ಮದ್ದೂರಿನ ಶ್ರೀ ವೆಂಕಟೇಶ್ವರ ಇಂಡೇನ್ ಗ್ಯಾಸ್ ಮತ್ತು 9 ವರ್ಷಗಳ ಕಾಲ ಸಿಲಿಂಡರ್ ಹೊತ್ತ ಕಾರ್ಮಿಕ ಅಂದಾನಿಯವರ ನಡುವಿನ ಈ ಕಾದಾಟ, ಈಗ ಆಡಳಿತದ ವ್ಯವಸ್ಥೆಯ(System) ಓರೆಕೋರೆಗಳನ್ನು ಬಟಾಬಯಲು ಮಾಡಿದೆ. ಇದು ಕೇವಲ ಸಂಬಳದ ಕತೆಯಲ್ಲ, ಕಡತಗಳ ಕೋಟೆಯಲ್ಲಿ ಬಡವನೊಬ್ಬನನ್ನು ಹೇಗೆ ಸಿಲುಕಿಸಲಾಗುತ್ತದೆ ಎಂಬುದರ ನೇರ ಸಾಕ್ಷಿ.
ಕಾರ್ಮಿಕ ಅಂದಾನಿ ತಮಗೆ ಕಳೆದ 9 ವರ್ಷಗಳಿಂದ ಸಂಬಳವನ್ನೇ ನೀಡಿಲ್ಲ ಎಂದು ಆರೋಪಿಸಿದರೆ, ಮಾಲೀಕರು ʼನಾವು ಪ್ರತಿ ತಿಂಗಳು ₹14,೦೦೦ ಸಂಬಳ ನೀಡಿದ್ದೇವೆʼ ಎಂದು ವಾದಿಸುತ್ತಿದ್ದಾರೆ. ಆದರೆ ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಗಮನಿಸಿದರೆ ಅನುಮಾನದ ಹುತ್ತವೇ ಬೆಳೆಯುತ್ತದೆ.
ಏಜೆನ್ಸಿಯವರು ಕಾರ್ಮಿಕ ಇಲಾಖೆಗೆ 2024ರ ಏಪ್ರಿಲ್‌ನಿಂದ ಸೆಪ್ಟೆಂಬರ್‌ವರೆಗಿನ ʼವೇಜ್ ಸ್ಲಿಪ್(ಸಂಬಳದ ಚೀಟಿ)ʼಗಳನ್ನು ಮಾತ್ರ ಸಲ್ಲಿಸಿದ್ದಾರೆ. 9 ವರ್ಷಗಳಿಂದ ಕೆಲಸ ಮಾಡುತ್ತಿದ್ದವನಿಗೆ, ಕೇವಲ ದೂರು ನೀಡುವ 6 ತಿಂಗಳ ಹಿಂದಿನ ದಾಖಲೆಗಳು ಮಾತ್ರ ಏಕೆ ಸೃಷ್ಟಿಯಾದವು ಎನ್ನುವುದಕ್ಕೆ ಇಲ್ಲಿ ಉತ್ತರವಿಲ್ಲ.
ಮದ್ದೂರು ಕಾರ್ಮಿಕ ನಿರೀಕ್ಷಕರು 2024ರ ಮಾರ್ಚ್ 28ರಂದು ಏಜೆನ್ಸಿಗೆ ಭೇಟಿ ನೀಡಿದ್ದಾಗ, ಅಲ್ಲಿ ಅಂದಾನಿ ಅವರಿಗೆ ₹14,೦೦೦ ಸಂಬಳ ನೀಡಲಾಗುತ್ತಿದೆ ಎಂದು ನಮೂದಿಸಲಾಗಿದೆ. ಆದರೆ, ಅಂದಾನಿ ದೂರಿನ ಪ್ರಕಾರ, ʼಅಧಿಕಾರಿಗಳು ಬಂದಾಗ ಮಾಲೀಕರು ಬೆದರಿಸಿ ನಮ್ಮ ಬಳಿ ಸುಳ್ಳು ಹೇಳಿಕೆ ಬರೆಸಿಕೊಂಡರುʼ ಎಂಬುದು ಈಗ ಬಹಿರಂಗವಾಗಿದೆ. ಅಂದರೆ, ಕಾರ್ಮಿಕ ನಿರೀಕ್ಷಕರ ವರದಿಯನ್ನೇ ದಾಳವಾಗಿ ಬಳಸಿಕೊಂಡು, ಈ ನಕಲಿ ವೇಜ್ ಸ್ಲಿಪ್‌ಗಳನ್ನು ಸೃಷ್ಟಿಸಲಾಯಿತೇ?
