ಕೇಂದ್ರ ಸರಕಾರದ ಪ್ರಧಾನಮಂತ್ರಿ ಇ-ಬಸ್ ಸೇವಾ ಯೋಜನೆಯಡಿ ರಾಜ್ಯಕ್ಕೆ 750 ಇಲೆಕ್ಟ್ರಿಕ್ ಬಸ್‌ಗಳನ್ನು ಮಂಜೂರು ಮಾಡಿರುವ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಇವಿ ಬಸ್‌ಗಳ ಸಂಚಾರಕ್ಕೆ ವೇಗ ಸಿಕ್ಕಿದೆ. ಸರ್ಕಾರಿ ಬಸ್‌ಗಳ ಜೊತೆಗೆ ಖಾಸಗಿ ಬಸ್ ಮಾಲಕರು ಕೂಡ ಇಲೆಕ್ಟ್ರಿಕ್ ಬಸ್‌ಗಳನ್ನು ರಸ್ತೆಗಿಳಿಸಲು ಸಿದ್ಧತೆ ಆರಂಭಿಸಿರುವುದು ವಿಶೇಷವಾಗಿದೆ.
ವಾಹನಗಳಿಂದ ಉಂಟಾಗುತ್ತಿರುವ ವಾಯುಮಾಲಿನ್ಯವನ್ನು ಕಡಿಮೆ ಮಾಡುವ ಉದ್ದೇಶದಿಂದ ಕೇಂದ್ರ ಸರಕಾರ ಇಲೆಕ್ಟ್ರಿಕ್ ವಾಹನಗಳ ಬಳಕೆಗೆ ಉತ್ತೇಜನ ನೀಡುತ್ತಿದೆ. ಅದರಂತೆ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ರಾಜ್ಯಕ್ಕೆ 750 ಇಲೆಕ್ಟ್ರಿಕ್ ಬಸ್‌ಗಳನ್ನು ಮಂಜೂರುಗೊಳಿಸಿದ್ದು, ಆ ಪೈಕಿ ಸುಮಾರು 100 ಬಸ್‌ಗಳು ಮಂಗಳೂರಿಗೆ ಬರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಈ ಬಸ್‌ಗಳ ಸಂಚಾರಕ್ಕೆ ಅಗತ್ಯ ಮೂಲಸೌಕರ್ಯ ಸಿದ್ಧಪಡಿಸುವ ಕಾರ್ಯಗಳು ಆರಂಭಗೊಂಡಿವೆ. ಕುಂಟಿಕಾನ ಕೆಎಸ್ಸಾರ್ಟಿಸಿ ಡಿಪೋ ಹಾಗೂ ಬಿಜೈ ಬಸ್ ನಿಲ್ದಾಣದಲ್ಲಿ ಚಾರ್ಜಿಂಗ್ ಪಾಯಿಂಟ್‌ಗಳನ್ನು ಸ್ಥಾಪಿಸಲು ಮೆಸ್ಕಾಂ ಹಾಗೂ ಕೆಪಿಟಿಸಿಎಲ್ ಅನುಮೋದನೆ ನೀಡಿವೆ.
ಸಾರಿಗೆ ಕ್ಷೇತ್ರದಲ್ಲಿ ಇತಿಹಾಸ ಹೊಂದಿರುವ ಮಂಗಳೂರು, 1914ರಲ್ಲಿ ಶಂಕರ್ ವಿಠಲ್ ಸಂಸ್ಥೆ ಮಂಗಳೂರು–ಬಂಟ್ವಾಳ ಮಧ್ಯೆ ದೇಶದ ಮೊದಲ ಖಾಸಗಿ ಬಸ್ ಸಂಚಾರ ಆರಂಭಿಸಿದ ನಗರವೆಂಬ ಹೆಗ್ಗಳಿಕೆಯನ್ನು ಹೊಂದಿದೆ. ಇದೀಗ ಇಲೆಕ್ಟ್ರಿಕ್ ಬಸ್ ವ್ಯವಸ್ಥೆಯಲ್ಲೂ ಮುಂಚೂಣಿಯಲ್ಲಿರಲು ನಗರ ಸಜ್ಜಾಗುತ್ತಿದೆ.
ಮಂಗಳೂರಿನಲ್ಲಿ ಇವಿ ಬಸ್‌ಗಳ ಸಂಚಾರವನ್ನು ಪ್ರಾಯೋಗಿಕವಾಗಿ ಆರಂಭಿಸಲು ಯೋಜನೆ ರೂಪಿಸಲಾಗಿದೆ. ಪ್ರಯೋಗ ಹಂತದಲ್ಲಿ ಯಶಸ್ಸು ಕಂಡಲ್ಲಿ ಖಾಸಗಿ ಬಸ್ ಮಾಲಕರು ಇನ್ನಷ್ಟು ಇಲೆಕ್ಟ್ರಿಕ್ ಬಸ್‌ಗಳನ್ನು ಖರೀದಿಸಲು ಮುಂದಾಗುವ ಸಾಧ್ಯತೆ ಇದೆ.
ಖಾಸಗಿ ಇವಿ ಬಸ್‌ಗಳು 9 ಮೀಟರ್ ಉದ್ದವಿದ್ದು, 32 ರಿಂದ 41 ಆಸನಗಳ ಸಾಮರ್ಥ್ಯ ಹೊಂದಿರಲಿವೆ. ಒಂದು ಬಾರಿ ಚಾರ್ಜ್ ಮಾಡಿದರೆ ಸುಮಾರು 200 ಕಿಲೋಮೀಟರ್ ಸಂಚರಿಸಬಹುದಾಗಿದ್ದು, ಎರಡು ಗಂಟೆಗಳಲ್ಲಿ ರಿಚಾರ್ಜ್ ಆಗಲಿವೆ. ಹವಾನಿಯಂತ್ರಿತ ಸೌಲಭ್ಯವಿರುವ ಈ ಬಸ್‌ಗಳಿಗೆ ಐದು ವರ್ಷದ ಬ್ಯಾಟರಿ ಗ್ಯಾರಂಟಿಯೂ ಇರಲಿದೆ. ಬಸ್‌ಗಳ ಬಾಡಿ ವಿನ್ಯಾಸ ಕಾರ್ಯವನ್ನು ಪುಣೆಯಲ್ಲಿ ಕೈಗೊಳ್ಳಲಾಗುತ್ತಿದೆ ಎಂದು ತಿಳಿದುಬಂದಿದೆ.





