ಮೈಸೂರು ಜಿಲ್ಲೆಯ ಚಿಕ್ಕ ಹುಣಸೂರು ಗ್ರಾಮದ ಅಂಬೇಡ್ಕರ್ ನಗರದಲ್ಲಿ ಅಂಗನವಾಡಿ ನಿರ್ಮಿಸಲು ಕಾಯ್ದಿರಿಸಿದ್ದ ಜಾಗದಲ್ಲಿ ಅನಧಿಕೃತವಾಗಿ ಏಕಾಏಕಿ ಮಾರಮ್ಮ ದೇವಾಲಯ ನಿರ್ಮಿಸುವ ಸಂಚು ನಡೆದಿದೆ.
ಓದಿಗಿಂತ, ಜ್ಞಾನಕ್ಕಿಂತ ಮಿಗಿಲಾದದ್ದು ಬೇರೊಂದಿಲ್ಲ, ಮಕ್ಕಳಿಗೆ ಪ್ರಾಥಮಿಕ ಹಂತದಲ್ಲಿ ಸಿಗಬೇಕಾದ ಶಿಕ್ಷಣ ಅಂಗನವಾಡಿ ಕೇಂದ್ರದಿಂದಲೇ ಆರಂಭವಾಗುತ್ತದೆ. ಜತೆಗೆ ಸ್ಥಳೀಯವಾಗಿ ಗರ್ಭಿಣಿ, ಬಾಣಂತಿಯರನ್ನು ಪೋಷಿಸುವ ಜವಾಬ್ದಾರಿ ಇಲ್ಲಿಂದಲೇ ಶರುವಾಗುತ್ತದೆ. ಹೀಗಿರುವಾಗ, ಓದನ್ನು ಬಿಟ್ಟು, ತಮ್ಮ ಮಕ್ಕಳಿಗೆ ಕಲಿಕಾ ಕೇಂದ್ರ ಹೊರತುಪಡಿಸಿ ರಾತ್ರೋರಾತ್ರಿ ಮಾರಮ್ಮ ದೇವಾಲಯ ನಿರ್ಮಾಣ ಮಾಡಲು ಹೊರಟಿರುವುದು ಅನುಮಾನಕ್ಕೆ ಎಡೆಮಾಡಿದೆ.
ಬೆಳಗಾಗುವಷ್ಟರಲ್ಲಿ ನಾಮಫಲಕ, ಬೆಳಗಾಗುವ ಹೊತ್ತಿಗೆ ಅಡಿಪಾಯ, ಕಲ್ಲು ಕಟ್ಟಡ, ಗೋಡೆ ನಿರ್ಮಾಣ ಕೇವಲ ಗಂಟೆ ಗಂಟೆಗಳ ಅವಧಿಯಲ್ಲಿ ನಡೆಯುತ್ತಿದೆ ಎಂದರೆ ಇದರ ಹಿಂದಿರುವ ಕಾಣದ ಕೈಗಳು ಯಾವುವು? ಅಂಗನವಾಡಿ ಜಾಗವನ್ನು ದೇವಾಲಯದ ಹೆಸರು ಮುಂದಿಟ್ಟುಕೊಂಡು ಕಬಳಿಸಲು ಹೊರಟಿದ್ದು, ತರಾತುರಿ ನಿರ್ಮಾಣ ಗಮನಿಸಿದಾಗ ಇದೊಂದು ಷಡ್ಯಂತ್ರವೇ ಸರಿ.

ಸಾಮಾಜಿಕ ಹೆಸರಿನಲ್ಲಿ ಜನರನ್ನು ದಾರಿ ತಪ್ಪಿಸುವ, ಹಣ ಮಾಡುವ ದಂಧೆಗಳು ಇತ್ತೀಚಿಗೆ ಬೇರೆ, ಬೇರೆಯದ್ದೇ ರೂಪ ಕಂಡುಕೊಂಡಿವೆ. ಅಂಬೇಡ್ಕರ್ ನಗರದ ಆದಿವಾಸಿ ಜನಗಳಾದ ಜೇನು ಕುರುಬರಿಗೆ ಸರ್ಕಾರದಿಂದ ಮಂಜೂರಾದ ಜಾಗವಿದು. ಬಳಿಕ ರಸ್ತೆ, ವಿದ್ಯುತ್, ನೀರಿನ ಸೌಕರ್ಯದೊಂದಿಗೆ ದೊಂಬರು(ಹಂದಿ ಜೋಗಿ) ಸಮುದಾಯಕ್ಕೂ ಜಾಗ ಕಲ್ಪಿಸಿ ಹಕ್ಕುಪತ್ರ ನೀಡಲಾಗಿದೆ. ಹೀಗಿರುವಾಗ, ಇಲ್ಲಿ ಸರಿ ಸುಮಾರು ಏನಿಲ್ಲವೆಂದರೂ 150 ಕುಟುಂಬಗಳು ವಾಸವಾಗಿವೆ.