ಆ ʼರಾಜೀನಾಮೆ ಪತ್ರʼದ ಮರ್ಮವೇನು? ಈ ಪ್ರಕರಣದ ಅತ್ಯಂತ ರೋಚಕ ಮತ್ತು ಅನುಮಾನಾಸ್ಪದ ತಿರುವು ಎಂದರೆ 2024ರ ಸೆಪ್ಟಂಬರ್ 5ರಂದು ಅಂದಾನಿ ಅವರೇ ಬರೆದುಕೊಟ್ಟಿದ್ದಾರೆ ಎನ್ನಲಾದ ಪತ್ರ. ಏನೆಂದರೆ, ʼಅಂದಾನಿ ಅವರಿಗೆ ಆರೋಗ್ಯ ಸರಿಯಿಲ್ಲದ ಕಾರಣ ಸ್ವತಃ ಕೆಲಸ ಬಿಟ್ಟಿದ್ದಾರೆʼ ಎಂಬುದು ಏಜೆನ್ಸಿ ವಾದ. ʼನನ್ನ ಲೆಕ್ಕ ಚುಕ್ತಾ ಆಗಿದೆ, ನನಗೆ ಏಜೆನ್ಸಿಯಿಂದ ಬರಬೇಕಾದ್ದು ಏನೂ ಇಲ್ಲʼವೆಂದು ಬರೆದುಕೊಟ್ಟಿದ್ದಾರೆ.
“ನಾನು ಅಂತಹ ಯಾವುದೇ ಪತ್ರ ಬರೆದಿಲ್ಲ. ಅದು ನನ್ನ ಕೈಯೊಪ್ಪವೂ(Signature) ಅಲ್ಲ. ನನ್ನ ಸಹಿಯನ್ನು ನಕಲು ಮಾಡಿ(Forgery), ಅವರೇ ಸೃಷ್ಟಿಸಿರುವ ಸುಳ್ಳು ಕಡತವಿದು” ಎಂದು ಅಂದಾನಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಬ್ಬ ಕಾರ್ಮಿಕ 9 ವರ್ಷ ದುಡಿದು, ಬರಿಗೈಯಲ್ಲಿ ಹೋಗುವಾಗ ‘ನನಗೆ ಬಾಕಿ ಇಲ್ಲ’ವೆಂದು ಮುದ್ರೆ ಒತ್ತಿ ಹೋಗುತ್ತಾನೆಯೇ? ಅಥವಾ ದೂರು ದಾಖಲಾಗುವ ಭಯದಿಂದ ಈ ಪತ್ರ ಸೃಷ್ಟಿಯಾಯಿತೇ?
ಒಪ್ಪಂದ ಮುರಿದು ಉಲ್ಟಾʼ ಹೊಡೆದ ಮಾಲೀಕರು!
ಇದು ಕೇವಲ ಆರೋಪವಲ್ಲ, ಕಾರ್ಮಿಕ ಇಲಾಖೆಯ ದಾಖಲೆಯೇ ಹೇಳುವ ಸತ್ಯ. ದೂರು ನೀಡಿದ ನಂತರ ವಿಚಾರಣೆಯಲ್ಲಿ ನಡೆದ ಮಾತುಕತೆಯಲ್ಲಿ, ಏಜೆನ್ಸಿ ಮಾಲೀಕರು ₹2.5(ಎರಡುೂವರೆ ಲಕ್ಷ) ಲಕ್ಷ ರೂಪಾಯಿಗಳನ್ನು ಪರಿಹಾರವಾಗಿ ನೀಡಲು ಒಪ್ಪಿದ್ದರು. ಆದರೆ, 2024ರ ಜುಲೈ 1೦ರಂದು ಏಜೆನ್ಸಿಯವರು ಒಂದು ಪತ್ರ ಬರೆದು, ʼಅಂದು ನಾನು ಒತ್ತಡಕ್ಕೆ ಮಣಿದು ಒಪ್ಪಿಕೊಂಡಿದ್ದೆ. ಈಗ ನಾನು ಹಣ ಕೊಡುವುದಿಲ್ಲ. ಅಂದಾನಿ ನನಗೆ ಬೆದರಿಕೆ ಹಾಕುತ್ತಿದ್ದಾರೆʼ ಎಂದು ವರಸೆ ಬದಲಿಸಿದ್ದಾರೆ.
