ಮಂಡ್ಯ ಜಿಲ್ಲೆ, ಕೃಷ್ಣರಾಜಪೇಟೆ ತಾಲ್ಲೂಕು, ಮೂಡನ ಹಳ್ಳಿ ಗ್ರಾಮದ ರೈತ ಸೋಮವಾರ ಬೆಳ್ಳಿಗೆ ನಗರದ ಕಾವೇರಿ ಉದ್ಯಾನವನದಲ್ಲಿ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದ ಮಂಜೇಗೌಡ (55) ರನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುತ್ತಾರೆ. ಅವರ ಮೃತ ದೇಹವನ್ನು ಕೃಷಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎನ್ ಚೆಲುವರಾಯಸ್ವಾಮಿ ಅವರು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಭೇಟಿ ನೀಡಿ ಮೃತ ರೈತನ ಶವ ವಿಕ್ಷಿಸಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಮೃತ ಮಂಜೇಗೌಡ ಕೆ.ಆರ್ ಪೇಟೆ ತಾಲ್ಲೂಕಿನ ಮಲ್ಲೇನಹಳ್ಳಿಯ ಸ.ನಂ 103 ಅರಣ್ಯ ಇಲಾಖೆಗೆ ಸೇರಿದ ಬೀಳು ಜಾಗದಲ್ಲಿ ಕಲ್ಲುಗಳನ್ನು ತೆಗೆದು ವ್ಯವಸಾಯ ಮಾಡುತ್ತಿರುತ್ತಾರೆ. ಸದರಿ ಜಾಗ ಅರಣ್ಯ ಇಲಾಖೆಯ ವ್ಯಾಪ್ತಿಗೆ ಬರುವುದರಿಂದ ಅರಣ್ಯ ಇಲಾಖೆಯ ಸಿಬ್ಬಂದಿಗಳು ಸ.ನಂ 103 ರಲ್ಲಿ ವ್ಯವಸಾಯ ಮಾಡಬಾರದು ಎಂದು ತಿಳಿಸಿರುತ್ತಾರೆ.
ಮಂಜೇಗೌಡ ತಮ್ಮ ಕುಟುಂಬದಲ್ಲಿ 10 ಜನ ವಾಸವಾಗಿದ್ದು ಯಾವುದೇ ಜಮೀನು ಇರುವುದಿಲ್ಲವೆಂದು ಮನವಿ ಸಲ್ಲಿಸಿರುತ್ತಾರೆ. ಆದರೆ, ದಾಖಲೆಗಳನ್ನು ಪರಿಶೀಲಿಸಿ ನೋಡಿದಾಗ ಮಂಜೇಗೌಡರ ಹೆಸರಿನಲ್ಲಿ ಒಟ್ಟು 4 ಎಕ್ಕರೆ 1 ಗುಂಟೆ ಪಹಣಿಯಿರುವುದು ಕಂಡು ಬಂದಿರುತ್ತದೆ.
ಮಂಜೇಗೌಡ ಕರ್ನಾಟಕ ಗ್ರಾಮೀಣ ಬ್ಯಾಂಕ್ ನಲ್ಲಿ ದಿನಾಂಕ-14-08-2014 ರಲ್ಲಿ ರೂ ₹3,50,000 ರೂಪಾಯಿ ಬೆಳೆ ಸಾಲ ಪಡೆದಿದ್ದು, ಪ್ರಸ್ತುತ ₹7,79,613 ರೂಪಾಯಿ ಬಾಕಿ ಪಾವತಿ ಮಾಡದೇ ಉಳಿಸಿಕೊಂಡಿರುತ್ತಾರೆ ಎಂಬ ಮಾಹಿತಿಯನ್ನು ಕುಟುಂಬಸ್ಥರು ಸಚಿವರಿಗೆ ನೀಡಿರುತ್ತಾರೆ.
ಸಚಿವ ಎನ್. ಚೆಲುವರಾಯಸ್ವಾಮಿ ಅವರು ಮೃತ ರೈತನ ಕುಟುಂಬಸ್ಥರಿಗೆ 5 ಲಕ್ಷ ಪರಿಹಾರ ಸಚಿವರು ಘೋಷಿಸಿದರು. ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಹೆಚ್ಚುವರಿ ಪರಿಹಾರ ನೀಡುವುದಾಗಿ ಭರವಸೆ ನೀಡಿದರು.
ಮೃತ ರೈತನ ಜಮೀನು ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಸದರಿ ಜಾಗವನ್ನು ಜಂಟಿ ಸರ್ವೆ ನಡೆಸಿ ಸ್ಥಳವೇನಾದರೂ ಅರಣ್ಯ ಇಲಾಖೆಗೆ ಸೇರದಿದ್ದರೆ ಸದರಿ ಜಾಗವನ್ನು ಕುಟುಂಬಸ್ಥರಿಗೆ ನೀಡುವುದಾಗಿ ಸಚಿವರು ಭರವಸೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಕೌಶಲ್ಯದಿಂದ ಜಾಗತಿಕ ಸಾಧ್ಯತೆಗಳತ್ತ; ಬೆಂಗಳೂರು ಕೌಶಲ್ಯ ಶೃಂಗಸಭೆ 2025 ಯಶಸ್ವಿ ಮುಕ್ತಾಯ
ಭೇಟಿ ವೇಳೆ ಜಿಲ್ಲಾಧಿಕಾರಿ ಡಾ ಕುಮಾರ ಸೇರಿದಂತೆ ಇನ್ನಿತರರು ಇದ್ದರು.