ಅಗತ್ಯ ಇರುವುದಾದರೂ ಏನು? ಸರ್ಕಾರ ಮನೆ, ಸೌಕರ್ಯ ಕೊಟ್ಟಿದೆ. ಆದರೆ, ಅಂಗನವಾಡಿ ಇಲ್ಲ. ಅಂಗನವಾಡಿಯಲ್ಲಿ ಕಲಿಯುವಂತಹ ಸರಿಸುಮಾರು 30ಕ್ಕೂ ಅಧಿಕ ಮಂದಿ ಮಕ್ಕಳಿದ್ದಾರೆ. ಸ್ವಂತ ಕಟ್ಟಡ ಹೊಂದಿಲ್ಲ. ರಸ್ತೆ ಬದಿಗೆ ಇದ್ದ ಕೊಠಡಿಯಿಂದ, ಇನ್ನೊಂದು ಕಡೆಗೆ ಬಂದಿದೆ. ಅಲ್ಲಿಯೂ ಕೂಡ ಇರಲು ಬಿಡುತ್ತಿಲ್ಲ. ಕೊಠಡಿ ಕಿರಿದಾಗಿದೆ, ಮಕ್ಕಳಿಗೆ ಆಟವಾಡಲು ಜಾಗವಿಲ್ಲ, ಅಡುಗೆ ಮಾಡಲು ಸ್ಥಳವಿಲ್ಲ ಇಕ್ಕಟ್ಟಿನ ಪರಿಸ್ಥಿತಿ ಇದೆ.
ಹಂದಿ ಸಾಕಣಿಕೆ ಇರುವುದರಿಂದ ಗಬ್ಬು ನಾರುವ ವಾಸನೆ ಬೀರುತ್ತದೆ. ಆದಲ್ಲಿಯೇ, ಮಕ್ಕಳು ಕಲಿಯುತ್ತಿವೆ. ಸೊಳ್ಳೆ, ನೊಣ ವಿಪರೀತವಾಗಿವೆ. ಇಂತಹ ಸ್ಥಳಕ್ಕೇ ಬಂದು ಬಸುರಿ, ಬಾಣಂತಿಯರು ಬಂದು ಪೌಷ್ಟಿಕಾಂಶದ ಆಹಾರ ಪದಾರ್ಥಗಳನ್ನು ಪಡೆದುಕೊಳ್ಳಬೇಕು. ಇಂತಹ ದುಃಸ್ಥಿತಿಯಲ್ಲಿರುವಾಗ ಬಹುಮುಖ್ಯವಾಗಿ ಅಂಗನವಾಡಿ ಕೇಂದ್ರದ ಜರೂರು ಅಗತ್ಯವಾಗಿದೆ. ಮಕ್ಕಳ ಕಲಿಕೆಗೆ, ಮಹಿಳೆಯರ ಸ್ವಾಸ್ತ್ಯದ ಹಿತಾಸಕ್ತಿ ಕಾಯುವಿಕೆಯಲ್ಲಿ ಅಂಗನವಾಡಿ ಅತಿ ಮುಖ್ಯವಾಗಿದೆ.

ಅಂಗನವಾಡಿ ಕಟ್ಟಲು ಕಾಯ್ದಿರಿಸಿದ ಸರ್ಕಾರಿ ಜಾಗದಲ್ಲಿ ದಿಢೀರನೇ ರಾತ್ರೋರಾತ್ರಿ ಯಾವುದೇ ಪರವಾನಿಗೆ, ಡಿಮ್ಯಾಂಡ್, ಅಧಿಕೃತ ದಾಖಲೆಗಳನ್ನು ಹೊಂದಿರದೆ, ಇನ್ಯಾರದೋ ಪ್ರಭಾವದಿಂದ ಸ್ಥಳೀಯ ಗುಂಪೊಂದರ ಮೂಲಕ ಮಾರಮ್ಮ ದೇವಾಲಯ ನಿರ್ಮಾಣ ಮಾಡಲು ಹೊರಟಿದ್ದಾರೆ. ಇಂತಹ ತರಾತುರಿ ನೋಡಿದರೆ ಎಂಥವರಿಗೂ ಅರ್ಥವಾಗುವಂತಿದೆ. ಮಕ್ಕಳ ಶಿಕ್ಷಣಕ್ಕಿಂತ ಮಿಗಿಲಾದದ್ದು ಯಾವುದೂ ಇಲ್ಲ. ಆದರೆ ತಳಸಮುದಾಯಗಳ ಮಕ್ಕಳಿಗೆ ಶಿಕ್ಷಣ ಕೇಂದ್ರ ಮಾಡದಂತೆ ಇನ್ನೇನೋ ಮಾಡ ಹೊರಟಿರುವ ಹುನ್ನಾರ ನಡೆದಿದೆ. ದಿನದೊಳಗೆ ಪೂರ್ಣಗೊಳಿಸುವ ತಯಾರಿಯನ್ನೆಲ್ಲ ಗಮನಿಸಿದಾಗ ಇದೆಲ್ಲವೂ ಪೂರ್ವ ನಿಯೋಜಿತವೆಂಬುದು ಸ್ಪಷ್ಟ.
