ಮದ್ದೂರು ಪಟ್ಟಣದಲ್ಲಿ ಪಾದಚಾರಿ ಮಾರ್ಗದ ಒತ್ತುವರಿ ತೆರವುಗೊಳಿಸುವ ಹೆಸರಿನಲ್ಲಿ ನಗರಸಭೆಯು ಪರಿಸರಕ್ಕೆ ಮಾರಕವಾಗುವಂತೆ ವರ್ತಿಸಿದೆ. ಜನವರಿ 8 ರಂದು ನಡೆದ ಕಾರ್ಯಾಚರಣೆಯ ವೇಳೆ ಸಿಬ್ಬಂದಿ ಜೆಸಿಬಿ ಬಳಸಿ ಅನ್ಯಾಯವಾಗಿ ಮರವೊಂದನ್ನು ಬುಡಮೇಲು ಮಾಡಿದ್ದು, ಈ ಕೃತ್ಯ ಸ್ಥಳೀಯರ ಮತ್ತು ಪರಿಸರ ಪ್ರೇಮಿಗಳ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ನಗರಸಭೆಯ ವತಿಯಿಂದ ಗುರುವಾರ ಹಮ್ಮಿಕೊಳ್ಳಲಾಗಿದ್ದ ಒತ್ತುವರಿ ತೆರವು ಕಾರ್ಯಾಚರಣೆಯ ಸಂದರ್ಭದಲ್ಲಿ ರಸ್ತೆ ಬದಿಯಲ್ಲಿದ್ದ ಮರಗಳನ್ನು ಸಂರಕ್ಷಿಸುವ ಕಾಳಜಿ ತೋರಬೇಕಿತ್ತು. ಆದರೆ, ಅದನ್ನು ಬಿಟ್ಟು ಜೆಸಿಬಿ ಯಂತ್ರದ ಮೂಲಕ ಮರವನ್ನು ಉರುಳಿಸಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಗಿಡ ನೆಟ್ಟು ಪರಿಸರ ಬೆಳೆಸಬೇಕಾದ ಸ್ಥಳೀಯ ಆಡಳಿತವೇ ಈ ರೀತಿ ಹಸಿರು ನಾಶಕ್ಕೆ ಮುಂದಾಗಿರುವುದು ದೊಡ್ಡ ದುರಂತ ಎಂದು ಸಾರ್ವಜನಿಕರು ದೂರಿದ್ದಾರೆ.
ಈ ಘಟನೆಯನ್ನು ರಾಜ್ಯ ತೆಂಗು ಬೆಳೆಗಾರರ ಸಂಘದ ಅಧ್ಯಕ್ಷ ಚೆನ್ನಸಂದ್ರ ಲಕ್ಷ್ಮಣ್ ತೀವ್ರವಾಗಿ ಖಂಡಿಸಿದ್ದಾರೆ. “ಒತ್ತುವರಿ ತೆರವಿನ ನೆಪದಲ್ಲಿ ಮದ್ದೂರು ಪಟ್ಟಣದ ಸೌಂದರ್ಯ ಹೆಚ್ಚಿಸುತ್ತಿದ್ದ ಮರಗಳನ್ನು ಉರುಳಿಸಿರುವುದು ಅಕ್ಷಮ್ಯ ಅಪರಾಧ. ಪರಿಸರ ರಕ್ಷಿಸಬೇಕಾದ ಅಧಿಕಾರಿಗಳೇ ಮರಗಳನ್ನು ಸಾಯಿಸುತ್ತಿರುವುದು ಖೇದಕರ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಕೂಡಲೇ ಅರಣ್ಯ ಇಲಾಖೆಯು ಮರ ಕಡಿಯಲು ಆದೇಶ ನೀಡಿದ ನಗರಸಭೆಯ ಅಧಿಕಾರಿಗಳ ಮೇಲೆ ಎಫ್‌ಐಆರ್ (FIR) ದಾಖಲಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಅವರು ಒತ್ತಾಯಿಸಿದರು.
ಈ ವಿಚಾರವಾಗಿ ನಗರಸಭೆ ಆಯುಕ್ತೆ ರಾಧಿಕಾ ಅವರನ್ನು ಪ್ರಶ್ನಿಸಿದಾಗ, “ಮರ ಕಡಿದಿರುವ ಬಗ್ಗೆ ಸದ್ಯಕ್ಕೆ ಮಾಹಿತಿ ಇಲ್ಲ, ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗುವುದು” ಎಂಬ ಹಾರಿಕೆಯ ಉತ್ತರ ನೀಡಿದ್ದಾರೆ. ಈ ಬೇಜವಾಬ್ದಾರಿ ಹೇಳಿಕೆಯು ಪರಿಸರ ಕಾಳಜಿಯುಳ್ಳ ನಾಗರಿಕರ ಕೋಪವನ್ನು ಮತ್ತಷ್ಟು ಹೆಚ್ಚಿಸಿದೆ.
ಇದನ್ನೂ ಓದಿ: ಮದ್ದೂರು | ವಿಶ್ವಮಾನವ ಎಕ್ಸ್‌ಪ್ರೆಸ್ ಸಮಯ ಬದಲಾವಣೆ: ರೈಲು ಪ್ರಯಾಣಿಕರಿಗೆ ಸಂಕಷ್ಟ, ಆಕ್ರೋಶ
ಕರ್ನಾಟಕ ವೃಕ್ಷ ಸಂರಕ್ಷಣಾ ಕಾಯಿದೆ 1976ರ ಪ್ರಕಾರ, ಯಾವುದೇ ಮರವನ್ನು ಕಡಿಯುವ ಮೊದಲು ಅರಣ್ಯ ಇಲಾಖೆಯಿಂದ ಕಡ್ಡಾಯವಾಗಿ ಲಿಖಿತ ಅನುಮತಿ ಪಡೆಯಬೇಕು. ನಗರಸಭೆಯಾಗಲಿ ಇಲ್ಲವೇ ಯಾವುದೇ ಸರ್ಕಾರಿ ಸಂಸ್ಥೆಯಾಗಲಿ ಈ ನಿಯಮವನ್ನು ಪಾಲಿಸುವುದು ಕಡ್ಡಾಯ. ಅನುಮತಿ ಇಲ್ಲದೆ ಮರ ಕಡಿಯುವುದು ಶಿಕ್ಷಾರ್ಹ ಅಪರಾಧವಾಗಿದ್ದು, ದಂಡ ಅಥವಾ ಜೈಲು ಶಿಕ್ಷೆಗೆ ಅವಕಾಶವಿದೆ.
”ಒಂದು ಮರವನ್ನು ಅನಿವಾರ್ಯವಾಗಿ ತೆಗೆಯಲೇಬೇಕಾದ ಸಂದರ್ಭ ಬಂದರೆ, ಅದರ ಬದಲಾಗಿ ಕನಿಷ್ಠ 10 ಗಿಡಗಳನ್ನು ನೆಟ್ಟು ಬೆಳೆಸಬೇಕು ಎಂಬ ನಿಯಮವಿದೆ. ಅಧಿಕಾರಿಗಳೇ ಕಾನೂನು ಉಲ್ಲಂಘಿಸಿರುವುದರಿಂದ ನಾವು ಇದರ ವಿರುದ್ಧ ನ್ಯಾಯಾಂಗ ಹೋರಾಟ ನಡೆಸಬೇಕಾಗುತ್ತದೆ” ಎಂದು ಚನ್ನಸಂದ್ರ ಲಕ್ಷ್ಮಣ್ ಎಚ್ಚರಿಕೆ ನೀಡಿದ್ದಾರೆ.





