ಸಾರ್ವಜನಿಕ ಸ್ಥಳಗಳಲ್ಲಿ ಸಿಗರೇಟ್ ಮತ್ತು ತಂಬಾಕು ಉತ್ಪನ್ನಗಳನ್ನು ಸೇವಿಸಲು ಅವಕಾಶ ನೀಡುವ ಹಾಗೂ ಸಿಗರೇಟ್‍ಗಳನ್ನು ಚಿಲ್ಲರೆಯಾಗಿ ಮಾರಾಟ ಮಾಡುವ ಅಂಗಡಿ, ಹೊಟೇಲ್‍ಗಳ ವಿರುದ್ಧ ಕಾರ್ಯಾಚರಣೆ ನಡೆಸಿ ಅವುಗಳನ್ನು ಮುಚ್ಚಲು ಕ್ರಮ ಕೈಗೊಳ್ಳುವಂತೆ ದಕ್ಷಿಣ ಕನ್ನಡ ಜಿಲ್ಲೆಯ ಅಪರ ಜಿಲ್ಲಾಧಿಕಾರಿ ರಾಜು ಕೆ ಸೂಚಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ನಡೆದ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಾರ್ವಜನಿಕ ಸ್ಥಳಗಳಲ್ಲಿ ಸಿಗರೇಟ್ ಸೇವನೆ ಹಾಗೂ ಪಾನ್ ಮತ್ತಿತರ ತಂಬಾಕುಗಳನ್ನು ಮಾರಾಟ ಮಾಡಲು ಅವಕಾಶವಿಲ್ಲ. ಸಿಗರೇಟ್‍ಗಳನ್ನು ಇಡೀ ಪ್ಯಾಕ್‍ನಲ್ಲಿ ಮಾರಾಟ ಮಾಡಬೇಕೇ ಹೊರತು ಸಿಂಗಲ್ ಆಗಿ ಚಿಲ್ಲರೆ ಸಿಗರೇಟ್‍ಗಳನ್ನು ಮಾರಾಟ ಮಾಡಲು ಅವಕಾಶವಿಲ್ಲ. ಈ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲ ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಗ್ರಾಮ ಪಂಚಾಯಿತಿಗಳು ಆಗಿಂದಾಗ್ಗೆ ಅಂಗಡಿ, ಹೋಟೆಲ್ ತಪಾಸಣೆ ನಡೆಸಬೇಕು. ಯಾವುದೇ ಅನಧಿಕೃತ ಮಾರಾಟ ಕಂಡುಬಂದಲ್ಲಿ ಅಂತಹ ಅಂಗಡಿಗಳನ್ನು ಮುಚ್ಚಿಸಿ ಜಪ್ತಿ ಮಾಡಬೇಕು” ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
“ಈ ಬಗ್ಗೆ ಮುಂದಿನ ಸಭೆಯೊಳಗೆ ಎಷ್ಟು ಅಂಗಡಿಗಳಿಗೆ ಭೇಟಿ ನೀಡಲಾಗಿದೆ, ಎಷ್ಟು ಉಲ್ಲಂಘನೆ ಕಂಡುಬಂದಿದೆ, ದಂಡ ವಿಧಿಸಿರುವ ಹಾಗೂ ಅಂಗಡಿಗಳನ್ನು ಸೀಝ್ ಮಾಡಿರುವ ಬಗ್ಗೆ ಎಲ್ಲ ಅಧಿಕಾರಿಗಳು ವರದಿ ನೀಡಬೇಕು” ಎಂದು ಆದೇಶಿಸಿದರು.
“ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ ಪ್ರಕರಣಗಳು ಅಧಿಕಗೊಂಡಿದ್ದು, ಧೂಮಪಾನ, ತಂಬಾಕು ಸೇವನೆಯೇ ಕಾರಣವಾಗಿದೆ. ಜನರ ಜೀವನ ಮತ್ತು ಆರೋಗ್ಯ ತುಂಬಾ ಮುಖ್ಯವಾಗಿದೆ. ಆರೋಗ್ಯದ ವಿರುದ್ಧ ಚೆಲ್ಲಾಟವಾಡುವವರನ್ನು ಯಾವುದೇ ಕಾರಣಕ್ಕೂ ಸಹಿಸಲಾಗದು” ಎಂದರು.