ಸಮುದಾಯಕ್ಕೆ ಅಗತ್ಯವಿರುವ ಅಂಗನವಾಡಿಗೆ ಕಾಯ್ದಿಟ್ಟ ಜಾಗವನ್ನು, ಮತ್ತಿನ್ನೇನಕ್ಕೋ ಬಳಸುವಂತೆ ನಾಮಫಲಕ ನೆಟ್ಟು, ಅದರಲ್ಲಿ ಗ್ರಾಮಸ್ಥರು ನಿಗದಿಪಡಿಸಿರುತ್ತಾರೆಂದು ಬರೆಸುವುದು ಎಷ್ಟು ಸರಿ? ಸರ್ಕಾರಿ ಜಾಗಕ್ಕೆ ಅಕ್ರಮ ಪ್ರವೇಶವೇ ತಪ್ಪಾಗಿರುವಾಗ, ಸಂಬಂಧಪಟ್ಟ ಇಲಾಖೆಗಳ ಗಮನಕ್ಕೆ ತಾರದೆ ಕಟ್ಟಡ ನಿರ್ಮಾಣ ಮಾಡುತ್ತಿರುವುದು ಕಾನೂನು ರೀತಿಯ ಅಕ್ಷಮ್ಯವಾಗಿದೆ.

ಸಮುದಾಯಗಳ ಸಾಮರಸ್ಯ ಕೆಡಿಸುವ, ರಾಜಕೀಯ ಲಾಭ ಮಾಡುವ, ಹಣಕ್ಕೆ ದಾರಿ ಮಾಡಿಕೊಳ್ಳುವ ಕೃತ್ಯಗಳು ಸಮಾಜದಲ್ಲಿ ಇತ್ತೀಚಿಗೆ ನಿಚ್ಛಳವಾಗಿ ಹೆಚ್ಚುತ್ತಿವೆ. ಅನ್ಯೋನ್ಯತೆ ಇರದಾಗಿ ಸಮುದಾಯಗಳ ನಡುವೆ ಒಡಕು ಮೂಡಿಸಿ ತಮ್ಮ ತಮ್ಮಗಳ ನಡುವೆಯೇ ದ್ವೇಷ, ಅಂತರ ಹೆಚ್ಚುವಂತಾಗುತ್ತಿದೆ. ಒಂದೇ ಜಾಗದಲ್ಲಿ ವಾಸ ಮಾಡುವವರು ಪರಸ್ಪರ ಹೊಂದಾಣಿಕೆಯಿಂದ ಬದುಕಲಾರದೇ ಕಚ್ಚಾಡುವ ಸ್ಥಿತಿಗೆ ತಲುಪಿದ್ದಾರೆ. ಇದಕ್ಕೆಲ್ಲ ಕಾರಣ ಕಾಣದ ಕೈಗಳ ಕುಮ್ಮಕ್ಕು.
ಸಮುದಾಯಗಳನ್ನು ಇಕ್ಕಟ್ಟಿಗೆ ಸಿಲುಕಿಸುವ, ತಮ್ಮಗಳ ನಡುವೆ ಅಂತರ ಸೃಷ್ಟಿಸುವವರ ಬಗ್ಗೆ ಎಚ್ಚರವಹಿಸಬೇಕಿದೆ. ಸಮುದಾಯದ ಹಿತಕ್ಕೆ ಇರುವ ಜಾಗ ಸದುಪಯೋಗಕ್ಕೆ ಬಾರದಂತೆ ತಿರುಚಿ ತಮ್ಮ ಮೇಲುತನ ಸಾಧಿಸುವ ಹುನ್ನಾರಗಳು ಸ್ಥಳೀಯವಾಗಿ ಎತ್ತಿಕಟ್ಟಿ ಗಲಾಟೆಗೆ ಕಾರಣವಾಗುವಂತೆ ಮಾಡುವುದು ಸಮಾಜಕ್ಕೆ ಎಂದಿಗೂ ಮಾರಕ.

