ಐತಿಹಾಸಿಕ ನಗರಿ ಶ್ರೀರಂಗಪಟ್ಟಣದ ಸ್ಮಾರಕಗಳನ್ನು ಸಂರಕ್ಷಿಸುವುದು ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯ ಎಂದು ರೋಟರಿ ಸಂಸ್ಥೆಯ ಕಾರ್ಯದರ್ಶಿ ನಾಗೇಂದ್ರ ಅವರು ಹೇಳಿದರು.
ಮೈಸೂರಿನ ಶೇಷಾದ್ರಿಪುರಂ ಇಂಜಿನಿಯರಿಂಗ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ (NSS) ಘಟಕದ ವತಿಯಿಂದ ಪಟ್ಟಣದ ಬಿದ್ದು ಕೋಟೆ ಗಣೇಶ ದೇವಸ್ಥಾನ ಹಾಗೂ ಇನ್ ಮನ್ ಕಾರಾಗೃಹದ (Inman’s Dungeon) ಸುತ್ತಮುತ್ತ ಹಮ್ಮಿಕೊಳ್ಳಲಾಗಿದ್ದ ಸ್ವಚ್ಛತಾ ಶ್ರಮದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, “ಶ್ರೀರಂಗಪಟ್ಟಣವು ಕೇವಲ ಬ್ರಿಟಿಷರ ವಿರುದ್ಧದ ಹೋರಾಟಕ್ಕೆ ಮಾತ್ರವಲ್ಲದೆ, ಮೈಸೂರು ಸಂಸ್ಥಾನ ಯುದ್ಧಗಳಲ್ಲಿ ಬಳಸಿದ ವಿಶ್ವವಿಖ್ಯಾತ ರಾಕೆಟ್ ತಂತ್ರಜ್ಞಾನ ಮತ್ತು ಅಂದಿನ ಜನಪರ ಯೋಜನೆಗಳಿಂದಾಗಿ ಇಂದು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಇಂತಹ ಇತಿಹಾಸವನ್ನು ಸಾರಿ ಹೇಳುವ ಸ್ಮಾರಕಗಳನ್ನು ಮುಂದಿನ ಪೀಳಿಗೆಗಾಗಿ ಉಳಿಸುವುದು ನಮ್ಮೆಲ್ಲರ ಜವಾಬ್ದಾರಿ” ಎಂದು ತಿಳಿಸಿದರು.

ಇದನ್ನೂ ಓದಿ: ಮಂಡ್ಯ | ಪ್ರೇಮ ವಿವಾಹ; ಯುವಕನ ಮನೆಗೆ ಬೆಂಕಿ ಹಚ್ಚಿದ ಯುವತಿ ತಂದೆ
ಶಿಬಿರದ ಅಂಗವಾಗಿ ಕಾಲೇಜಿನ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡು, ಸ್ಮಾರಕಗಳ ಆವರಣದಲ್ಲಿದ್ದ ಪ್ಲಾಸ್ಟಿಕ್ ಹಾಗೂ ಕಸದ ರಾಶಿಗಳನ್ನು ತೆರವುಗೊಳಿಸುವ ಮೂಲಕ ಪರಿಸರ ಸಂರಕ್ಷಣೆಯ ಜಾಗೃತಿ ಮೂಡಿಸಿದರು.
ಸ್ವಚ್ಛತಾ ಅಭಿಯಾನದಲ್ಲಿ ಸಮರ್ಪಣಾ ಟ್ರಸ್ಟ್ ಅಧ್ಯಕ್ಷ ಕೆ ಎಸ್ ಜಯಶಂಕರ್, ಎನ್.ಎಸ್.ಎಸ್. ಅಧಿಕಾರಿ ಡಾ. ರಾಘವೇಂದ್ರ ಹಾಗೂ ಕಾಲೇಜಿನ ಉಪನ್ಯಾಸಕರು ಮತ್ತು ನೂರಾರು ಶಿಬಿರಾರ್ಥಿಗಳು ಪಾಲ್ಗೊಂಡಿದ್ದರು.





