ಮೈಸೂರು ಜಿಲ್ಲೆ, ಹುಣಸೂರಿನ ಸಂವಿಧಾನ ವೃತ್ತದಲ್ಲಿ,ಡಾ. ಬಿ.ಆರ್. ಅಂಬೇಡ್ಕರ್ ಅವರು ಮನುಸ್ಮತಿ ಯನ್ನು ದಹಿಸಿದ ದಿನದ ಅಂಗವಾಗಿ ದಸಂಸ ಮತ್ತು ಪ್ರಗತಿಪರ ಸಂಘಟನೆಗಳ ವತಿಯಿಂದ ಮನುಸ್ಮತಿ ಪ್ರತಿಯನ್ನು ದಹಿಸಲಾಯಿತು.
ಸಂವಿಧಾನ ವೃತ್ತದಲ್ಲಿ ನೆರೆದಿದ್ದ ಪ್ರಗತಿಪರ ಸಂಘಟನೆ, ದಸಂಸ ಮುಖಂಡರು ಅಂಬೇಡ್ಕರ್ ಚಿರಾಯುವಾಗಲಿ, ಜೀವ ವಿರೋಧಿ, ಮನುಷ್ಯ ವಿರೋಧಿ, ಸಮಾನತೆಯ ವಿರೋಧಿ ಮನುಸ್ಮತಿಗೆ ದಿಕ್ಕಾರ ಕೂಗಿ, ಪ್ರಗತಿಪರ ಸಂಘಟನೆಗಳ ಹೋರಾಟಕ್ಕೆ ಜಯವಾಗಲಿ ಎಂದು ಘೋಷಣೆ ಕೂಗುತ್ತಾ ಮನುಸ್ಮತಿ ಪ್ರತಿಯನ್ನು ದಹಿಸಿದರು.
ಮುಖಂಡರಾದ ಜೆ. ಮಹದೇವು ಮಾತನಾಡಿ, “ಜಾತಿ ವ್ಯವಸ್ಥೆಗೆ ಮತ್ತು ಅಸ್ಪೃಶ್ಯತೆಗೆ ಮುನ್ನುಡಿ ಬರೆದಿದ್ದ ಮನುಸ್ಮತಿ ಬಹುಜನರಿಗೆ ಮಾರಕವಾಗಿದೆ ಎಂದು ಅರಿತ್ತಿದ್ದ ಅಂಬೇಡ್ಕರ್ ರವರು 98 ವರ್ಷಗಳ ಹಿಂದೆಯೇ ಸುಟ್ಟು ಹಾಕಿದ್ದರು. ಆದರೂ, ಇಂದಿನ ಸಮಾಜದಲ್ಲಿ ಜಾತಿ ವ್ಯವಸ್ಥೆ, ಅಸ್ಪೃಶ್ಯತೆ. ಪಾಳೇಗಾರಿಕೆ ಸಂಸ್ಕೃತಿ ಇನ್ನೂ ಜೀವಂತವಾಗಿದೆ. ಜನಪರ ಸಂಘಟನೆಗಳು ಸಂಘಟಿತರಾಗಿ ಇದನ್ನು ಹಿಮ್ಮೆಟ್ಟಿಸಬೇಕಾಗಿದೆ. ಜಾತಿ ವ್ಯವಸ್ಥೆ ವಿರುದ್ಧ ಅಂದೇ ಧ್ವನಿ ಎತ್ತಿದ್ದ ಅಂಬೇಡ್ಕರ್ ರವರು ಸಂವಿಧಾನದ ಮೂಲಕ ಸಮ ಸಮಾಜದ ಕನಸು ಕಂಡಿದ್ದರು. ಆದರೆ, ಕೋಮುವಾದಿ ಶಕ್ತಿಗಳು ಮನುಸ್ಮತಿಯನ್ನು ಮತ್ತೊಮ್ಮೆ ಸಮಾಜದ ಮೇಲೆ ಹೇರಲು ಹವಣಿಸುತ್ತಿದ್ದಾರೆ” ಎಂದರು.
ಈ ಸುದ್ದಿ ಓದಿದ್ದೀರಾ? ತಮಿಳುನಾಡು | ರೈತ ಮುಖಂಡ ಪಿ ಆರ್ ಪಾಂಡಿಯನ್ ಜೈಲಿನಿಂದ ಬಿಡುಗಡೆ: ಸ್ವಾಗತಿಸಿದ ಜಗಜಿತ್ ಸಿಂಗ್ ದಲ್ಲೆವಾಲ್
ದಸಂಸ ತಾಲ್ಲೂಕು ಸಂಚಾಲಕ ಅತ್ತಿಕುಪ್ಪೆ ರಾಮಕೃಷ್ಣ, ಸಿಪಿಐ(ಎಂ) ಮುಖಂಡ ವಿ. ಬಸವರಾಜು ಕಲ್ಕುಣಿಕೆ, ದಸಂಸ ನಗರ ಸಂಚಾಲಕ ರಾಜು ಚಿಕ್ಕಹುಣಸೂರು, ಸಂಚಾಲಕ ಮುತ್ತುರಾಯನ ಹೊಸಳ್ಳಿ ಶಿವರಾಜು, ಜಿಲ್ಲಾ ಸಂಯೋಜಕ ಪ್ರಕಾಶ್, ಖಜಾಂಚಿ ಸಿದ್ದೇಶ್ ಅತ್ತಿಕುಪ್ಪೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೀರನಹಳ್ಳಿ ಬಾಲಸುಂದರ್, ದಸಂಸ ತಾಲ್ಲೂಕು ಮಹಿಳಾ ಸಂಚಾಲಕಿ ರುಕ್ಮಿಣಿ, ಹಳೇಪುರ ಕೃಷ್ಣ, ಚಲುವರಾಜು, ಸೋಮಯ್ಯ, ತರಿಕಲ್ಲು ಕಿಟ್ಟಪ್ಪ, ಕೆಇಬಿ ರಾಜಪ್ಪ, ಪ್ರೊ. ಮಹದೇವ್, ಗಿರೀಶ್ ಬಿಳಿಕೆರೆ, ನಾರಾಯಣ, ವಕೀಲ ಅಶೋಕ್, ಪಾಸ್ಟಾರ್ ಸುರೇಶ್, ಕುಮಾರ್ ಕೆಎಂ ವಾಡಿ, ಸುಂದರ್ ಹೊಸಕೋಟೆ, ಸೇರಿದಂತೆ ಹಲವರು ಇದ್ದರು.





