ಮದ್ದೂರು ನಗರದಲ್ಲಿರುವ ಶ್ರೀ ವೆಂಕಟೇಶ್ವರ ಇಂಡೇನ್ ಗ್ಯಾಸ್(Sri Venkateshwara Indane Gas) ಏಜೆನ್ಸಿಯಲ್ಲಿ ಕಾರ್ಮಿಕ ಕಾನೂನುಗಳನ್ನು ಸ್ಪಷ್ಟವಾಗಿ ಉಲ್ಲಂಘಿಸಿರುವುದು ಬೆಳಕಿಗೆ ಬಂದಿದೆ. ಎಲ್‌ಪಿಜಿ(LPG) ವಿತರಣೆ ಮಾಡುವ ಈ ಸಂಸ್ಥೆಯಲ್ಲಿ ಒಟ್ಟು 13 ಮಂದಿ(10 ಪುರುಷರು ಮತ್ತು 3 ಮಹಿಳೆಯರು) ದುಡಿಯುತ್ತಿದ್ದಾರೆ. ಆದರೆ, ಇವರ ಬದುಕಿಗೆ ಕನಿಷ್ಠ ಭದ್ರತೆಯೂ ಇಲ್ಲದಂತಾಗಿದೆ.
ಕಾರ್ಮಿಕ ನಿರೀಕ್ಷಕರು ಸಂಸ್ಥೆಗೆ ಭೇಟಿ ನೀಡಿ ಹೋಗಿ ತಪಾಸಣೆ ನಡೆಸಿದ್ದರು. ಇಲ್ಲಿ ಅಗೆದಷ್ಟು ಆಳಕ್ಕೆ ಕಾಯಿದೆಯ ಉಲ್ಲಘನೆ ನಡೆದಿದೆ. ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ಕಾಯಿದೆ, ಕನಿಷ್ಠ ವೇತನ ಕಾಯ್ದೆ ಸೇರಿದಂತೆ ಪ್ರಮುಖ 5 ಕಾಯ್ದೆಗಳ ಅಡಿಯಲ್ಲಿ ಪರಿಶೀಲನೆ ನಡೆಸಲಾಗಿತ್ತು. ತಪಾಸಣೆಯ ವೇಳೆ ಹಲವಾರು ಗಂಭೀರ ಲೋಪಗಳು ಕಂಡುಬಂದಿದ್ದವು.
ಪತ್ತೆಯಾದ ಪ್ರಮುಖ ಕಾನೂನು ಬಾಹಿರ ಅಂಶಗಳು
ದಾಖಲೆಗಳಿಲ್ಲದ ದುಡಿಮೆ, ಇಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ನೇಮಕಾತಿ ಆದೇಶವನ್ನೇ(Appointment Order – ನಮೂನೆ 2) ನೀಡಿಲ್ಲ. ಅಂದರೆ, ಕಾನೂನಿನ ದೃಷ್ಟಿಯಲ್ಲಿ ಅವರು ಅಲ್ಲಿ ಕೆಲಸ ಮಾಡುತ್ತಿದ್ದಾರೆ ಎಂಬುದಕ್ಕೆ ದಾಖಲೆಯೇ ಇಲ್ಲ.

ನೋಂದಣಿ ನವೀಕರಣವಿಲ್ಲ, ಸಂಸ್ಥೆಯು ತನ್ನ ಅಧಿಕೃತ ನೋಂದಣಿಯನ್ನು 2024ರ ನಂತರ ನವೀಕರಿಸಿಲ್ಲ(Not Renewed). ಸರ್ಕಾರಿ ನಿಯಮಗಳ ಪ್ರಕಾರ ಇದೊಂದು ಗಂಭೀರ ಲೋಪ, ವೇತನದಲ್ಲಿ ಪಾರದರ್ಶಕತೆ ಇಲ್ಲ, ನೌಕರರಿಗೆ ಸಂಬಳ ನೀಡಿದ ಬಗ್ಗೆ ‘ವೇತನ ಚೀಟಿ’ (Wage Slip) ಕೊಡುತ್ತಿಲ್ಲ, ಸಂಬಳದ ಲೆಕ್ಕ ಬರೆಯುವ ರಿಜಿಸ್ಟರ್(Wage Register) ಮತ್ತು ಹಾಜರಾತಿ ಪುಸ್ತಕವನ್ನೂ ನಿರ್ವಹಿಸುತ್ತಿಲ್ಲ, ಸಮಾನ ಕೆಲಸಕ್ಕೆ ಸಮಾನ ವೇತನ ನೀಡಲಾಗುತ್ತಿದೆಯೇ ಎಂಬುದನ್ನು ತಿಳಿಸುವ ದಾಖಲೆಗಳೂ(ನಮೂನೆ ಡಿ) ಇಲ್ಲ.