ಹುಣಸೂರಿನ ತಹಶೀಲ್ದಾರ್ ಮಂಜುನಾಥ್ ಅವರು 09-07-2025ರಲ್ಲಿ ಪತ್ರ ಸಂಖ್ಯೆ ಎಲ್.ಎನ್.ಡಿ.ಮಿಸ್/ಸಿ.ಆರ್. 273/2025 E-89913 ರಲ್ಲಿ ಹುಣಸೂರು ತಾಲೂಕು ಕಸಬಾ ಹೋಬಳಿ, ಚಿಕ್ಕ ಹುಣಸೂರು ಗ್ರಾಮದ ಸ. ನಂ. 73/1A ರಲ್ಲಿ
2-07 ಎಕರೆ ಸರ್ಕಾರಿ ಜಮೀನಿನ ಪೈಕಿ ಅಂಬೇಡ್ಕರ್ ನಗರ ಅಂಗನವಾಡಿ ಕೇಂದ್ರಕ್ಕೆ ನಿವೇಶನ ಕಾಯ್ದಿರಿಸಲು ಅಳತೆ ಮಾಡಿ ಹದ್ದುಬಸ್ತ್ ಗುರುತಿಸಿ ನಕ್ಷೆ ತಯಾರಿಸುವ ವಿಷಯಕ್ಕೆ ಜ್ಞಾಪನ ಪತ್ರ ಹೊರಡಿಸಿದ್ದಾರೆ.

ಶಿಶು ಅಭಿವೃದ್ಧಿ ಯೋಜನಾಧಿಕಾರಿಯವರಿಂದ 2025ರ ಮಾರ್ಚ್ 24ರಲ್ಲಿ ಪತ್ರ ಸಂಖ್ಯೆ: ಶಿಆಯೋ.ಹು.ಕ.ನಿ/736/2024-25 ಹಾಗೂ ದಿನಾಂಕ-03-06-2025 ರಂತೆ ಕಸಬಾ ಹೋಬಳಿ ರಾಜಸ್ವ ನಿರೀಕ್ಷಕರ ವರದಿ ಸಂಖ್ಯೆ ರಾ.ನಿ(ಕ)ಪಿ.ಆರ್.32/2025ರ ಉಲ್ಲೇಖದಂತೆ ಅಂಗನವಾಡಿ ಕೇಂದ್ರವು ಸ್ವಂತ ಕಟ್ಟಡವಿಲ್ಲದೆ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವ ಕಾರಣಕ್ಕೆ ಮೇಲ್ಕಂಡ ಮಾಹಿತಿಗಳ ಅನುಸಾರದಲ್ಲಿ ಜಾಗ ಗುರುತಿಸುವಿಕೆ, ನಕ್ಷೆ ತಯಾರಿಕೆಗೆ ವರದಿ ಸಲ್ಲಿಕೆಯಾಗಿರುತ್ತದೆ.

ಇದರ ಅನುಸಾರ ತಹಶೀಲ್ದಾರ್ ಅವರು 7 ದಿನಗಳ ಗಡುವಿನಲ್ಲಿ ಚೆಕ್ ಬಂದಿ ಅನುಸಾರ ಜಾಗ ಗುರುತಿಸಿದ ನಕ್ಷೆ ಸಹಿತ ಸಲ್ಲಿಸುವಂತೆ ತಾಲೂಕು ಭೂಮಾಪಕರಿಗೆ ಸೂಚಿಸಿದ್ದಾರೆ. ಅದರಂತೆ, ಭೂಮಾಪಕ ಎಸ್ ಜಯಕುಮಾರ್ ಆವರು ಜಾಗ ಗುರುತಿಸಿ ಸ್ಥಳೀಯರ ಸಹಿಯೊಂದಿಗೆ ತಮ್ಮ ಸಮಕ್ಷಮದಲ್ಲಿ ಸಹೀಕರಿಸಿ ಎರಡೂವರೆ ಗುಂಟೆ ಜಾಗವನ್ನು ನಕ್ಷೇಕರಿಸಿ, ಚೆಕ್ ಬಂದಿ ಅನುಸಾರ ತಹಶೀಲ್ದಾರ್ ಅವರಿಗೆ ನಿವೇದಿಸಿಕೊಂಡಿರುತ್ತಾರೆ.