ಒಂದು ವೇಳೆ ಸಂಬಳ ಬಾಕಿ ಇರಲೇ ಇಲ್ಲ ಎಂದಾದರೆ, ಆರಂಭದಲ್ಲಿ 2.5 ಲಕ್ಷ ರೂಪಾಯಿ ಕೊಡಲು ಒಪ್ಪಿದ್ದೇಕೆ? ಈಗ ಏಕಾಏಕಿ ವರಸೆ ಬದಲಾಗಿದ್ದು, ಯಾರ ಕುಮ್ಮಕ್ಕಿನಿಂದ?
16 ತಾರೀಖುಗಳು, ಶೂನ್ಯ ಫಲಿತಾಂಶ. ಬಡವನೊಬ್ಬ ಸರ್ಕಾರಿ ಕಚೇರಿಗಳ ಮೆಟ್ಟಿಲು ಹತ್ತಿಳಿಯುವುದರಲ್ಲೇ ಆಯಸ್ಸು ಕಳೆಯಬೇಕು ಎನ್ನುವುದಕ್ಕೆ ಈ ಪ್ರಕರಣ ಸಾಕ್ಷಿ. ಈ ಪ್ರಕರಣದಲ್ಲಿ ಬರೋಬ್ಬರಿ 16 ಬಾರಿ(2024ರ ಅಕ್ಟೋಬರ್ 19ರಿಂದ 2೦25ರ ಜುಲೈ 10ರವರೆಗೆ) ಸಂಧಾನ ಸಭೆಗಳನ್ನು (Joint Meetings) ಕರೆಯಲಾಗಿದೆ. ಹಲವು ಬಾರಿ ಮಾಲೀಕರು ಹಾಜರಾಗಿಲ್ಲ ಅಥವಾ ಪ್ರತಿನಿಧಿಗಳನ್ನು ಕಳುಹಿಸಿದ್ದಾರೆ. ಕೊನೆಗೆ, ʼಇದು ವೇತನ ಪಾವತಿ ಕಾಯ್ದೆಯಡಿ ಬರುತ್ತದೆ, ನೀವು ನ್ಯಾಯಾಲಯಕ್ಕೆ ಹೋಗಿʼ ಎಂದು ಹೇಳಿ ಕಾರ್ಮಿಕ ಅಧಿಕಾರಿಗಳು ಹಿಂಬರಹ ನೀಡಿ ಕೈತೊಳೆದುಕೊಂಡಿದ್ದಾರೆ.
ಪೊಲೀಸ್ ಠಾಣೆಯ ಅಸಹಾಯಕತೆ
ಅಂದಾನಿ ಮದ್ದೂರು ಪೊಲೀಸ್ ಠಾಣೆಗೆ ದೂರು ನೀಡಿದಾಗ, ಪೊಲೀಸರು ನೀಡಿದ ಹಿಂಬರಹ ಕುತೂಹಲಕಾರಿಯಾಗಿದೆ. “ಇದು ಕಾರ್ಮಿಕ ಇಲಾಖೆಯ ವ್ಯಾಪ್ತಿಯಲ್ಲಿದೆ, ನಾವು ಮಧ್ಯ ಪ್ರವೇಶಿಸಲು ಬರುವುದಿಲ್ಲ. ಆದರೆ ಕಾರ್ಮಿಕನು ಮಾಲೀಕರಿಗೆ ಕರೆ ಮಾಡಿ ತೊಂದರೆ ಕೊಡಬಾರದು” ಎಂದು ಪೊಲೀಸರು ಸೂಚಿಸಿದ್ದಾರೆ. ಅಂದರೆ, ಇಲ್ಲಿಯೂ ಬಡವನಿಗೆ ರಕ್ಷಣೆಗಿಂತ, ಕಾನೂನಿನ ತೊಡಕೇ ಹೆಚ್ಚಾಗಿದೆ.