ರಜೆ ಮತ್ತು ಸವಲತ್ತುಗಳ ನಿರಾಕರಣೆ, ವೇತನ ಸಹಿತ ರಜೆ(Earned Leave) ರಿಜಿಸ್ಟರ್ ಇಲ್ಲ. ಹಾಗೆಯೇ, ದೀರ್ಘಕಾಲದ ಸೇವೆಗೆ ಸಿಗಬೇಕಾದ ಉಪಧನ(Gratuity) ಸೌಲಭ್ಯಕ್ಕಾಗಿ ನೌಕರರಿಂದ ನಾಮನಿರ್ದೇಶನವನ್ನೂ(Nomination) ಮಾಡಿಸಿಲ್ಲ.
ಮಾಹಿತಿ ಮರೆಮಾಚುವಿಕೆ, ಸಂಸ್ಥೆಯು 2023ನೇ ಸಾಲಿನ ವಾರ್ಷಿಕ ವರದಿಯನ್ನೇ(Annual Report) ಸರ್ಕಾರಕ್ಕೆ ಸಲ್ಲಿಸಿಲ್ಲ.
ಅಧಿಕಾರಿಗಳ ನಡೆ ಅನುಮಾನಾಸ್ಪದ!
ಲೋಪಗಳನ್ನು ಸರಿಪಡಿಸಿಕೊಂಡು 5 ದಿನಗಳ ಒಳಗಾಗಿ ವರದಿ ನೀಡುವಂತೆ ಅಧಿಕಾರಿಗಳು ಖಡಕ್ ಸೂಚನೆ ನೀಡಿದ್ದರು. ಆದರೆ ಏಜೆನ್ಸಿಯವರು ಇಲ್ಲಿಯವರೆಗೂ ತಪ್ಪು ಸರಿಪಡಿಸಿದ ವರದಿ(ಅನುಪಾಲನ ವರದಿ) ಸಲ್ಲಿಸಿಲ್ಲ. ಇತ್ತ ಅಧಿಕಾರಿಗಳು, ಆದೇಶ ಪಾಲಿಸದ ಏಜೆನ್ಸಿಯ ವಿರುದ್ಧ ಯಾವುದೇ ಕಾನೂನು ಕ್ರಮವನ್ನೂ ಜರುಗಿಸಿಲ್ಲ.
ಈ ಸುದ್ದಿ ಓದಿದ್ದೀರಾ? ನಗರಸಭೆಗೆ ಗೆಜ್ಜಲಗೆರೆ ಸೇರ್ಪಡೆ ಸ್ವಾಭಾವಿಕ ಪ್ರಕ್ರಿಯೆ; ಶಾಸಕರ ಮೇಲಿನ ರಿಯಲ್ ಎಸ್ಟೇಟ್ ಆರೋಪ ನಿರಾಧಾರ: ಎಚ್ ಎಲ್ ಸತೀಶ್
13 ಜನ ಕನ್ನಡಿಗ ನೌಕರರ ಹಿತ ಕಾಪಾಡಬೇಕಾದ ಕಾರ್ಮಿಕ ಇಲಾಖೆ, ಏಜೆನ್ಸಿಯ ಪ್ರಭಾವಕ್ಕೆ ಮಣಿದು ಸುಮ್ಮನಿದೆಯೇ? ಎಂಬ ಪ್ರಶ್ನೆ ಈಗ ಸಾರ್ವಜನಿಕ ವಲಯದಲ್ಲಿ ಎದ್ದಿದೆ, ಉತ್ತರಿಸುವವರಾರು?
ವರದಿ : ಜಗದೀಶ್ ನಗರಕೆರೆ