ದಸಂಸ ತಾಲೂಕು ಸಂಚಾಲಕ ಅತ್ತಿಕುಪ್ಪೆ ರಾಮಕೃಷ್ಣ ಈ ದಿನ.ಕಾಮ್ ಜತೆಗೆ ಮಾತನಾಡಿ, “ಅಂಗನವಾಡಿ ಜಾಗ ಕಬಳಿಸುವ ಉದ್ದೇಶದಿಂದ ರಾತ್ರಿ ಕಳೆದು ಬೆಳಗಾಗುವ ಹೊತ್ತಿಗೆ ಕಟ್ಟಡ ನಿರ್ಮಾಣ ಕಾರ್ಯ ಮುಗಿದಿದೆ. ಯಾವುದೇ ದಾಖಲೆ ಹೊಂದಿಲ್ಲದೆ ಸರ್ಕಾರಿ ಜಾಗದಲ್ಲಿ ಕಟ್ಟಡ ನಿರ್ಮಾಣ ಮಾಡುತ್ತಿರುವುದು ಸರಿಯಲ್ಲ. ಇದು ಅಂಗನವಾಡಿ ಕಟ್ಟಲು ನಿಗದಿಪಡಿಸಿದ ಸ್ಥಳ. ಈಗಾಗಲೇ ಸಂಬಂಧಪಟ್ಟ ಇಲಾಖೆಯ ಗಮನಕ್ಕೆ ತರಲಾಗಿದ್ದು, ಸ್ಥಳಕ್ಕೆ ಭೇಟಿ ನೀಡಿ ಯಾವುದೇ ಕಟ್ಟಡ ನಿರ್ಮಾಣ ಮಾಡದಂತೆ ಸೂಚನೆ ನೀಡಿರುತ್ತಾರೆ. ಸ್ಥಳಕ್ಕೆ ಗ್ರಾಮ ಲೆಕ್ಕಾಧಿಕಾರಿ, ರಾಜಸ್ವ ನಿರೀಕ್ಷಕರೂ ಕೂಡ ಭೇಟಿ ನೀಡಿ ಹೇಳಿದ್ದರೂ ಕೂಡ ಉಡಾಫೆಯಿಂದ ಕೆಲಸ ಮುಂದುವರೆಸಿದ್ದಾರೆ” ಎಂದು ಆರೋಪಿಸಿದರು.
“ಪ್ರಶ್ನಿಸಿದ ದಸಂಸ ಮುಖಂಡರ ಮೇಲೆ ವಿನಾಕಾರಣ ಅವಾಚ್ಯವಾಗಿ ನಿಂದಿಸಿ, ಹಲ್ಲೆಗೆ ಯತ್ನ ಮಾಡಿದಾಗ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಇದು ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಇರುವ ಜಾಗ. ಇದನ್ನು ಪ್ರಭಾವಿಗಳ ಪ್ರಭಾವ ಬಳಸಿ ದುರುಪಯೋಗ ಪಡಿಸಿಕೊಳ್ಳುವ ಯತ್ನಾವಾಗಿದ್ದು. ದಸಂಸ ಯಾವುದೇ ಕಾರಣಕ್ಕೂ ಇದಕ್ಕೆಲ್ಲ ಅವಕಾಶ ನೀಡುವುದಿಲ್ಲ” ಎಂದು ಎಚ್ಚರಿಕೆ ನೀಡಿದರು.

