ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ರಾಜ್ಯದ ಸಾಹಿತ್ಯ-ಸಾಂಸ್ಕೃತಿಕ ಚಳುವಳಿಯಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತಿರುವ ‘ಮೇ ಸಾಹಿತ್ಯ ಮೇಳ’ವು ಮೇ 25 ಹಾಗೂ 26 ರಂದು ಕೊಪ್ಪಳದ ಶಿವಶಾಂತವೀರ ಮಂಗಲ ಭವನದಲ್ಲಿ ಜರುಗಲಿದೆ. ಸಮ್ಮೇಳನದಲ್ಲಿ ಹಲವಾರು ಪ್ರಶಸ್ತಿಗಳನ್ನು ನೀಡಲಾಗುತ್ತದೆ ಎಂದು ಸಮ್ಮೇಳನದ ಆಯೋಜಕರಲ್ಲಿ ಒಬ್ಬರಾದ ಬಸವರಾಜ ಸೂಳಿಬಾವಿ ತಿಳಿಸಿದ್ದಾರೆ.
ಸಮ್ಮೇಳನದಲ್ಲಿ ನೀಡಲಾಗುವ ಪ್ರಶಸ್ತಿಗಳು ಮತ್ತು ಭಾಜನರು
ವಿಭಾ ಸಾಹಿತ್ಯ ಪ್ರಶಸ್ತಿ- ತೀರ್ಥಹಳ್ಳಿಯ ಸವಿರಾಜ್ ಆನಂದ್,
ಬಂಡ್ರಿ ನರಸಪ್ಪ ಸಮಾಜಮುಖಿ ಶ್ರಮಜೀವಿ ಪ್ರಶಸ್ತಿ- ಎಸ್.ಆರ್.ಹಿರೇಮಠ,
ನವಲಕಲ್ ಬೃಹನ್ಮಠ ಶಾಂತವೀರಮ್ಮ ಮಹಾತಾಯಿ ಕಥಾ ಪ್ರಶಸ್ತಿ- ಕೆರೆಕೋಣದ ಮಾಧವಿ ಭಂಡಾರಿ,
ನಿಂಗಪ್ಪ ಸಂಶಿ ರೈತ ಚೇತನ ಪ್ರಶಸ್ತಿ- ಬೆಳಗಾವಿಯ ಶಿವಾಜಿ ಕಾಗಣೇಕರ್,
ಪಂಚಪ್ಪ ಸಮುದಾಯ ಮಾರ್ಗಿ ಪ್ರಶಸ್ತಿ – ಜನಾರ್ದನ(ಜನ್ನಿ) ಮೈಸೂರು,
ಚಂದ್ರಶೇಖರ ಹೊಸಮನಿ ಅಂಬೇಡ್ಕರ್ ಪತ್ರಿಕಾ ಮಾರ್ಗಿ ಪ್ರಶಸ್ತಿ- ಇಂದೂಧರ ಹೊನ್ನಾಪುರ,
ಲಕ್ಷ್ಮಿಬಾಯಿ ಕಟ್ಟಿಮನಿ ಸಮಾಜಮುಖಿ ಮಹಿಳೆ ಪ್ರಶಸ್ತಿ – ಕೊಪ್ಪಳದ ಹುಚ್ಚಮ್ಮ ಚೌಧರಿ ಕುಣಿಕೇರಿ
ಹುಚ್ಚಮ್ಮ ಚೌದ್ರಿ ಕುಣಿಕೇರಿ ಕಿರು ಪರಿಚಯ
ಹುಚ್ಚಮ್ಮ ಶಿವಪ್ಪ ಗೋಂದಿಹೊಸಳ್ಳಿ ಅವರು ಈಗಿನ ಕೊಪ್ಪಳ ಜಿಲ್ಲೆಯ ಹಂದ್ರಾಳ ಗ್ರಾಮದಲ್ಲಿ ಹುಟ್ಟಿ ಬೆಳೆದರು. ಮೂರ‍್ನಾಲ್ಕು ವರ್ಷದ ಬಾಲೆಯಾಗಿದ್ದಾಗಲೇ ಬಸಪ್ಪ ಚೌದ್ರಿ ಎಂಬ ವರನೊಂದಿಗೆ ಮದುವೆಯಾಯಿತು. ಗಂಡನ ಊರು ಕುಣಿಕೇರಿಗೆ ಬಂದಾಗ ಅವರಿಗೆ 13 ವರ್ಷ ವಯಸ್ಸು. ಸಂಸಾರ ಆರಂಭಿಸಿ ನಾಲ್ಕು ವರ್ಷ ಕಳೆಯುವುದರಲ್ಲೇ ಬಸಪ್ಪ ತೀರಿಕೊಂಡರು. ಮಕ್ಕಳಾಗಿರದ ಹದಿನೇಳು ವರ್ಷದ ಯುವತಿ ಹುಚ್ಚಮ್ಮ ವಿಧವೆ ಎನಿಸಿಕೊಂಡಳು. ವಿಧವೆ ಯುವತಿ ಒಂಟಿ ಹೆಣ್ಣಾಗಿ ಭಾರತೀಯ ಸಮಾಜದಲ್ಲಿ ಬದುಕುವುದು ಸುಲಭವಿಲ್ಲ. ಆದರೆ ಧೃಢವಾಗಿ, ದಿಟ್ಟವಾಗಿ ತನ್ನ ಅನ್ನ ತಾನು ದುಡಿದುಕೊಂಡು ಅತಿ ಕಷ್ಟದಿಂದಲೇ ಘನತೆಯ ಬದುಕನ್ನು ಕಟ್ಟಿಕೊಂಡರು. ತನ್ನ ಹೊಲದಲ್ಲಿ ತಾನೇ ಕೈಹಾಕಿ ದುಡಿದು ಸರಳ ಜೀವನ ನಡೆಸಿದರು.
ದಶಕಗಳ ಕೆಳಗಿನ ಮಾತು. ಕುಣಿಕೇರಿ ಊರಿನಲ್ಲೊಂದು ಶಾಲೆಯಿರಲಿಲ್ಲ. ಶಾಲಾ ಕೊಠಡಿ ಕಟ್ಟಲು, ಮಕ್ಕಳು ಆಟವಾಡಲು ಜಾಗವಿರಲಿಲ್ಲ. ಊರಿನಲ್ಲಿ ಜಮೀನ್ದಾರರಿದ್ದರು, ಹೊಲಗಳ ಒಡೆಯರಿದ್ದರು. ಆದರೆ ತುಂಡು ಭೂಮಿಗಾಗಿ ಜೀವಮಾನವಿಡೀ ರಕ್ತಸಿಕ್ತ ಕದನ ನಡೆಸಲೂ ಸಿದ್ಧವಾಗುವ ಸಮಾಜದಲ್ಲಿ ಶಾಲೆಗಾಗಿ ಪುಕ್ಕಟೆ ಭೂಮಿ ಕೊಡಲು ಯಾರೂ ಸಿದ್ಧರಿರಲಿಲ್ಲ. ನೂರಾರು ಎಕರೆ ಹೊಲವಿರುವವರು ಒಂದೆಕರೆ ಕೊಡಲೂ ಒಪ್ಪಲಿಲ್ಲ.
ಆಗ ಹುಚ್ಚಮ್ಮ ಯೋಚಿಸಿದರು. ತನಗೆ ಮಕ್ಕಳಿಲ್ಲ. ಸಾಕಬೇಕಾದ ಕುಟುಂಬವಿಲ್ಲ. ಜಮೀನು ಇಟ್ಟುಕೊಂಡು ಏನು ಮಾಡಲಿ? ತನ್ನಂತೆ ನಿರಕ್ಷರಿಯಾಗಿ ಕಷ್ಟದ ಬದುಕು ನಡೆಸುವ ಪರಿಸ್ಥಿತಿ ತನ್ನೂರ ಮಕ್ಕಳಿಗೆ ಬಾರದೆ ಇರಲಿ, ಊರಿನಲ್ಲೊಂದು ಶಾಲೆ ಶುರುವಾಗಿ ಮಕ್ಕಳೆಲ್ಲ ವಿದ್ಯಾವಂತರಾಗಲಿ ಎಂದು ಯೋಚಿಸಿದರು. ಇದ್ದಷ್ಟು ದಿವಸ ದುಡಿದು ಬದುಕುವೆ ಎಂದು ತನ್ನ ಪಾಲಿನ ಎರಡೆಕರೆ ಜಮೀನನ್ನು ಶಾಲೆಗೆ ದಾನ ಮಾಡಿಬಿಟ್ಟರು. ಅವರ ತಂದೆ ಶಿವಪ್ಪ ಸಹಾ ತವರೂರು ಹಂದ್ರಾಳ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಗೆ ಒಂದು ಎಕರೆ ಜಮೀನು ದಾನ ಮಾಡಿದ್ದ ನೆನಪು ಅವರಿಗಿತ್ತು. ತಂದೆಯ ಉದಾತ್ತ ನಡೆಯನ್ನೇ ಮಗಳೂ ಅನುಸರಿಸಿದಳು.
