾಕಿದರು.
ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಗೆಜ್ಜಲಗೆರೆ ಗ್ರಾಮವನ್ನು ಮದ್ದೂರು ನಗರಸಭೆಗೆ ಸೇರ್ಪಡೆಗೊಳಿಸಿರುವುದಕ್ಕೆ ಬೆಂಬಲ ವ್ಯಕ್ತಪಡಿಸಿ ಯುವ ಕಾಂಗ್ರೆಸ್ ಮುಖಂಡರು ಮದ್ದೂರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದರು.
“ಗೆಜ್ಜಲಗೆರೆಯು ಈಗಾಗಲೇ ನಗರದ ಸ್ವರೂಪ ಪಡೆದುಕೊಂಡಿದ್ದು, ಕೆಎಂಎಫ್ ಡೈರಿ ಮತ್ತು ವಿವಿಧ ಕೈಗಾರಿಕೆಗಳಿಂದಾಗಿ ಸಾವಿರಾರು ಜನರಿಗೆ ಉದ್ಯೋಗ ನೀಡುತ್ತಿದೆ. ಇದನ್ನು ನಗರಸಭೆಗೆ ಸೇರಿಸುವುದರಿಂದ ಸರ್ಕಾರದಿಂದ ಹೆಚ್ಚಿನ ಅನುದಾನ ಲಭ್ಯವಾಗಿ ಮೂಲಸೌಕರ್ಯಗಳು ಮತ್ತಷ್ಟು ಅಭಿವೃದ್ಧಿಯಾಗಲಿವೆ” ವಾದಿಸಿದರು.
“ಒಂದು ಪ್ರದೇಶದಲ್ಲಿ ಇರುವ ಜನಸಂಖ್ಯೆ ಮತ್ತು ಆದಾಯದ ಆಧಾರದ ಮೇಲೆ ಅದನ್ನು ನಗರಸಭೆಗೆ ಸೇರಿಸುವ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಗೆಜ್ಜಲಗೆರೆಯು ಈ ಎಲ್ಲ ಮಾನದಂಡಗಳನ್ನು ಪೂರೈಸಿದೆ” ಎಂದು ಮುಖಂಡರು ಸ್ಪಷ್ಟಪಡಿಸಿದರು.
“ಗೆಜ್ಜಲಗೆರೆಯ ಕೆಲವು ನಿವಾಸಿಗಳು ನಡೆಸುತ್ತಿರುವ ಪ್ರತಿಭಟನೆಯು ರಾಜಕೀಯ ಪ್ರೇರಿತವಾಗಿದೆ. ಅಭಿವೃದ್ಧಿಯನ್ನು ಸಹಿಸದ ಕೆಲವರು ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ” ಎಂದು ಟೀಕಿಸಿದರು.
ಈ ಹಿಂದೆ ಮಾಜಿ ಮುಖ್ಯಮಂತ್ರಿಗಳಾದ ಎಸ್ ಎಂ ಕೃಷ್ಣ ಮತ್ತು ಎಚ್ ಡಿ ಕುಮಾರಸ್ವಾಮಿಯವರ ಅವಧಿಯಲ್ಲಿ ನಡೆದ ಅಭಿವೃದ್ಧಿ ಕೆಲಸಗಳನ್ನು ಸ್ಮರಿಸಿದ ಮುಖಂಡರು, ಮದ್ದೂರನ್ನು ದೊಡ್ಡ ಮಟ್ಟದ ನಗರವನ್ನಾಗಿ ರೂಪಿಸುವ ನಿಟ್ಟಿನಲ್ಲಿ ಈ ಸೇರ್ಪಡೆ ಅತಿ ಅಗತ್ಯವಾಗಿದೆ ಎಂದು ಒತ್ತಿ ಹೇಳಿದರು.
ಈ ಸುದ್ದಿ ಓದಿದ್ದೀರಾ? ಕಾರವಾರ | ಶ್ವಾನ ಪ್ರದರ್ಶನಕ್ಕೆ ಪ್ರಾಣಿ ಪ್ರಿಯರು ಫಿದಾ: 118 ಶ್ವಾನಗಳ ಕೌಶಲ್ಯ ಕಂಡು ಜನ ಮಂತ್ರಮುಗ್ಧ
ಈ ಸುದ್ದಿಗೋಷ್ಠಿಯಲ್ಲಿ ರವಿಶಂಕರ್ ಚಾಮನಹಳ್ಳಿ, ಎಸ್ ಸಿ ಎಸ್ ಟಿ ಅಧ್ಯಕ್ಷ ಮಹಾದೇವಯ್ಯ, ಪ್ರಧಾನ ಕಾರ್ಯದರ್ಶಿ ತಿಪ್ಪೂರು ಮನು, ಪ್ರಚಾರ ಸಮಿತಿ ಅಧ್ಯಕ್ಷ ನಿತಿನ್‌ಗೌಡ, ಹುಲಿಗೆರೆಪುರ ರವಿ, ರಾಜೇಗೌಡ ಅಪ್ಪಾಜಿ, ಬಸವರಾಜ ಅಜ್ಜಹಳ್ಳಿ, ಮನು ಅಜ್ಜಹಳ್ಳಿ, ನಗರಕೆರೆ ಪುಟ್ಟೇಗೌಡ, ಯಡಗನಹಳ್ಳಿ ಮಹಾಲಿಂಗ, ಹರವನಳ್ಳಿ ಸಿದ್ದರಾಜು, ವಕೀಲರಾದ ಕೊಪ್ಪ ದೇವರಾಜು, ಅಲೋಕ್ ವಳಗೆರೆಹಳ್ಳಿ, ಅಶೋಕ್ ಚಾಮನಹಳ್ಳಿ, ಶಿವರಾಜ್ ಮದ್ದೂರು, ಪಣ್ಣೆದೊಡ್ಡಿ ರಾಜೇಶ್, ಆಲೂರ್ ಕುಮಾರ್ ಇನ್ನೂ ಮುಂತಾದ ಯುವ ಕಾಂಗ್ರೆಸ್ ಮುಖಂಡರು ಇದ್ದರು.





