ಬಂಟರ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡುವುದಾಗಿ ಘೋಷಣೆ ಮಾಡಿದ್ದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು, ರಾಜ್ಯ ಬಜೆಟ್‌ನಲ್ಲಿ ಭರವಸೆಯನ್ನು ಈಡೇರಿಸದೆ, ಸಮುದಾಯನ್ನು ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಜಾಗತಿಕ ಬಂಟರ ಸಂಘ ಆಕ್ರೋಶ ವ್ಯಕ್ತಪಡಿಸಿದೆ.
ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಜಾಗತಿಕ ಬಂಟರ ಸಂಘದ ಅಧ್ಯಕ್ಷ, ಐಕಳ ಹರೀಶ್ ಶೆಟ್ಟಿ, “ತಕ್ಷಣವೇ ಬಂಟರ ಅಭಿವೃದ್ಧಿ ನಿಗಮವನ್ನು ಸ್ಥಾಪನೆ ಮಾಡಿ 500 ಕೋಟಿ ರೂಪಾಯಿ ಅನುದಾನ ನೀಡಬೇಕು” ಎಂದು ಆಗ್ರಹಿಸಿದರು.
ಹಿಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಬಳಿ ನಿಯೋಗ ತೆರಳಿ ಬಂಟರ ನಿಗಮ ಸ್ಥಾಪನೆ ಹಾಗೂ ಬಂಟರ ಮೀಸಲಾತಿಯನ್ನು 3ಬಿ ಯಿಂದ 2ಎಗೆ ಬದಲಾಯಿಸಲು ಒತ್ತಾಯಿಸಿದ್ದೇವು, ಅದರೆ, ಅದು ಈಡೇರಲಿಲ್ಲ. ಬಳಿಕ ಸಿದ್ಧರಾಮಯ್ಯ ಅವರು ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ರಮಾನಾಥ ರೈ ಹಾಗೂ ಮಿಥುನ್ ರೈ ಜೊತೆ ಮುಖ್ಯಮಂತ್ರಿಯವರನ್ನು ಭೇಟಿಯಾಗಿ ಆಗ್ರಹ ಮಾಡಿದ್ದೇವು.
ಈ ಆಗ್ರಹದ ಹಿನ್ನೆಲೆಯಲ್ಲಿ ಕಳೆದ ಅಕ್ಟೋಬರ್ ತಿಂಗಳಲ್ಲಿ ಉಡುಪಿಯಲ್ಲಿ ನಡೆದ ವಿಶ್ವ ಬಂಟರ ಸಮ್ಮೇಳನದಲ್ಲಿ ಭಾಗವಹಿಸಿದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಬಜೆಟ್‌ನಲ್ಲಿ ಬಂಟರ ನಿಗಮ ಸ್ಥಾಪನೆ ಹಾಗೂ ನಿಗಮಕ್ಕೆ ಅನುದಾನ ನೀಡುವ ಬಗ್ಗೆ ಪ್ರಕಟಿಸುವುದಾಗಿ ಸಭೆಯಲ್ಲಿ ಘೋಷಣೆ ಮಾಡಿದ್ದರು ಎಂದು ಐಕಳ ಹರೀಶ್ ಶೆಟ್ಟಿ ನೆನಪಿಸಿದರು.
ಈ ಘೋಷಣೆಯ ಮರುದಿನ ದಕ್ಷಿಣ ಕನ್ನಡ ಜಿಲ್ಲೆಯ ಬಂಟ ಸಮುದಾಯದ ಕಾಂಗ್ರೆಸ್ ನಾಯಕರು ಪತ್ರಿಕಾ ಜಾಹೀರಾತು ನೀಡಿ ಮುಖ್ಯಮಂತ್ರಿಗೆ ಅಭಿನಂದನೆ ಸಲ್ಲಿಸಿದ್ದರು. ಆದರೆ, ಈ ಅಭಿನಂದನೆ ಸಲ್ಲಿಸಿದ ಕಾಂಗ್ರೆಸ್ ನಾಯಕರು ಈಗ ಯಾಕೆ ಮಾತನಾಡುವುದಿಲ್ಲ ಎಂದು ಹರೀಶ್ ಶೆಟ್ಟಿ ಪ್ರಶ್ನೆ ಮಾಡಿದ್ದಾರೆ.
ಕಾಂಗ್ರೆಸ್ ಪಕ್ಷವು ಕಳೆದ ಚುನಾವಣೆಯಲ್ಲಿ ತನ್ನ ಕರಾವಳಿ ಪ್ರಣಾಳಿಕೆಯಲ್ಲಿ ಬಂಟರ ನಿಗಮ ಸ್ಥಾಪನೆ ಬಗ್ಗೆ ಭರವಸೆ ನೀಡಿತ್ತು. ಆದರೆ ಭರವಸೆ ಈಡೇರಿಸಿಲ್ಲ. ಈ ಕೂಡಲೇ ಬಂಟರ ನಿಗಮ ಸ್ಥಾಪನೆಯ ಲಿಖಿತ ಆದೇಶವನ್ನು ಪ್ರಕಟಿಸಬೇಕು ಎಂದು ಜಾಗತಿಕ ಬಂಟರ ಸಂಘದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಸಂಘದ ಮುಖಂಡರಾದ ಕರ್ನಿರೆ ವಿಶ್ವನಾಥ ಶೆಟ್ಟಿ, ಜಯಕರ ಶೆಟ್ಟಿ ಇಂದ್ರಾಳಿ, ಚಂದ್ರಹಾಸ ಶೆಟ್ಟಿ, ಬಾಳ ಜಗನ್ನಾಥ ಶೆಟ್ಟಿ ಉಪಸ್ಥಿತರಿದ್ದರು.




