ವೇತನ ಹಿಂಬಾಕಿ, ಸಂಬಳ ಹೆಚ್ಚಳ ಸೇರಿದಂತೆ ನಾನಾ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಲು ಮಂಗಳವಾರ ಕರೆ ನೀಡಲಾಗಿರುವ ಕೆಎಸ್‌ಆರ್‌ಟಿಸಿ ನೌಕರರ ಬಂದ್‌ಗೆ ಮಂಗಳೂರು ವಿಭಾಗದಲ್ಲಿಯೂ ಉತ್ತಮವಾದ ಸ್ಪಂದನೆ ದೊರೆಯಲಿದೆ ಎಂದು ಕಾರ್ಮಿಕ ಮುಖಂಡರು ಮಾಹಿತಿ ನೀಡಿದ್ದಾರೆ. ಇತ್ತ ಅಧಿಕಾರಿಗಳು ಮಾತ್ರ ಈ ಬಂದ್‌ನಿಂದ ಹೆಚ್ಚಿನ ಪರಿಣಾಮವಾಗುವುದಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.
ಬೇರೆ ದಿನಗಳಿಗೆ ಹೋಲಿಸಿದರೆ ಮಂಗಳವಾರಕ್ಕೆ ದೂರದ ಊರುಗಳ ಪ್ರಯಾಣದ ಬುಕ್ಕಿಂಗ್ ತೀರ ಕಡಿಮೆ ಇರುತ್ತದೆ. ಸೋಮವಾರ ಸಾಮಾನ್ಯ ದಿನಗಳಂತೆಯೇ ಪ್ರಯಾಣವಿದ್ದು, ಸೇವೆಯಲ್ಲಿ ಯಾವುದೇ ವ್ಯತ್ಯಯ ಆಗಿಲ್ಲ ಎಂದು ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗ ನಿಯಂತ್ರಣಾಧಿಕಾರಿ ರಾಜೇಶ್ ಶೆಟ್ಟಿ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಧರ್ಮಸ್ಥಳ ಪ್ರಕರಣ | ಅಪ್ರಾಪ್ತೆ ಮೃತದೇಹ ಕಾನೂನುಬಾಹಿರವಾಗಿ ಹೂತ ಪೊಲೀಸರು: ದೂರು ನೀಡಿದ ಜಯಂತ್ ಟಿ
ಹೈಕೋರ್ಟ್ ಆದೇಶದ ಹಿನ್ನೆಲೆ ಕಾರ್ಮಿಕರು ಮುಷ್ಕರ ನಡೆಸುವ ಸಾಧ್ಯತೆ ಕಡಿಮೆ. ಮುಷ್ಕರ ನಡೆಸಿದರೆ ಕಾರ್ಮಿಕರ ಮೇಲೆ ಶಿಸ್ತು ಕ್ರಮ ಜರುಗುವ ಸಾಧ್ಯತೆ ಇರುತ್ತವೆ. ಈ ಕುರಿತು ನೌಕರರಿಗೆ ತಿಳಿ ಹೇಳಿ ಮನವೊಲಿಸಲು ಪ್ರಯತ್ನಿಸಲಾಗಿದೆ ಎಂದರು.
ಈ ದಿನ.ಕಾಮ್ ಜತೆ ಪ್ರಯಾಣಿಕ ರಮೇಶ್ ಮಾತನಾಡಿ, ಬೇರೆ ಜಿಲ್ಲೆಗಳಿಗೆ ಹೋಲಿಸಿದರೇ ನಮ್ಮ ಜಿಲ್ಲೆಯಲ್ಲಿ ಈ ಪ್ರತಿಭಟನೆಯ ಬಿಸಿ ಕಡಿಮೆ ಇರಲಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರ್ಕಾರಿ ಬಸ್‌ಗಳ ಜತೆ ಖಾಸಗಿ ಬಸ್‌ಗಳು ಹೆಚ್ಚಾಗಿ ಇರುವುದರಿಂದ ಅಷ್ಟೇನು ತೊಂದರೆಯಾಗುವುದಿಲ್ಲ ಎಂದು ಹೇಳಿದರು.
ಮಂಗಳೂರು ವಿಭಾಗದಲ್ಲಿ ಸುಮಾರು 1,900 ಮಂದಿ ನೌಕರರು ಕರ್ತವ್ಯ ಮಾಡುತ್ತಿದ್ದಾರೆ. ಅವರೆಲ್ಲರಿಗೂ ಮುಷ್ಕರದಲ್ಲಿ ಭಾಗಿ ಆಗಲು ಸೂಚಿಸಲಾಗಿದೆ. ಈ ಬಗ್ಗೆ ಸಂಘಟನೆಯ ಕೇಂದ್ರ ಕಚೇರಿಯಿಂದ ಸೂಚನೆ ಬಂದಿದೆ ಎಂದು ಕೆಎಸ್‌ಆರ್‌ಟಿಸಿ ಸಿಬ್ಬಂದಿ ಮತ್ತು ಕಾರ್ಮಿಕರ ಸಂಘ ಮಂಗಳೂರು ವಿಭಾಗದ ಅಧ್ಯಕ್ಷ ಪ್ರವೀಣ್ ಹೇಳಿದ್ದಾರೆ.