ಈ ಪ್ರಶ್ನೆಗಳಿಗೆ ಉತ್ತರ ಬೇಕಿದೆ
ಈ ಮೇಲಿನ ಎಲ್ಲ ದಾಖಲೆಗಳನ್ನು ಪರಶೀಲಿಸಿದಾಗ, ಅಂದಾನಿ ಕೂಗು ನ್ಯಾಯಯುತವಾಗಿದೆ ಎಂದು ಮೇಲ್ನೋಟಕ್ಕೆ ಕಂಡುಬರುತ್ತದೆ.
ನಕಲಿ ಸಹಿ ತನಿಖೆ ಏಕಿಲ್ಲ? : 2024ರ ಸೆಪ್ಟೆಂಬರ್ ೦5ರ ಪತ್ರದಲ್ಲಿರುವ ಅಂದಾನಿ ಅವರ ಸಹಿ(Signature) ಮತ್ತು ಅವರ ಅಸಲಿ ಸಹಿಯನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ(FSL) ಕಳುಹಿಸಿದರೆ ಸತ್ಯ ಹೊರಬರುವುದಿಲ್ಲವೇ?
ಇದನ್ನೂ ಓದಿದ್ದೀರಾ? ಮದ್ದೂರು | ವೆಂಕಟೇಶ್ವರ ಇಂಡೇನ್ ಗ್ಯಾಸ್ ಏಜೆನ್ಸಿಯಿಂದ ಕಾಯಿದೆ ಉಲ್ಲಂಘನೆ: ಅಧಿಕಾರಿಗಳ ಮೌನ
2೦24ರ ಏಪ್ರಿಲ್‌ಗಿಂತ ಹಿಂದಿನ 8 ವರ್ಷಗಳ ಸಂಬಳದ ದಾಖಲೆಗಳು(Bank Statement or Register) ಎಲ್ಲಿವೆ? ಅವುಗಳನ್ನು ಏಜೆನ್ಸಿ ಏಕೆ ಹಾಜರುಪಡಿಸಿಲ್ಲ? ಕಾರ್ಮಿಕ ನಿರೀಕ್ಷಕರು ಪರಿಶೀಲನೆ ನಡೆಸಿದಾಗ, ಕಾರ್ಮಿಕರ ಹೇಳಿಕೆಯನ್ನು ಪ್ರತ್ಯೇಕವಾಗಿ ಪಡೆಯದೆ, ಮಾಲೀಕರ ಎದುರೇ ಪಡೆದರಾ? ಇದು ಎಷ್ಟರ ಮಟ್ಟಿಗೆ ಸರಿ?
ಇದಿಷ್ಟು ನಮ್ಮ ಕೈಸೇರಿರುವ ದಾಖಲೆಗಳ ಆಧಾರದ ಮೇಲೆ ಸಿದ್ಧಪಡಿಸಿದ ಸತ್ಯ ಶೋಧನಾ ವರದಿ. ಈಗ ಈ ಪ್ರಕರಣ ಮೈಸೂರು ವಿಭಾಗದ ಉಪ ಕಾರ್ಮಿಕ ಆಯುಕ್ತರ ಅಂಗಳಕ್ಕೆ ಹೋಗಬೇಕಿದೆ. ಇದು ಕೇವಲ ಅಂದಾನಿಯವರ ಹೋರಾಟವಲ್ಲ, ಕನ್ನಡ ನಾಡಿನಲ್ಲಿ ದುಡಿಯುವ ವರ್ಗಕ್ಕೆ ಸಿಗಬೇಕಾದ ಗೌರವ ಮತ್ತು ಹಕ್ಕುಗಳ ಹೋರಾಟ. ಕಡತಗಳನ್ನು ತಿದ್ದಬಹುದು, ಆದರೆ ಕಾರ್ಮಿಕನ ಹೊಟ್ಟೆಯ ಹಸಿವನ್ನಲ್ಲ. ಮದ್ದೂರಿನ ಈ ಪ್ರಕರಣದಲ್ಲಿ ʼದಿಟʼ ಸಾಯಬಾರದು.