ಚಿಕ್ಕ ಹುಣಸೂರು ರಾಜು ಮಾತನಾಡಿ, “ಅಂಗನವಾಡಿ ಇಲ್ಲದಿರುವ ಕಾರಣಕ್ಕೆ ಗ್ರಾಮಸ್ಥರ ಮೂಲಕ ಅರ್ಜಿ ಸಲ್ಲಿಸಿ ಅಧಿಕಾರಿಗಳ ಗಮನಕ್ಕೆ ತಂದು, ಬಾಡಿಗೆ ಕಟ್ಟಡದಲ್ಲಿರುವ ಅಂಗನವಾಡಿಗೆ ಸ್ವಂತ ಕಟ್ಟಡ ನಿರ್ಮಿಸಲು ಜಾಗ ಕಾಯ್ದಿರಿಸಿದೆ. ಆದರೆ, ರಾತ್ರೋರಾತ್ರಿ ಅನಧಿಕೃತವಾಗಿ ದೇವಾಲಯ ಕಟ್ಟಲು ಆರಂಭ ಮಾಡಿ, ನಾಮಫಲಕ ಹಾಕಿದ್ದಾರೆ. ಪ್ರಶ್ನೆ ಮಾಡಿದರೆ ಅಸಭ್ಯವಾಗಿ ಮಾತಾಡುವುದು, ಹಲ್ಲೆಗೆ ಮುಂದಾಗುವಂತೆ ಪ್ರಚೋದನೆ ನೀಡಿದ್ದಾರೆ. ಮಕ್ಕಳಿಂದ ಹಿಡಿದು, ಮಹಿಳೆಯರೂ ಕೂಡ ಮುಗಿ ಬೀಳುವಂತೆ ಮಾಡಿದ್ದಾರೆ. ಇದರ ಹಿಂದೆ ಇರುವವರು ಯಾರೇ ಆಗಿರಲಿ ಈ ಜಾಗದಲ್ಲಿ ಅಂಗನವಾಡಿ ಹೊರತುಪಡಿಸಿ ಬೇರೆ ಯಾವುದನ್ನೂ ನಿರ್ಮಾಣ ಮಾಡಲು ಆಸ್ಪದ ನೀಡುವುದಿಲ್ಲ” ಎಂದರು.
ಸ್ಥಳಕ್ಕೆ ಭೇಟಿ ನೀಡಿದ್ದ ಪೊಲೀಸ್ ಸಬ್ ಇನ್‌ಸ್ಪೆಕ್ಟೆರ್ ನಾಗಯ್ಯ ಕಟ್ಟಡ ನಿರ್ಮಿಸುತ್ತಿರುವವರಿಗೆ ಕಟ್ಟಡ ಕಟ್ಟದಂತೆ ಸೂಚಿಸಿ, ತಹಶೀಲ್ದಾರ್ ಅವರು ಈ ಬಗ್ಗೆ ಇತ್ಯರ್ಥಪಡಿಸುವ ತನಕ ಮುಂದುವರೆಯುವಂತಿಲ್ಲವೆಂದು ತಿಳಿಸಿದ್ದಾರೆ. ಕಟ್ಟಡ ನಿರ್ಮಾಣ ಸಂಬಂಧ ದಾಖಲೆ ಕೇಳಿದಾಗ ಯಾವುದೇ ದಾಖಲೆ ಇಲ್ಲದಿರುವುದು ತಿಳಿದುಬಂದಿದೆ.

ಸಿಡಿಪಿಒ ಕಚೇರಿಯ ಸೂಪರ್ ವೈಸರ್ ಜಯಶ್ರೀ ಸ್ಥಳಕ್ಕೆ ಭೇಟಿ ನೀಡಿ ಅಂಗನವಾಡಿ ಹಾಗೂ ಅಂಗನವಾಡಿ ಕಟ್ಟಡ ಕಟ್ಟಲು ಕಾಯ್ದಿರಿಸಿದ ಸ್ಥಳ ಪರಿಶೀಲಿಸಿ, ಅನಧಿಕೃತವಾಗಿ ನಿರ್ಮಿಸುತ್ತಿರುವ ಕಟ್ಟಡದ ಬಗ್ಗೆ ಮಾಹಿತಿ ಕಲೆ ಹಾಕಿದರು. ಅಂಗನವಾಡಿ ಶಿಕ್ಷಕಿ, ಸ್ಥಳೀಯರ ಮಾಹಿತಿ, ದಾಖಲೆ ಕುರಿತಾಗಿ ಮಾಹಿತಿ ಪಡೆದರು.

ಅತ್ತಿಕುಪ್ಪೆ ಸಿದ್ದೇಶ್ ಮಾತನಾಡಿ, “ಸರ್ಕಾರ ಜಾಗ ಕೊಟ್ಟು ಮನೆ ಕಟ್ಟಿಕೊಟ್ಟಿದೆ. ಇಲ್ಲಿ ಆಗಬೇಕಿರುವುದು ಮಕ್ಕಳಿಗೆ ಶಾಲೆ. ಅದಕ್ಕಾಗಿ ಸ್ಥಳೀಯರು, ದಸಂಸ ಶ್ರಮವಹಿಸುತ್ತಿರುವಾಗ ಏಕಾಏಕಿ ಇನ್ಯಾವುದಕ್ಕೋ ರಾತ್ರೋರಾತ್ರಿ ಕಟ್ಟಡ ಮಾಡಲು ಹೋಗುತ್ತಾರೆ ಎಂದರೆ ಇದೆಲ್ಲವೂ ಬಲಾಢ್ಯರ ಕುಮ್ಮಕ್ಕಿನಿಂದ ನಡೆಯುತ್ತಿದೆ. ಪ್ರಶ್ನೆ ಮಾಡಿದರೆ ಗಲಾಟೆ ಮಾಡುವುದನ್ನು ಬಿಟ್ಟು, ಯಾವ ಉದ್ದೇಶಕ್ಕೆ ಹೋರಾಟ ಎನ್ನುವುದನ್ನು ತಿಳಿಯಬೇಕು. ಮಕ್ಕಳ ಭವಿಷ್ಯ ಯೋಚಿಸದೆ ಕಂಡವರ ಮಾತು ಕೇಳಿ ಸಮಾಜದ ಸ್ವಾಸ್ತ್ಯ ಹಾಳುಮಾಡಬಾರದು” ಎಂದರು.

