ಮಾದಕ ವಸ್ತು ಸಾಗಾಟದ ವಿರುದ್ಧ ಉಡುಪಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಎಂ.ಡಿ.ಎಂ.ಎ (MDMA) ಪೌಡರ್ ಸಾಗಾಟ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿದ್ದಾರೆ.
ಉಡುಪಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಪ್ರಭು ಡಿ.ಟಿ ಅವರ ಮಾರ್ಗದರ್ಶನದಲ್ಲಿ, ಉಡುಪಿ ನಗರ ಠಾಣಾ ಪ್ರಭಾರ ಪೊಲೀಸ್ ನಿರೀಕ್ಷಕರಾದ ಮಹೇಶ್ ಪ್ರಸಾದ್ ನೇತೃತ್ವದ ತಂಡವು ಉಡುಪಿ ತಾಲೂಕಿನ ಶಿವಳ್ಳಿ ಗ್ರಾಮದ ಕರಂಬಳ್ಳಿ ರಾಮಬೆಟ್ಟು ಸಮೀಪ ಸಾರ್ವಜನಿಕ ಸ್ಥಳದಲ್ಲಿ ಈ ಕಾರ್ಯಾಚರಣೆ ನಡೆಸಿದೆ.
ಆಟೋರಿಕ್ಷಾದಲ್ಲಿ ನಿಷೇಧಿತ ಮಾದಕ ವಸ್ತು ಮಾರಾಟಕ್ಕೆ ತೊಡಗಿದ್ದ ಶಿವಳ್ಳಿ ಗ್ರಾಮದ ದೊಡ್ಡನಗುಡ್ಡೆ ಮಸೀದಿ ಹತ್ತಿರದ ನಿವಾಸಿ ಅಬ್ದುಲ್ ರೌಫ್ (26) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಪೊಲೀಸರು ಆರೋಪಿಯಿಂದ 7.59 ಗ್ರಾಂ ತೂಕದ ಎಂ.ಡಿ.ಎಂ.ಎ ಪೌಡರ್ (ಅಂದಾಜು ಮೌಲ್ಯ ರೂ.15,000), ಮಾದಕ ವಸ್ತು ಮಾರಾಟದಿಂದ ಗಳಿಸಿದ್ದ ರೂ.3,100 ನಗದು ಹಾಗೂ ಸಂಖ್ಯೆಯ ಕಪ್ಪು–ಹಳದಿ ಬಣ್ಣದ ಆಟೋರಿಕ್ಷಾವನ್ನು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಸೊತ್ತಿನ ಒಟ್ಟು ಮೌಲ್ಯ ರೂ.3,23,100 ಆಗಿರುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಮುಂದಿನ ತನಿಖೆ ಮುಂದುವರಿದಿದೆ. ಕಾರ್ಯಾಚರಣೆಯಲ್ಲಿ ಉಡುಪಿ ನಗರ ಪೊಲೀಸ್ ಠಾಣೆಯ ಪಿಎಸ್‌ಐ ಭರತೇಶ್ ಕಂಕಣವಾಡಿ, ಗೋಪಾಲ ಕೃಷ್ಣ ಜೋಗಿ ಸೇರಿದಂತೆ ಸಿಬ್ಬಂದಿಗಳಾದ ಹರೀಶ್ ನಾಯ್ಕ, ಪ್ರಸನ್ನ ಸಿ., ನೇತ್ರಾವತಿ, ಸತೀಶ್ ಪಳ್ಳಿ, ಹೇಮಂತ್ ಕುಮಾರ್, ಸಂತೋಷ್ ರಾಥೋಡ್ ಹಾಗೂ ಆನಂದ್ ಅವರುಗಳು ಪಾಲ್ಗೊಂಡಿದ್ದರು.





