ಮಳವಳ್ಳಿ ತಾಲೂಕಿನ ಬೆಂಡರವಾಡಿ ಗ್ರಾಮ ಪಂಚಾಯತಿಯಲ್ಲಿ ರಾತ್ರಿಯಾದರೂ ರಾಷ್ಟ್ರಧ್ವಜದ ಮೇಲೆ ಸರಿಯಾದ ಬೆಳಕಿನ ವ್ಯವಸ್ಥೆ ಮಾಡದೆ ನಿರ್ಲಕ್ಷ್ಯ ವಹಿಸಿರುವ ಘಟನೆ ಬೆಳಕಿಗೆ ಬಂದಿದೆ. ಸಂಕ್ರಾಂತಿ ಹಬ್ಬದಂದು (ಜ.15) ರಾತ್ರಿ 7 ಗಂಟೆಯಾದರೂ ಧ್ವಜಸ್ತಂಭದ ಬಳಿ ಕತ್ತಲೆ ಇದ್ದರೂ ಧ್ವಜವನ್ನು ಹಾಗೆಯೇ ಬಿಟ್ಟಿರುವುದು ಸಾರ್ವಜನಿಕ ಅಸಮಾಧಾನಕ್ಕೆ ಕಾರಣವಾಗಿದೆ.
ಭಾರತದ ಧ್ವಜ ಸಂಹಿತೆಗೆ ತಂದ 2022ರ ಜುಲೈ 20ರ ತಿದ್ದುಪಡಿ ಪ್ರಕಾರ, ಸಾರ್ವಜನಿಕರು ಅಥವಾ ಸರ್ಕಾರಿ ಕಚೇರಿಗಳು ಹಗಲು ಮತ್ತು ರಾತ್ರಿ (24 ಗಂಟೆ) ಧ್ವಜವನ್ನು ಹಾರಿಸಲು ಅವಕಾಶವಿದೆ. ಆದರೆ, ರಾತ್ರಿಯಿಡೀ ಧ್ವಜ ಹಾರಿಸುವಾಗ ಧ್ವಜವು ಸ್ಪಷ್ಟವಾಗಿ ಕಾಣುವಂತೆ ಅದರ ಮೇಲೆ ಸಾಕಷ್ಟು ಬೆಳಕಿನ ವ್ಯವಸ್ಥೆ ಇರಬೇಕು ಎಂಬುದು ಕಡ್ಡಾಯ ನಿಯಮವಾಗಿದೆ. ಬೆಂಡರವಾಡಿ ಗ್ರಾಮ ಪಂಚಾಯತಿ ಕಚೇರಿಯ ಮೇಲೆ ಹಾರಿಸಲಾಗಿದ್ದ ರಾಷ್ಟ್ರಧ್ವಜವನ್ನು ರಾತ್ರಿ 7 ಗಂಟೆಯಾದರೂ ಇಳಿಸಿರಲಿಲ್ಲ. ಹೊಸ ನಿಯಮದಂತೆ 24 ಗಂಟೆ ಹಾರಿಸಲು ಅವಕಾಶವಿದ್ದರೂ, ಅಲ್ಲಿ ಧ್ವಜದ ಮೇಲೆ ಯಾವುದೇ ಬೆಳಕಿನ ವ್ಯವಸ್ಥೆ ಇರಲಿಲ್ಲ. ಧ್ವಜವು ಕತ್ತಲೆಯಲ್ಲಿರುವುದು ಧ್ವಜ ಸಂಹಿತೆಯ ಉಲ್ಲಂಘನೆಯಾಗುತ್ತದೆ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ದೃಶ್ಯವನ್ನು ವೀಡಿಯೊ ಮಾಡಿರುವ ವ್ಯಕ್ತಿಯೊಬ್ಬರು, “ರಾತ್ರಿಯಾದರೂ ಬಾವುಟ ಇಳಿಸಿಲ್ಲ, ಕನಿಷ್ಠ ಬೆಳಕಿನ ವ್ಯವಸ್ಥೆಯನ್ನೂ ಮಾಡಿಲ್ಲ. ಇದೊಂದು ಅನಾಥಾಲಯದಂತಿದೆ. ಅಧಿಕಾರಿಗಳು ತಮ್ಮ ಜವಾಬ್ದಾರಿಯನ್ನು ಮರೆತಿದ್ದಾರೆ” ಎಂದು ಕಿಡಿಕಾರಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಎಚ್ಚೆತ್ತುಕೊಂಡ ಪಂಚಾಯತಿ ಸಿಬ್ಬಂದಿ ಧ್ವಜವನ್ನು ಇಳಿಸಿದ್ದಾರೆ.
ಇದನ್ನೂ ಓದಿ: ಮಂಡ್ಯ | ಸೌಜನ್ಯ ಕೊಲೆ ಪ್ರಕರಣ; ಜಾಗೃತ ಕರ್ನಾಟಕ ಸಂಘಟನೆಯಿಂದ ಪ್ರತಿಭಟನೆ
ಧ್ವಜ ಸಂಹಿತೆಯ ಪ್ರಕಾರ ರಾಷ್ಟ್ರಧ್ವಜವನ್ನು ಕತ್ತಲೆಯಲ್ಲಿ ಬಿಡುವುದು ಅಪಮಾನಕ್ಕೆ ಸಮಾನ. ಧ್ವಜವು ಹರಿದಿರಬಾರದು ಅಥವಾ ಬಣ್ಣ ಮಾಸಿರಬಾರದು.ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಸುವುದು ಪ್ರತಿಯೊಬ್ಬ ನಾಗರಿಕನ ಹಾಗೂ ಅಧಿಕಾರಿಯ ಕರ್ತವ್ಯವಾಗಿದೆ. ನಿಯಮಗಳ ಅರಿವಿದ್ದರೂ ಸರಿಯಾದ ಬೆಳಕಿನ ವ್ಯವಸ್ಥೆ ಮಾಡದೆ ರಾಷ್ಟ್ರಧ್ವಜವನ್ನು ಕತ್ತಲೆಯಲ್ಲಿ ಬಿಟ್ಟ ಬೆಂಡರವಾಡಿ ಗ್ರಾಮ ಪಂಚಾಯತಿ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.





