ಮಂಗಳೂರು ನಗರದ ಶಕ್ತಿನಗರ ಕಾರ್ಮಿಕ ಕಾಲೋನಿಯಲ್ಲಿ ವಾಸವಿದ್ದು, ಹೋಮ್ ನರ್ಸ್ ಕೆಲಸ ಮಾಡುತ್ತಿದ್ದ ಹಾವೇರಿ ಮೂಲದ ವ್ಯಕ್ತಿಯೊಬ್ಬರು ಕಾಣೆಯಾಗಿದ್ದು, ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಾವೇರಿ ಮೂಲದ ಸೋಮಶೇಖರ್ ನಲವಾಗಳ(53) ಎಂಬುವವರು ಕಾಣೆಯಾಗಿರುವ ವ್ಯಕ್ತಿ. ಇವರು ಹೋಮ್ ನರ್ಸ್ ಆಗಿ ಕೆಲಸ ಮಾಡಿಕೊಂಡಿದ್ದು, ಮಂಗಳೂರಿನ ವಿವಿಧ ಆಸ್ಪತ್ರೆ ಹಾಗೂ ಪುತ್ತೂರು ಕಡೆಗಳಲ್ಲಿ ಮನೆಯಲ್ಲಿರುವ ರೋಗಿಗಳ ಉಪಚಾರ ಮಾಡುವ ಕೆಲಸಕ್ಕೆ ಹೋಗುತ್ತಿದ್ದರು. 2023ರ ಫೆಬ್ರವರಿ 28ರಂದು ಕೆಲಸಕ್ಕೆಂದು ಹೇಳಿ ಮನೆಯಿಂದ ಹೋದವರು ಕಾಣೆಯಾಗಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬಾಲಕಾರ್ಮಿಕ ರಕ್ಷಣೆ ಕಾರ್ಯಾಚರಣೆ: ಮೂವರು ಕಿಶೋರ ಕಾರ್ಮಿಕರು ಪತ್ತೆ
ಕಾಣೆಯಾದವರ ಚಹರೆ: 5.5 ಅಡಿ ಎತ್ತರ, ಎಣ್ಣೆಗೆಂಪು ಮೈ ಬಣ್ಣ, ದುಂಡು ಮುಖ, ಸಾಧಾರಣ ಮೈ ಕಟ್ಟು, ಬಲಗೈಯಲ್ಲಿ ನಂದ ಹೆಸರಿನ ಟ್ಯಾಟೂ ಇದೆ. ಕಪ್ಪು ಮಿಶ್ರಿತ ಬಿಳಿ ತಲೆಕೂದಲು, ತೆಳು ಗಡ್ಡ ಮತ್ತು ಮೀಸೆ ಹೊಂದಿರುತ್ತಾರೆ. ಕಾಣೆಯಾದ ದಿನ ಉದ್ದಗೆರೆಗಳಿರುವ ಕಪ್ಪು ಬಣ್ಣದ ಅರ್ಧತೋಳಿನ ಅಂಗಿ ಮತ್ತು ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದರು. ಕನ್ನಡ, ಹಿಂದಿ ಭಾಷೆ ಮಾತನಾಡುತ್ತಾರೆ. ಕಾಣೆಯಾದವರ ಬಗ್ಗೆ ಮಾಹಿತಿ ಪತ್ತೆಯಾದಲ್ಲಿ ಕಂಕನಾಡಿ ನಗರ ಪೊಲೀಸ್ ಠಾಣೆ ಸಂಪರ್ಕಿಸುವಂತೆ ಠಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