ಜಿಲ್ಲಾ ಸಂಚಾಲಕ ಪ್ರಕಾಶ್ ಮಾತನಾಡಿ, “ಇಲ್ಲಿ ಏಳು ಕುಟುಂಬಗಳಿಗೆ ನಿವೇಶನ ನೀಡಿ, ಮನೆ ಕೊಟ್ಟಿದ್ದು. ಅದರ ಸಂಖ್ಯೆ ಆಗಿಂದಾಗೆ ಸ್ವಲ್ಪ ಹೆಚ್ಚಿದೆ. ತಾಲೂಕು ಆಡಳಿತ ಬೇರೆಯವರಿಗೂ ಮನೆ ಕಲ್ಪಿಸಿಕೊಟ್ಟಿದೆ. ಆದರೆ ನಿಗದಿತ ಕುಟುಂಬಗಳಿಗಿಂತ ಅನಧಿಕೃತವಾಗಿ ಪಡೆದವರೇ ಹೆಚ್ಚು. ಅದರ ಜತೆಗೆ ಬೇರೆ ಬೇರೆಯವರು ಬೇರೆಯವರ ಬೆಂಬಲದಲ್ಲಿ ಬಂದು ಸೇರಿಕೊಂಡಿದ್ದಾರೆ. ಇಲ್ಲಿರುವ ಹಲವು ಜನರಿಗೆ ಹುಣಸೂರಿನಲ್ಲಿ ಉತ್ತಮವಾದ ಮನೆಯಿದೆ. ಆರ್ಥಿಕವಾಗಿ ಚೆನ್ನಾಗಿದ್ದಾರೆ. ಆದರೂ ಬಡವರ ಹೆಸರಿನಲ್ಲಿ ಹಕ್ಕುಪತ್ರ ಪಡೆದಿದ್ದಾರೆ” ಎಂದು ಆರೋಪ ಮಾಡಿದರು.
ಸ್ಥಳೀಯ ನಿವಾಸಿ ವಸಂತ ಮಾತನಾಡಿ, “ಇಲ್ಲಿಯ ಪರಿಸ್ಥಿತಿ ವಿಪರೀತ ಕೆಟ್ಟಿದೆ. ನಮಗೆ ಅಂಗನವಾಡಿ ಬೇಕು. ಅದಕ್ಕಾಗಿ ಇರುವ ಜಾಗಕ್ಕೆ ಬೇರೆಯವರು ದೇವಸ್ಥಾನ ಮಾಡಲು ಹೊರಟಿದ್ದಾರೆ. ಕೇಳಿದರೆ ಗಲಾಟೆ ಮಾಡುತ್ತಾರೆ. ಇಲ್ಲಿ ಹೇಳೋರು ಇಲ್ಲ, ಕೇಳೋರು ಇಲ್ಲ. ಸಿಕ್ಕಸಿಕ್ಕವರೆಲ್ಲ ಮದ್ಯ ಮಾರಾಟ ಮಾಡುತ್ತಿದ್ದಾರೆ. ಹಣವಿಲ್ಲ ಅಂದರೇ ಸಾಲ ಕೊಡ್ತಾರೆ. ದುಡ್ಡು ಕೊಡದೆ ಇದ್ದರೆ ಬೈಕ್ ಸೇರಿದಂತೆ ಮನೆಲ್ಲಿದ್ದ ಯಾವುದೇ ವಸ್ತುಗಳನ್ನಾದರೂ ತೆಗೆದುಕೊಂಡು ಹೋಗೋ ದಂಧೆ ಮಾಡುತ್ತಿದ್ದಾರೆ. ಇಲ್ಲಿಯ ಮಕ್ಕಳೆಲ್ಲ ಕುಡಿಯದು ಕಲಿತು ಹಾಳಾಗುತ್ತಿದ್ದಾರೆ. ಪೊಲೀಸರು ಇತ್ತ ಕಡೆ ಗಮನಹರಿಸಬೇಕು” ಎಂದರು.
