ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ(EO) ಶ್ರೀನಿವಾಸ್ ಅವರು ಕೆಆರ್‌ಎಸ್ ಪಕ್ಷದ ಜಿಲ್ಲಾ ಉಪಾಧ್ಯಕ್ಷ ಮಲ್ಲೇಶ್ ಅವರಿಗೆ ಫೋನ್ ಮೂಲಕ ಬೆದರಿಕೆ ಹಾಕಿದ್ದಾರೆಂಬ ಆರೋಪ ಕೇಳಿಬಂದಿದ್ದು, ಈ ಸಂಬಂಧ ಅಧಿಕಾರಿಯನ್ನು ಅಮಾನತುಗೊಳಿಸುವಂತೆ ಅಪರ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಸಿಇಒ ಅವರಿಗೆ ಅಧಿಕೃತವಾಗಿ ದೂರು ನೀಡಲಾಗಿದೆ.
ಇತ್ತೀಚೆಗೆ ಮಳವಳ್ಳಿ ತಾಲೂಕಿನ ಹಲವು ಕಚೇರಿಗಳಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಮತ್ತು ಕರ್ತವ್ಯ ಲೋಪದ ಬಗ್ಗೆ ಕೆಆರ್‌ಎಸ್ ಪಕ್ಷದ ಕಾರ್ಯಕರ್ತರು ಪ್ರಶ್ನಿಸುತ್ತಿದ್ದರು. ಇದನ್ನೇ ನೆಪವಾಗಿಟ್ಟುಕೊಂಡ ಇಒ ಶ್ರೀನಿವಾಸ್, ಮಲ್ಲೇಶ್ ಅವರಿಗೆ ಕರೆ ಮಾಡಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಲಭ್ಯವಿರುವ ಆಡಿಯೋ ಸಂಭಾಷಣೆಯಲ್ಲಿ ಇಒ, ʼಪೊಲೀಸ್ ಇಲಾಖೆಯಿಂದ(DG & IGP) ಆದೇಶ ಬಂದಿದೆ. ಇನ್ನು ಮುಂದೆ ಕಚೇರಿಗೆ ಬಂದು ದಾಂಧಲೆ ಮಾಡಿದರೆ ಮೊದಲ ಎಫ್‌ಐಆರ್(FIR) ನಿಮ್ಮ ಮೇಲೆಯೇ ದಾಖಲಿಸುತ್ತೇನೆʼ ಎಂದು ಎಚ್ಚರಿಕೆ ನೀಡಿರುವುದು ಕೇಳಿಬಂದಿದೆ.

ಬೆಂಗಳೂರು ಪೊಲೀಸ್ ಆಯುಕ್ತರ ಕಚೇರಿಯಿಂದ ರಾಮನಗರ ಜಿಲ್ಲೆಗೆ ಸಂಬಂಧಿಸಿದಂತೆ ಹೊರಡಿಸಲಾದ ಕೇವಲ ಒಂದು ಜ್ಞಾಪನಾ ಪತ್ರವನ್ನು ಇಡೀ ರಾಜ್ಯಕ್ಕೆ ಅನ್ವಯವಾಗುವ ಆದೇಶವೆಂದು ಬಿಂಬಿಸಿ ಅಧಿಕಾರಿಗಳು ಸಾರ್ವಜನಿಕರನ್ನು ಭಯಭೀತಿಗೊಳಿಸುತ್ತಿದ್ದಾರೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
“ಕಚೇರಿಗೆ ಬರುವ ಸಾರ್ವಜನಿಕರನ್ನು ಮತ್ತು ಪ್ರಶ್ನಿಸುವವರನ್ನು ‘ಧಾಂದಲೆ ಮಾಡುವವರು’ ಎಂದು ಕರೆದು ಅಧಿಕಾರಿಯು ಅಸಡ್ಡೆಯಿಂದ ಮಾತನಾಡಿದ್ದಾರೆ. ಸಾರ್ವಜನಿಕ ಸೇವಕರಾಗಿ ಜನರ ಸಮಸ್ಯೆ ಆಲಿಸಬೇಕಾದ ಅಧಿಕಾರಿ, ಈ ರೀತಿ ರಾಜಕೀಯ ಪಕ್ಷದ ಮುಖಂಡರಿಗೆ ಬೆದರಿಕೆ ಹಾಕಿರುವುದು ಕಾನೂನುಬಾಹಿರ. ಆದ್ದರಿಂದ ಅವರನ್ನು ಕೂಡಲೇ ಸೇವೆಯಿಂದ ಅಮಾನತುಗೊಳಿಸಿ ಇಲಾಖಾ ತನಿಖೆ ನಡೆಸಬೇಕು” ಎಂದು ಮಲ್ಲೇಶ್ ಆಗ್ರಹಿಸಿದ್ದಾರೆ.
“ಸರ್ಕಾರಿ ಕಚೇರಿಗಳಲ್ಲಿ ಆಗುತ್ತಿರುವ ಲೋಪದೋಷಗಳನ್ನು ಪ್ರಶ್ನಿಸುವುದು ನಾಗರಿಕರ ಹಕ್ಕು. ಆದರೆ, ಅಧಿಕಾರಿಗಳು ಪೊಲೀಸ್ ಇಲಾಖೆಯ ಹೆಸರಿನಲ್ಲಿ ಇಂತಹ ಜ್ಞಾಪನಾ ಪತ್ರಗಳನ್ನು ಮುಂದಿಟ್ಟುಕೊಂಡು ಜನರ ಧ್ವನಿಯನ್ನು ಅಡಗಿಸಲು ಯತ್ನಿಸುತ್ತಿರುವುದು ಪ್ರಜಾಪ್ರಭುತ್ವಕ್ಕೆ ಮಾರಕ ಎಂಬ ಆಕ್ರೋಶ ವ್ಯಕ್ತವಾಗಿದೆ. ಈ ಬಗ್ಗೆ ಮಂಡ್ಯ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು ಯಾವ ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಹುಬ್ಬಳ್ಳಿ | ಮನೆಗಳ ಹಂಚಿಕೆ ಕಾರ್ಯಕ್ರಮ; ಕಟೌಟ್ ಬಿದ್ದು ನಾಲ್ವರಿಗೆ ಗಾಯ
ಈ ಸಂದರ್ಭದಲ್ಲಿ ಮಂಡ್ಯ ಜಿಲ್ಲಾಧ್ಯಕ್ಷ ಡಿ ಜಿ ನಾಗರಾಜ್, ಜಿಲ್ಲಾ ಉಪಾಧ್ಯಕ್ಷ ಮಲ್ಲೇಶ ಹೆಬ್ಬಕವಾಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಂದ್ರು ಕಿಲಾರ, ಜಿಲ್ಲಾ ಕಾರ್ಯದರ್ಶಿ ಯೋಗೇಶ್ ಪಾಂಡವಪುರ, ಅಧ್ಯಕ್ಷ ಶಾಂತಿ ಪ್ರಸಾದ್, ಕೆ ಆರ್ ಪೇಟೆಯ ಕಾರ್ಯದರ್ಶಿ ಶಂಕರ್ ನಾಗ್, ಮಂಡ್ಯ ಕಾರ್ಯದರ್ಶಿ ಮಲ್ಲಯ್ಯ ಮತ್ತು ಶಂಕರೇಗೌಡ ಸೇರಿದಂತೆ ಪದಾಧಿಕಾರಿಗಳು ಇದ್ದರು.





