ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಗೊರವನಹಳ್ಳಿ ಗ್ರಾಮ ಪಂಚಾಯಿತಿಯನ್ನು ನಗರಸಭೆಗೆ ಸೇರ್ಪಡೆ ಮಾಡುವುದನ್ನು ವಿರೋಧಿಸಿ ಕಳೆದ 66 ದಿನಗಳಿಂದ ನಡೆಯುತ್ತಿದ್ದ ಅಹೋರಾತ್ರಿ ಧರಣಿ ಸ್ಥಳಕ್ಕೆ ದಿಢೀರ್ ನುಗ್ಗಿದ ಪೊಲೀಸರು ಹಾಗೂ ಅಧಿಕಾರಿಗಳ ತಂಡ, ಗ್ರಾಮಸ್ಥರ ತೀವ್ರ ವಿರೋಧದ ನಡುವೆಯೂ ಪಂಚಾಯಿತಿಯ ಮಹತ್ವದ ದಾಖಲೆಗಳನ್ನು ಮೂಟೆಗಳಲ್ಲಿ ತುಂಬಿಕೊಂಡು ಬಲವಂತವಾಗಿ ಕೊಂಡೊಯ್ದಿರುವ ಘಟನೆ ನಡೆದಿದೆ. ಪೊಲೀಸ್ ಇಲಾಖೆಯ ಈ ದೌರ್ಜನ್ಯವನ್ನು ಖಂಡಿಸಿರುವ ಮುಖಂಡರು, ಇದೊಂದು ರಾಜಕೀಯ ಪ್ರೇರಿತ ಕೃತ್ಯ ಹಾಗೂ ಮದ್ದೂರು ತಾಲೂಕಿಗೆ ಅಂಟಿದ ಕಪ್ಪುಚುಕ್ಕೆ ಎಂದು ಕಿಡಿಕಾರಿದ್ದಾರೆ.
ಗೊರವನಹಳ್ಳಿಯಲ್ಲಿ ಹೈಡ್ರಾಮಾವೇ ನಡೆದಿದ್ದು, ಭಾರೀ ಪೊಲೀಸ್ ಬಂದೋಬಸ್ತ್‌ನಲ್ಲಿ ಬಂದ ಅಧಿಕಾರಿಗಳು ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿದ್ದ ಕಡತಗಳು ಹಾಗೂ ಪ್ರಮುಖ ದಾಖಲಾತಿಗಳನ್ನು ದೊಡ್ಡ ಬಿಳಿ ಮೂಟೆ (ಚೀಲ) ಗಳಲ್ಲಿ ತುಂಬಿಕೊಂಡು ಹೊರಬಂದಿದ್ದಾರೆ. ಇದನ್ನು ಕಂಡು ರೊಚ್ಚಿಗೆದ್ದ ಗ್ರಾಮಸ್ಥರು ಅಧಿಕಾರಿಗಳಿಗೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ. “ನ್ಯಾಯಾಲಯದಲ್ಲಿ ಪ್ರಕರಣ ಇರುವಾಗ ಕಳ್ಳರ ಹಾಗೆ ದಾಖಲೆಗಳನ್ನು ಏಕೆ ತೆಗೆದುಕೊಂಡು ಹೋಗುತ್ತಿದ್ದೀರಿ? ಇದು ಗೂಂಡಾ ರಾಜಕಾರಣ” ಎಂದು ಘೋಷಣೆ ಕೂಗುತ್ತಾ ಪೊಲೀಸರೊಂದಿಗೆ ತೀವ್ರ ವಾಗ್ವಾದ ನಡೆಸಿದ್ದಾರೆ.