ಕಣ್ಣಮ್ಮ ಮಾತನಾಡಿ, “ವಾಸನೆ ತಡಿಯಲು ಆಗಲಿಲ್ಲ. ಕೆಟ್ಟ ವಾಸನೆ ಜತೆಗೆ ಸೊಳ್ಳೆಕಾಟ. ಅಲ್ಲೇ ಅಂಗನವಾಡಿ ಇರುವುದರಿಂದ ಅಲ್ಲಿಗೆ ಮಕ್ಕಳು ಹೋದರೆ ಆರೋಗ್ಯ ಚೆನ್ನಾಗಿ ಇರಲ್ಲ. ಅದಕ್ಕಾಗಿ, ಅರ್ಜಿ ಹಾಕಿ ಹೊಸದಾಗಿ ಅಂಗನವಾಡಿ ಮಾಡಲು ಜಾಗ ಕೇಳಿದ್ದು, ಈಗ ಅಲ್ಲಿ ದೇವಸ್ಥಾನ ಮಾಡುತ್ತೇವೆಂದು ರಾತ್ರಿಯಿಂದ ಕೆಲಸ ಮಾಡುತ್ತಿದ್ದಾರೆ. ಕೇಳಿದರೆ ಗಲಾಟೆ, ಹೊಡಿಯೋಕೆ ಬರುತ್ತಾರೆ” ಎಂದು ಆರೋಪಿಸಿದರು.

ಅಂಗನವಾಡಿ ಶಿಕ್ಷಕಿ ಐಶ್ವರ್ಯ ಮಾತನಾಡಿ, “ಬಾಯಿಗೆ ಬಂದ ಹಾಗೆ ಮಾತಾಡುತ್ತಾರೆ. ಇಲ್ಲಿ ಅಂಗನವಾಡಿ ನಡೆಸಲು ಜಾಗ ಕೊಟ್ಟಿದ್ದೇ ತಪ್ಪಾಯಿತು. ಸೊಂಟದ ಕೆಳಗಿನ ಮಾತುಗಳನ್ನೇ ಆಡುತ್ತ ಅಶ್ಲೀಲವಾಗಿ, ಅಸಭ್ಯವಾಗಿ ಮಾತಾಡುತ್ತಾರೆ. ಒಬ್ಬರೂ ಕೂಡ ಗೌರವದಿಂದ ಮಾತನಾಡುವುದಿಲ್ಲ. ಏಕವಚನದಲ್ಲಿ ಮಾತು. ಕೆಲಸ ಮಾಡಲು ಸಹ ಬಿಡುವುದಿಲ್ಲ. ಇಲ್ಲಿ ಮಕ್ಕಳಿಗೆ ಇರಲು ಆಗುತ್ತಿಲ್ಲ. ಚಿಕ್ಕ ಜಾಗ, ಕೆಟ್ಟ ವಾಸನೆ, ಸೊಳ್ಳೆ ಹೆಚ್ಚಿದೆ. ನಮಗೆ ನಿಗದಿಯಾಗಿರುವ ಜಾಗದಲ್ಲಿ ಅಂಗನವಾಡಿ ನಿರ್ಮಿಸಿ ಕೊಡಬೇಕು” ಎಂದು ಮನವಿ ಮಾಡಿದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ಅ.18 ರಂದು ಯಾದಗಿರಿಯಲ್ಲಿ ರೈತ ಸಮಾವೇಶ : ಬಡಗಲಪುರ ನಾಗೇಂದ್ರ
ದಸಂಸ ಮುಖಂಡರು ತಹಶೀಲ್ದಾರ್ ಮಂಜುನಾಥ್ ಅವರನ್ನು ಭೇಟಿ ಮಾಡಿ ಈ ಬಗ್ಗೆ ಕೇಳಿದಾಗ, ದಾಖಲೆ ತರಿಸಿ ಪರಿಶೀಲನೆ ಮಾಡಿ, ದಾಖಲೆ ಅನುಮೋದಿಸಿ ಜಿಲ್ಲಾಧಿಕಾರಿಗಳಿಗೆ ಕಳಿಸುವಂತೆ ಸೂಚಿಸಿ, ಅಂಗನವಾಡಿ ನಿರ್ಮಿಸಲು ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.





