ಭಾರತ್ ಸೋಷಿಯಲ್ ಆಂಡ್ ವೆಲ್ಫೇರ್ ಟ್ರಸ್ಟ್ ಮಂಗಳೂರು ಇದರ ದಶಮಾನೋತ್ಸವದ ಪ್ರಯುಕ್ತ ಪಾವೂರು ಗ್ರಾಮ ಪಂಚಾಯತ್ ಆಶ್ರಯದಲ್ಲಿ ಆಯೋಜಿಸಲಾದ BSWT ಉಚಿತ ಟೈಲರಿಂಗ್ ತರಬೇತಿ ಶಿಬಿರಕ್ಕೆ ಚಾಲನೆ ನೀಡಲಾಯಿತು.
ರಿಬ್ಬನ್ ಕತ್ತರಿಸುವ ಮೂಲಕ ಖದೀಜಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ಅಶ್ರಫ್ ಎಂ.ಸಿ. ಅವರು ಸಾಂಕೇತಿಕವಾಗಿ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಹಿತವಚನ ನೀಡಿದ ಭಾರತ್ ಸೋಷಿಯಲ್ ಆಂಡ್ ವೆಲ್ಫೇರ್ ಟ್ರಸ್ಟ್ ಅಧ್ಯಕ್ಷರಾದ ಎನ್. ಆಮೀನ್ ಅವರು, “ಮಹಿಳೆಯರಿಗೆ ಕೌಶಲ್ಯಾಧಾರಿತ ತರಬೇತಿ ನೀಡುವುದರಿಂದ ಅವರಲ್ಲಿ ಆತ್ಮವಿಶ್ವಾಸ ಹಾಗೂ ಆರ್ಥಿಕ ಸ್ವಾವಲಂಬನೆ ಹೆಚ್ಚುತ್ತದೆ. ಸಮಾಜದ ಹಿಂದುಳಿದ ವರ್ಗದ ಮಹಿಳೆಯರನ್ನು ಸಬಲೀಕರಣಗೊಳಿಸುವುದು ನಮ್ಮ ಟ್ರಸ್ಟ್ನ ಮುಖ್ಯ ಉದ್ದೇಶ. ಟೈಲರಿಂಗ್ ತರಬೇತಿ ಅದರ ಒಂದು ಪ್ರಮುಖ ಹೆಜ್ಜೆಯಾಗಿದೆ. ಸ್ವಾವಲಂಬಿ ಬದುಕಿಗೆ ಸ್ವಾಭಿಮಾನದ ಉಡುಗೊರೆ” ಎಂದು ತಿಳಿಸಿದರು.

ಪಾವೂರು ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಒ) ಶಶಿಕಾಂತ್ ಅವರು ಭಾಗವಹಿಸಿ ಕಾರ್ಯಕ್ರಮಕ್ಕೆ ಸ್ವಾಗತ ಕೋರಿ ಪ್ರಾಸ್ತಾವಿಕವಾಗಿ ಮಾತನಾಡುತ್ತಾ, “ಗ್ರಾಮ ಮಟ್ಟದಲ್ಲಿ ಇಂತಹ ತರಬೇತಿ ಶಿಬಿರಗಳು ಮಹಿಳೆಯರ ಬದುಕಿನಲ್ಲಿ ಹೊಸ ದಾರಿ ತೆರೆದುಕೊಳ್ಳುತ್ತವೆ. ಟ್ರಸ್ಟ್ ಹಾಗೂ ಪಂಚಾಯತ್ ನೀಡಿದ ಸಹಕಾರದಿಂದ ತರಬೇತಿಯಿಂದ ಮಹಿಳೆಯರು ಪ್ರಯೋಜನ ಪಡೆದು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕು” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಇದನ್ನು ಓದಿದ್ದೀರಾ? ಮಂಗಳೂರು | ಜ.15ರಂದು ಅನುಪಮ ಮಾಸಿಕ ಓದುಗರ ಬೆಳ್ಳಿಹಬ್ಬ ಸಮಾವೇಶ
ಕಾರ್ಯಕ್ರಮದ ಅಂತ್ಯದಲ್ಲಿ ತರಬೇತುಗಾರ್ತಿಯಾದ ಮಾಲ್ಕಕ್ಷಿ ರಾಜೀವ್ ಅವರು ಧನ್ಯವಾದ ಅರ್ಪಿಸಿದರು. ಈ ಸಂದರ್ಭದಲ್ಲಿ ಪಂಚಾಯತ್ ಉಪಾಧ್ಯಕ್ಷೆ ಮೆಹರುನ್ನಿಸಾ, ಪಂಚಾಯತ್ ಸದಸ್ಯರಾದ ರಿಯಾಝ್ ಅಹ್ಮದ್ ಪಾವೂರು, ಭಾರತ್ ಸೋಷಿಯಲ್ ಆಂಡ್ ವೆಲ್ಫೇರ್ ಟ್ರಸ್ಟ್ ಉಪಾಧ್ಯಕ್ಷರಾದ ನಿಯಾಝ್ ಪೆರ್ಲ, ವಕೀಲರಾದ ಕೆ. ಮುಹಮ್ಮದ್ ಝಮೀರ್, ಶಿಕ್ಷಕರಾದ ಅಶೀರುದ್ದೀನ್ ಸಾರ್ತಬೈಲ್, ಪಾವೂರು ಪಂಚಾಯತ್ ಸಿಬ್ಬಂದಿಗಳು, ಕಾರ್ಯನಿರ್ವಾಹಕರು, ಸ್ಥಳೀಯರು ಹಾಗೂ ಹೊಲಿಗೆ ತರಬೇತಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.






