ಪ್ರಪಂಚದ ಯಾವುದೇ ಕ್ಷೇತ್ರದಲ್ಲಿಯೂ ಹಣ, ಅಂತಸ್ತು ಸಂಪಾದನೆಗಿಂತ ಜ್ಞಾನ ಸಂಪಾದನೆ ಅತಿ ಮುಖ್ಯವಾದದ್ದು. ಹೀಗಾಗಿ ಈಗಿನ ವಿದ್ಯಮಾನಗಳಲ್ಲಿ ವಿದ್ಯಾರ್ಥಿಗಳು ಮೊಬೈಲ್ ಬಳಕೆಯ ಗೀಳಿಗೆ ಬಿದ್ದು ಪುಸ್ತಕಗಳನ್ನು ಓದುವುದನ್ನು ಕಡೆಗಣಿಸಬಾರದು ಎಂದು ‘ಪುಸ್ತಕದ ಮನೆ’ ಖ್ಯಾತಿಯ ಎಂ. ಅಂಕೆಗೌಡ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಪಾಂಡವಪುರ ತಾಲೂಕಿನ ಹರಳಹಳ್ಳಿ ಗ್ರಾಮದಲ್ಲಿರುವ ‘ಪುಸ್ತಕದ ಮನೆ’ಯಲ್ಲಿ ಮೈಸೂರಿನ ಶಾರದಾ ವಿಲಾಸ ಕಾನೂನು ಕಾಲೇಜಿನ ವಿದ್ಯಾರ್ಥಿ ಗಳೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಮೊಬೈಲ್‌ನಿಂದ ಆಗುವಷ್ಟು ಅನುಕೂಲ ಜಗತ್ತಲ್ಲಿ ಯಾವುದರಿಂದಲೂ ಆಗುವುದಿಲ್ಲ. ಆದರೆ ಅದನ್ನು ಯಾವ ಸಮಯಕ್ಕೆ, ಎಷ್ಟು ಬಳಸಬೇಕೋ ಅಷ್ಟು ಮಾತ್ರ ಬಳಸಬೇಕು. 24 ಗಂಟೆಯೂ ಮೊಬೈಲ್‌ನಲ್ಲಿ ಚಿತ್ರಗೀತೆಗಳನ್ನು ಹಾಕಿಕೊಂಡು ಕುಣಿಯುವುದರಿಂದ ನಮಗೆ ಯಾವುದೇ ಪ್ರಯೋಜನವಿಲ್ಲ. ಮನರಂಜನೆಗಾಗಿ ಹತ್ತು ನಿಮಿಷ ಬಳಸಿದರೆ ಸಾಕು. ಸಕ್ಕರೆ ಬಹಳ ಸಿಹಿಯಾಗಿದೆ ಎಂದು ಬರೀ ಸಕ್ಕರೆಯನ್ನೇ ತಿಂದರೆ ಬದುಕಲು ಸಾಧ್ಯವೇ?” ಎಂದು ಮಾರ್ಮಿಕವಾಗಿ ಪ್ರಶ್ನಿಸಿದರು.
ಮುಂದುವರಿದು, “ಮೊಬೈಲ್ ಅನ್ನು ಸರಿಯಾದ ಮಾರ್ಗದಲ್ಲಿ ಬಳಸಿಕೊಂಡರೆ ಐಎಎಸ್, ಕೆಎಎಸ್ ನಂತಹ ಕಠಿಣ ಪರೀಕ್ಷೆಗಳನ್ನೂ ಪಾಸ್ ಮಾಡಬಹುದು. ಆ ಕ್ಷೇತ್ರದಲ್ಲಿ ಬಳಸಿಕೊಳ್ಳುವುದನ್ನು ಬಿಟ್ಟು, ಮೊಬೈಲ್-ಟಿವಿಗಳಲ್ಲಿ ಕುಣಿಯುವವರನ್ನು ನೋಡಿ ನಾವೂ ಕುಣಿಯುವುದು ಅರ್ಥಹೀನ. ಯಾವುದನ್ನು ಎಷ್ಟು ಬೇಕೋ ಅಷ್ಟು ಮಾತ್ರ ಬಳಸಿಕೊಂಡರೆ ಒಳಿತು, ಮಿತಿ ಮೀರಿದರೆ ತೊಂದರೆ ಕಟ್ಟಿಟ್ಟ ಬುತ್ತಿ. ವಿದ್ಯಾರ್ಥಿಗಳು ಸಮಯದ ಮಹತ್ವವನ್ನು ಅರಿತು ಓದುವುದರಲ್ಲಿ ತೊಡಗಿಸಿಕೊಳ್ಳಬೇಕು. ಜ್ಞಾನಾರ್ಜನೆಗೆ ಹೆಚ್ಚಿನ ಒತ್ತು ನೀಡುವುದರ ಜೊತೆಗೆ, ವಿದ್ಯಾರ್ಥಿ ದೆಸೆಯಿಂದಲೇ ಶಿಸ್ತಿನ ಜೀವನವನ್ನು ರೂಢಿಸಿಕೊಳ್ಳಬೇಕು” ಎಂದು ಸಲಹೆ ನೀಡಿದರು.
ಇದನ್ನೂ ಓದಿ: ಮಂಡ್ಯ | ಪ್ರೇಮ ವಿವಾಹ; ಯುವಕನ ಮನೆಗೆ ಬೆಂಕಿ ಹಚ್ಚಿದ ಯುವತಿ ತಂದೆ
ಈ ಅರ್ಥಪೂರ್ಣ ಸಂವಾದ ಕಾರ್ಯಕ್ರಮದಲ್ಲಿ ಆಚೀವರ್ಸ್ ಅಕಾಡೆಮಿಯ ಅಧ್ಯಕ್ಷ ಡಾ. ರಾಘವೇಂದ್ರ, ಸಮರ್ಪಣಾ ಟ್ರಸ್ಟ್ ಅಧ್ಯಕ್ಷರಾದ ಕೆ ಎಸ್ ಜಯಶಂಕರ್, ಕಡತನಾಳು ಕೃಷ್ಣಕುಮಾರ್ ಹಾಗೂ ಶಾರದಾ ವಿಲಾಸ ಕಾಲೇಜಿನ ಕಾನೂನು ವಿದ್ಯಾರ್ಥಿಗಳು ಭಾಗವಹಿಸಿದ್ದರು.