ನಂತರ? ಬದುಕು ನಿಭಾಯಿಸಲು ಹುಚ್ಚಮ್ಮ ಕೂಲಿ ಕೆಲಸವನ್ನೇ ನಂಬಿಕೊಂಡರು. ಕೆಲವು ವರ್ಷಗಳ ಬಳಿಕ ತನ್ನ ಜಮೀನಿನಲ್ಲಿ ಆರಂಭವಾದ ಶಾಲೆಯಲ್ಲಿ ಬಿಸಿಯೂಟ ನೌಕರರಾಗಿ ಸೇರಿಕೊಂಡರು. ಮಕ್ಕಳಿಗೆ ಅಕ್ಷರದ ತುತ್ತುಣಿಸಲು ಜಾಗ ನೀಡಿದ ಆ ಮಹಾಮನಸು, 25 ವರ್ಷಗಳ ಕಾಲ ಮಕ್ಕಳಿಗೆ ತುತ್ತನ್ನೂ ಉಣಿಸಿತು. ಸರ್ಕಾರಿ ಲೆಕ್ಕದ ಪ್ರಕಾರ ಅವರೀಗ ವೃತ್ತಿಯಿಂದ ನಿವೃತ್ತರಾಗಿದ್ದಾರೆ. ಆದರೆ ಈಗಲೂ ಶಾಲೆಗೊಮ್ಮೆ ಹೋಗಿಬರುತ್ತಾರೆ. ತಾವು ಪ್ರೀತಿಯಿಂದ ಸಾಕಿ ಸಲಹಿದ ದೀಪಾ ಅವರ ಕುಟುಂಬದೊಡನೆ ಜೀವನ ನಡೆಸುತ್ತಿದ್ದಾರೆ. ರಾಜ್ಯೋತ್ಸವ ಪ್ರಶಸ್ತಿಯೂ ಸೇರಿದಂತೆ ಹಲವಾರು ಪ್ರಶಸ್ತಿಗಳು ಸಂದಿವೆ.
ಊರಲ್ಲೊಂದು ಶಾಲೆಯಾಗಲೆಂದು ತನ್ನ ಪಾಲಿನ ಜಮೀನು ಪೂರ್ತಿ ದಾನ ನೀಡುವ ಮೂಲಕ ಸಮಾಜಮುಖಿಯಾಗಿ ಬದುಕನ್ನು ತೆತ್ತುಕೊಂಡ ಹುಚ್ಚವ್ವ ಸಮುದಾಯಕ್ಕೆ ಮಾದರಿಯೆನಿಸುವ ಚೇತನ. ಅಂತಹ ಅಕ್ಷರದಾತೆಗೆ ‘ಲಕ್ಷ್ಮಿಬಾಯಿ ಕಟ್ಟಿಮನಿ ಸಮಾಜಮುಖಿ ಮಹಿಳೆ’ ಪ್ರಶಸ್ತಿಯನ್ನು ಕೊಟ್ಟು ಗೌರವಿಸಲು ‘ಮೇ ಸಾಹಿತ್ಯ ಮೇಳ ಬಳಗ’ವು ಹರ್ಷಿಸುತ್ತದೆ. ಅವರಿಗೆ ಆರೋಗ್ಯ, ನೆಮ್ಮದಿಯ ಬದುಕು ಸದಾ ಸಿಗಲೆಂದು ಹಾರೈಸುತ್ತೇವೆ.