ಶಾಲಾ ಕಾಲೇಜುಗಳ ಬಳಿ ಸಂಪೂರ್ಣ ತಂಬಾಕು ನಿಷೇಧ
“ಶಾಲಾ-ಕಾಲೇಜುಗಳ 100 ಮೀಟರ್ ಅಂತರದಲ್ಲಿ ಇರುವ ಅಂಗಡಿಗಳಲ್ಲಿ ಯಾವುದೇ ಕಾರಣಕ್ಕೂ ಬೀಡಿ, ಸಿಗರೇಟು, ಪಾನ್ ಮಸಾಲ ಹಾಗೂ ಇತರ ತಂಬಾಕು ಉತ್ಪನ್ನಗಳ ಮಾರಾಟಕ್ಕೆ ಅವಕಾಶವಿಲ್ಲ. ಈ ನಿಟ್ಟಿನಲ್ಲಿ ಆಯಾ ಶಾಲಾ ಕಾಲೇಜುಗಳ ಪ್ರಾಂಶುಪಾಲರು ಆಗಾಗ ಅಂಗಡಿಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು. ಸಿಗರೇಟು ತಂಬಾಕು ಉತ್ಪನ್ನ ಮಾರಾಟ ಕಂಡುಬಂದಲ್ಲಿ ಅಂತಹ ಅಂಗಡಿಗಳನ್ನು ತೆರವುಗೊಳಿಸಲು ಸ್ಥಳೀಯ ಸಂಸ್ಥೆಗೆ ವರದಿ ಮಾಡಬೇಕು ಎಂದು ಅಪರ ಜಿಲ್ಲಾಧಿಕಾರಿಗಳು ತಿಳಿಸಿದರು. ಈ ಬಗ್ಗೆ ಎಲ್ಲಾ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಮುಂದಿನ ಒಂದು ವಾರದೊಳಗೆ ವರದಿ ನೀಡಬೇಕು. ಹಾಗೂ ಮುಂದಿನ ಸಭೆಯೊಳಗೆ ಎಷ್ಟು ಅಂಗಡಿಗಳನ್ನು ಮುಚ್ಚಿಸಲಾಗಿದೆ ಎಂಬುವುದರ ಬಗ್ಗೆ ವರದಿ ನೀಡಬೇಕು ಎಂದು ಅಪರ ಜಿಲ್ಲಾಧಿಕಾರಿಗಳು ನಿರ್ದೇಶಿಸಿದರು.
ಚಾ ಕೆಫೆಗಳಲ್ಲಿ ಸಿಗರೇಟ್ ಸೇದುವ ವಿರುದ್ಧ ಕ್ರಮ
ಇತ್ತೀಚಿನ ದಿನಗಳಲ್ಲಿ ನಗರದಲ್ಲಿರುವ ಕೆಲವು ಚಾ-ಕಾಫೀ ಕೆಫೆಗಳಲ್ಲಿ ಮತ್ತು ಹೊಟೇಲ್‍ಗಳಲ್ಲಿ ಸಿಗರೇಟ್ ಮಾರಾಟ ಹಾಗೂ ಬಹಿರಂಗವಾಗಿ ಧೂಮಪಾನ ಮಾಡುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬರುತ್ತಿವೆ. ಈ ನಿಟ್ಟಿನಲ್ಲಿ ಅಂತಹ ಸಂಸ್ಥೆಗಳ ಮೇಲೆ ದಾಳಿ ನಡೆಸಿ ಮುಚ್ಚಿಸಲು ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು” ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯ ಎಲ್ಲ ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿ ಧೂಮಪಾನ ಮತ್ತು ತಂಬಾಕು ಸೇವನೆಯನ್ನು ಸಂಪೂರ್ಣವಾಗಿ ನಿಷೇಧಿಸಲು ಕ್ರಮಕೈಗೊಳ್ಳಲು ಅಪರ ಜಿಲ್ಲಾಧಿಕಾರಿಗಳು ಸೂಚಿಸಿದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಮಾರ್ಗಸೂಚಿ ಉಲ್ಲಂಘಿಸಿ ಕಾರ್ಯ ನಿರ್ವಹಿಸುತ್ತಿರುವ ವಸತಿಗೃಹ ಮುಚ್ಚಲು ಲೋಖಂಡೆ ಸ್ನೇಹಲ್ ಸುಧಾಕರ್ ಸೂಚನೆ
ಸಭೆಯಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಕಾರ್ಯಕ್ರಮ ಅಧಿಕಾರಿ ಡಾ. ನವೀನ್ ಚಂದ್ರ ಮಾತನಾಡಿ, “2025ರ ಏಪ್ರಿಲ್‍ನಿಂದ ಅಕ್ಟೋಬರ್‌ವರೆಗೆ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮತ್ತು ತಂಬಾಕು ಉತ್ಪನ್ನ ಸೇವಿಸುವ ಬಗ್ಗೆ ಕಾರ್ಯಾಚರಣೆ ನಡೆಸಿ 1,488 ಕೇಸುಗಳನ್ನು ದಾಖಲಿಸಲಾಗಿದ್ದು, 1.89 ಲಕ್ಷ ರೂ. ದಂಡ ಸಂಗ್ರಹಿಸಲಾಗಿದೆ” ಎಂದು ತಿಳಿಸಿದರು.
ಸಹಾಯಕ ಪೊಲೀಸ್ ಆಯುಕ್ತೆ ವಿಜಯ ಕ್ರಾಂತಿ ಮಾತನಾಡಿ, “ಪೊಲೀಸ್ ಇಲಾಖೆಯಿಂದ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮತ್ತು ತಂಬಾಕು ಸೇವನೆ ಮಾಡುವವರ ವಿರುದ್ಧ 1,756 ಪ್ರಕರಣ ದಾಖಲಾಗಿದೆ” ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ತಿಮ್ಮಯ್ಯ, ವೆನ್‍ಲಾಕ್ ಅಧೀಕ್ಷಕ ಡಾ.ಶಿವಪ್ರಕಾಶ್ ಸೇರಿದಂತೆ ಇತರರು ಇದ್ದರು.





