ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಪಣಂಬೂರು ಬೀಚ್ ಬಳಿಯ ಸಿಗ್ನಲ್ನಲ್ಲಿ ನಿಂತಿದ್ದಾಗ ಆಟೋ ರಿಕ್ಷಾಕ್ಕೆ ಟ್ಯಾಂಕರ್ವೊಂದು ಅಪ್ಪಳಿಸಿದ ಪರಿಣಾಮ ರಿಕ್ಷಾದಲ್ಲಿದ್ದ ಮೂವರು ಮೃತಪಟ್ಟ ದಾರುಣ ಘಟನೆ ಶನಿವಾರ ಬೆಳಗ್ಗೆ ನಡೆದಿದೆ.
ರಾಷ್ಟ್ರೀಯ ಹೆದ್ದಾರಿ 66ರ ಪಣಂಬೂರು ಸಿಗ್ನಲ್ ಬಳಿ ಶನಿವಾರ ಬೆಳಗ್ಗೆ ಈ ಸರಣಿ ರಸ್ತೆ ಅಪಘಾತ ಸಂಭವಿಸಿದೆ. ಸ್ಥಳದಲ್ಲೇ ಮೃತಪಟ್ಟ ಮೂವರನ್ನು BM ಅಬೂಬಕ್ಕರ್ ಬಯಲು ಮೊಂಟೆಪದವು, ಇಬ್ರಾಹೀಂ ಬಟ್ಟಿಯಡ್ಕ, ಮನ್ಸೂರ್ ಮಜಲು ಎಂದು ಗುರುತಿಸಲಾಗಿದೆ.
ಪಣಂಬೂರು ಸಿಗ್ನಲ್ ಬಳಿಯಲ್ಲಿ ಸರತಿಯಲ್ಲಿದ್ದ ವೇಳೆ ಎರಡು ಟ್ಯಾಂಕರ್, ಆಟೊ ರಿಕ್ಷಾ ಮತ್ತು ಕಾರು ಅಪಘಾತಕ್ಕೀಡಾಗಿವೆ.
ಸಿಗ್ನಲ್ ನಲ್ಲಿ ನಿಂತಿದ್ದ ಟ್ಯಾಂಕರ್ ವೊಂದರ ಹಿಂಭಾಗದಲ್ಲಿ ಕಾರು ಮತ್ತು ಆಟೊ ರಿಕ್ಷಾ ನಿಂತಿತ್ತು. ಈ ವೇಳೆ ಹಿಂದಿನಿಂದ ಬಂದ ಇನ್ನೊಂದು ಟ್ಯಾಂಕರ್ ರಿಕ್ಷಾಕ್ಕೆ ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ರಿಕ್ಷಾ ಎದುರಿನಲ್ಲಿ ನಿಂತಿದ್ದ ಕಾರಿಗೆ ಅಪ್ಪಳಿಸಿ ಬಳಿಕ ಅದರ ಮುಂದೆ ನಿಂತಿದ್ದ ಮತ್ತೊಂದು ಟ್ಯಾಂಕರ್ ಗೆ ಢಿಕ್ಕಿ ಹೊಡೆದಿದೆ.
ಈ ವೇಳೆ ಆಟೊ ರಿಕ್ಷಾ ಎರಡು ಟ್ಯಾಂಕರ್ ಗಳ ಮಧ್ಯೆ ಸಿಲುಕಿ ಅಪ್ಪಚ್ಚಿಯಾಗಿದೆ ಎಂದು ವರದಿಯಾಗಿದೆ.
ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಪ್ರಯಾಣಿಕರು ಮತ್ತು ರಿಕ್ಷಾ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದು, ಘಟನಾ ಸ್ಥಳಕ್ಕೆ ಮಂಗಳೂರು ಉತ್ತರ ಸಂಚಾರ ಪೊಲೀಸರು ಭೇಡಿ ನೀಡಿ ಪರಿಶೀಲಿಸದರು.