ಆದರೆ, ನೂರಾರು ಸಂಖ್ಯೆಯಲ್ಲಿದ್ದ ಪೊಲೀಸರು ಪ್ರತಿಭಟನಾಕಾರರನ್ನು ಬಲವಂತವಾಗಿ ತಡೆದು ನಿಲ್ಲಿಸಿ, ದಾಖಲೆಗಳಿದ್ದ ಮೂಟೆಗಳನ್ನು ತಮ್ಮ ವಾಹನಗಳ(ಕಾರು/ಜೀಪ್) ಡಿಕ್ಕಿಗೆ ತುಂಬಿಕೊಂಡು ಪೊಲೀಸ್ ಬೆಂಗಾವಲಿನೊಂದಿಗೆ ಅಲ್ಲಿಂದ ಪರಾರಿಯಾಗಿದ್ದಾರೆ. ಈ ಹಿಂದೆ ಕೂಡ ಎರಡು ಬಾರಿ ಅಧಿಕಾರಿಗಳು ದಾಖಲೆಗಳನ್ನು ತೆಗೆದುಕೊಂಡು ಹೋಗುವ ಪ್ರಯತ್ನ ಮಾಡಿದ್ದರು, ಆಗ ಗ್ರಾಮಸ್ಥರು ಆ ಪ್ರಯತ್ನವನ್ನು ತಡೆದು ಯಶಸ್ವಿಯಾಗಿದ್ದರು. ಆದರೆ ಈ ಬಾರಿ ಹತ್ತಕ್ಕೂ ಹೆಚ್ಚು ಜೀಪ್ ಹಾಗೂ ಡಿಎಆರ್(DAR) ತುಕಡಿಗಳನ್ನು ಬಳಸಿಕೊಂಡು ಹತ್ತಿಕ್ಕಲಾಗಿದೆ.
ಶನಿವಾರ ಮಧ್ಯಾಹ್ನ 3:30ರಿಂದ 4ರ ಸುಮಾರಿಗೆ, ಧರಣಿ ಸ್ಥಳದಲ್ಲಿ ಜನರ ಸಂಖ್ಯೆ ಕಡಿಮೆಯಿದ್ದ ಸಮಯವನ್ನು ನೋಡಿಕೊಂಡು ಈ ದಿಢೀರ್ ಕಾರ್ಯಾಚರಣೆ ನಡೆಸಲಾಗಿದೆ. ರಕ್ಷಣೆ ಕೊಡಬೇಕಾದ ಇಲಾಖೆಯೇ ದೌರ್ಜನ್ಯ ನಡೆಸಿದೆ. ಮಹಿಳೆಯರು, ಯುವಕರು ಎನ್ನದೆ ಎಳೆದಾಡಿ, ತಳ್ಳಾಡಿದ್ದಾರೆ. ಹೋರಾಟದ ಮುಂಚೂಣಿಯಲ್ಲಿದ್ದ ಮುಖಂಡರಾದ ಮಹೇಶ್, ಅಶೋಕ್ ಹಾಗೂ ಪುಟ್ಟಸ್ವಾಮಿ ಎಂಬುವವರನ್ನು ಪೊಲೀಸರು ಬಲವಂತವಾಗಿ ವ್ಯಾನ್‌ಗೆ ತುಂಬಿಕೊಂಡು ಕರೆದೊಯ್ದಿದ್ದಾರೆ ಎಂದು ಪ್ರತ್ಯಕ್ಷ ದರ್ಶಿಗಳು ಗಂಭೀರ ಆರೋಪ ಮಾಡಿದ್ದಾರೆ.
ಗೊರವನಹಳ್ಳಿ, ಗೆಜ್ಜಲಗೆರೆ, ಸೋಮನಹಳ್ಳಿ, ಚಾಮನಹಳ್ಳಿ ಗ್ರಾಮ ಪಂಚಾಯಿತಿಗಳನ್ನು ಮದ್ದೂರು ನಗರಸಭೆಗೆ ಸೇರಿಸಲು ಆಡಳಿತ ನಿರ್ಧರಿಸಿತ್ತು. ಆದರೆ, ಗ್ರಾಮಸ್ಥರು ನಗರಸಭೆ ವ್ಯಾಪ್ತಿಗೆ ಸೇರಲು ನಿರಾಕರಿಸಿ, ಗ್ರಾಮ ಪಂಚಾಯಿತಿಯಾಗಿಯೇ ಮುಂದುವರೆಯಬೇಕು ಎಂದು ಪಟ್ಟುಹಿಡಿದಿದ್ದರು. ಈ ಸಂಬಂಧ ನ್ಯಾಯಾಲಯದಲ್ಲಿ ದಾವೆ ಹೂಡಲಾಗಿದ್ದು, ಜತೆಗೆ ಸತತ 66 ದಿನಗಳಿಂದ ಶಾಂತಿಯುತವಾಗಿ ಧರಣಿ, ಅಹೋರಾತ್ರಿ ಉಪವಾಸ ಸತ್ಯಾಗ್ರಹ ನಡೆಸಲಾಗುತ್ತಿತ್ತು.
ಘಟನೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸ್ಥಳೀಯ ಹಿರಿಯ ಮುಖಂಡರು, “ಒಂದು ಸಣ್ಣ ವಿಚಾರಕ್ಕೆ 100-200 ಜನ ಪೊಲೀಸರು, ಡಿಎಆರ್ ವ್ಯಾನ್‌ಗಳನ್ನು ತೆಗೆದುಕೊಂಡು ಹಳ್ಳಿಗಳಿಗೆ ನುಗ್ಗಿರುವುದು ಹಿಂದೆಂದೂ ನಡೆದಿರಲಿಲ್ಲ. ದೊಡ್ಡ ಗಲಾಟೆಗಳಾದಾಗಲೂ ಇಷ್ಟು ಜನ ಹೋಗಿರಲಿಲ್ಲ. ಇದು ಮದ್ದೂರು ತಾಲೂಕಿಗೆ ಒಂದು ಕಪ್ಪುಚುಕ್ಕೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿದ್ದೀರಾ? ಸಿಲಿಂಡರ್ ಸಿಗುತ್ತಿಲ್ಲ- ಪರ್ಯಾಯ ಮಾರ್ಗಗಳೇನು? ಇಲ್ಲಿದೆ ನೋಡಿ…
”ಈ ಪ್ರಕರಣ ಈಗಾಗಲೇ ನ್ಯಾಯಾಲಯದಲ್ಲಿದೆ. ಕೋರ್ಟ್ ತೀರ್ಪು ಬರುವವರೆಗೆ ಕಾಯುವುದರಲ್ಲಿ ಏನಾಗುತ್ತಿತ್ತು? ನ್ಯಾಯಾಲಯದ ತೀರ್ಪು ಬರುವವರೆಗೆ ಕಾಯಬೇಕು. ಕೋರ್ಟ್ ಯಾವುದೇ ತೀರ್ಪು ನೀಡಿದರೂ ನಾವೆಲ್ಲ ಅದಕ್ಕೆ ತಲೆಬಾಗುತ್ತೇವೆ. ಆದರೆ ಈ ರೀತಿ ಕಾನೂನು ಮೀರಿ ವರ್ತಿಸಿದರೆ ಜನರು ಸುಮ್ಮನಿರುವುದಿಲ್ಲ” ಎಂದು ಎಚ್ಚರಿಕೆ ನೀಡಿದರು.
ಬಂಧಿತರಾಗಿರುವ ಎಲ್ಲಾ ಮುಖಂಡರು ಮತ್ತು ಯುವಕರನ್ನು ತಕ್ಷಣವೇ ಬಿಡುಗಡೆ ಮಾಡಿ ಇದೇ ಧರಣಿ ಸ್ಥಳಕ್ಕೆ ತಂದು ಬಿಡಬೇಕು. ಅಧಿಕಾರಿಗಳು ಬಲವಂತವಾಗಿ ಕದ್ದೊಯ್ದಿರುವ ಗ್ರಾಮ ಪಂಚಾಯಿತಿ ದಾಖಲೆಗಳನ್ನು ಕೂಡಲೇ ವಾಪಸ್ ತಂದಿಡಬೇಕು. ಬಲವಂತದ ನಗರಸಭೆ ಸೇರ್ಪಡೆ ಕೈಬಿಟ್ಟು, ಗ್ರಾಮ ಪಂಚಾಯಿತಿಯನ್ನಾಗಿ ಉಳಿಸಬೇಕು. ಬಂಧಿತರನ್ನು ಬಿಡುಗಡೆ ಮಾಡಿ, ಕಡತಗಳನ್ನು ವಾಪಸ್ ತರುವವರೆಗೂ ನಾವು ಜಾಗ ಬಿಟ್ಟು ಕದಲುವುದಿಲ್ಲ ಎಂದು ಪಟ್ಟು ಹಿಡಿದಿರುವ ಗ್ರಾಮಸ್ಥರು, ಮುಂದಿನ ಕಾನೂನು ಹೋರಾಟ ಹಾಗೂ ತೀವ್ರ ಸ್ವರೂಪದ ಪ್ರತಿಭಟನೆಯ ರೂಪುರೇಷೆ ಸಿದ್ಧಪಡಿಸಲು ನಿರ್ಧರಿಸಿದ್ದಾರೆ.





