ಮೈಸೂರು ಸಹಕಾರ ಕ್ಷೇತ್ರದಲ್ಲಿ ತಮ್ಮ ಪ್ರಾಬಲ್ಯ ಮುಂದುವರಿಸಿರುವ ಹುಣಸೂರು ಕ್ಷೇತ್ರದ ಶಾಸಕ ಜಿ.ಡಿ. ಹರೀಶ್ ಗೌಡ ಅವರು ಪ್ರತಿಷ್ಠಿತ ಮೈಸೂರು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಆ ಮೂಲಕ ಮೈಸೂರು ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕರಾಗಿ ಆಯ್ಕೆಯಾದ ಮೊದಲ ಅವಧಿಯಲ್ಲೇ ಅವಿರೋಧ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಮೈಸೂರು ಜಿಲ್ಲಾ ಸಹಕಾರ ಯೂನಿಯನ್‌ನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಸ್ಥಾನಕ್ಕೆ ಶನಿವಾರ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಶಾಸಕ ಜಿ.ಡಿ.ಹರೀಶ್ ಗೌಡ ಅಧ್ಯಕ್ಷರಾಗಿ ಆಯ್ಕೆಯಾದರೆ. ಉಪಾಧ್ಯಕ್ಷರಾಗಿ ಬಿ.ಎನ್. ಸದಾನಂದ ಅವರುಗಳು ಅವಿರೋಧವಾಗಿ ಆಯ್ಕೆಗೊಂಡರು.
ಮೈಸೂರು ಜಿಲ್ಲಾ ಸಹಕಾರ ಯೂನಿಯನ್ ಬ್ಯಾಂಕಿನಲ್ಲಿ ಶಾಸಕ ಜಿ.ಟಿ.ದೇವೇಗೌಡ, ಎಚ್.ವಿ. ರಾಜೀವ್ ಅವರೊಂದಿಗೆ ಕೆ.ಎಸ್.ಕುಮಾರ್, ಶಿವಗಾಮಿ, ಪ್ರಶಾಂತ್ ತಾತಾಚಾರ್, ಸೋಮಶೇಖರ್, ಕೆ.ಉಮಾಶಂಕರ್, ಎ.ಟಿ.ಸೋಮಶೇಖರ್, ಕುರಹಟ್ಟಿ ಮಹೇಶ್, ಹನಮನಾಳು ಸಿದ್ದೇಗೌಡ, ಕೆ.ಕುಮಾರ್, ಮಲ್ಲಣ್ಣ, ಬಿ.ಎನ್. ಸದಾನಂದ, ಮರ್ಚೇಂಟ್ಸ್ ಬ್ಯಾಂಕ್ ಆನಂದ್, ಜಿ.ವಿ.ಗುರುರಾಜ್ ಸೇರಿದಂತೆ ಒಟ್ಟು 15 ಸದಸ್ಯರಿದ್ದಾರೆ. ಆದರೆ, ಬ್ಯಾಂಕಿನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆ ಪ್ರಕ್ರಿಯೆಯಲ್ಲಿ ಶಾಸಕ ಜಿ.ಟಿ. ದೇವೇಗೌಡ ಹಾಗೂ ಎಚ್.ವಿ. ರಾಜೀವ್ ಅವರುಗಳು ಗೈರಾಗಿದ್ದರು.
ಒಟ್ಟು 15 ನಿರ್ದೇಶಕರ ಪೈಕಿ ಎರಡು ಕ್ಷೇತ್ರ ಹೊರತುಪಡಿಸಿ ಉಳಿದೆಲ್ಲಾ ಕ್ಷೇತ್ರದಲ್ಲಿ ಅವಿರೋಧವಾಗಿ ಆಯ್ಕೆಯಾಗಿತ್ತು. ಈ ಪೈಕಿ ಇತರೆ ಕ್ಷೇತ್ರದಲ್ಲಿ ರಾಜಕುಮಾರ್ 5 ಮತ, ಪ್ರಸನ್ನ 7 ಮತ ಪಡೆದು ಸೋಲುಂಡರೆ 18 ಮತ ಪಡೆದು ಹನುಮಾನಾಳ್ ಸಿದ್ದೇಗೌಡ ಗೆದ್ದಿದ್ದರು. ಪತ್ತಿನ ಸಹಕಾರ ಸಂಘದ ಕ್ಷೇತ್ರದಲ್ಲಿ 27 ಮತ ಪಡೆದ ಪ್ರಶಾಂತ್ ತಾತಾಚಾರ್ 1 ಮತಗಳಿಸಿದ ಲಕ್ಷೀಶ್ ಎದುರು ಭರ್ಜರಿ ಗೆಲುವು ಸಾಧಿಸಿ ನಿರ್ದೇಶಕರಾದರು.
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳಿ ಅಧ್ಯಕ್ಷ ಯೂನಿಯನ್ ನಿರ್ದೇಶಕ ಜಿ.ಟಿ.ದೇವೇಗೌಡ ಮತ್ತು ಯುನಿಯನ್ ಮಾಜಿ ಅಧ್ಯಕ್ಷ ಹಾಗೂ ಹಾಲಿ ನಿರ್ದೇಶಕ ಹೆಚ್ ವಿ ರಾಜೀವ್ ಇಬ್ಬರು ಗೈರು ಹಾಜರಿಯಾಗುವ ಮೂಲಕ ಅಚ್ಚರಿ ಮೂಡಿಸಿದರು. ಉಳಿದ 13 ಮಂದಿ ಹಾಜರಾಗಿ ಜಿ.ಡಿ.ಹರೀಶ್ ಗೌಡರ ಅವಿರೋಧ ಆಯ್ಕೆಗೆ ಸಹಕರಿಸಿದರು.
ಮೈಸೂರು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜಿ.ಡಿ. ಹರೀಶ್ ಹೌಡ, “ಇತ್ತೀಚೆಗೆ ಸಹಕಾರ ಕ್ಷೇತ್ರದಲ್ಲಿ ರಾಜ್ಯ ಸರ್ಕಾರದ ಹಸ್ತಕ್ಷೇಪ ಹೆಚ್ಚಾಗಿದೆ. ಎಂಸಿಡಿಸಿಸಿ ಬ್ಯಾಂಕಿನ ಚುನಾವಣೆಯಲ್ಲೂ ಸರ್ಕಾರ ಹಸ್ತಕ್ಷೇಪ ಮಾಡಿತ್ತು. ಆ ಚುನಾವಣೆಯಲ್ಲಿ ಏನಾಯ್ತು ಎಂಬುದು ಇನ್ನೂ ಕೆಲವರಿಗೆ ಗೊತ್ತಿಲ್ಲ. ಅಲ್ಲದೇ, ಆ ಚುನಾವಣೆ ಪ್ರಕ್ರಿಯೆ ಇನ್ನೂ ಮುಗಿದಿಲ್ಲ, ಮುಗಿಯಲು ಸರ್ಕಾರ ಬಿಡುತ್ತಿಲ್ಲ. ಹೀಗಾಗಿ, ಸಹಕಾರ ಕ್ಷೇತ್ರದಲ್ಲಿ ಸರ್ಕಾರ ಹಸ್ತಕ್ಷೇಪ ಮಾಡದೆ, ಸ್ವಾಯತ್ತತೆಯಿಂದ ಕಾರ್ಯನಿರ್ವಹಿಸಲು ಬಿಡಬೇಕು. ನಾವು ಮೀಸಲಾತಿ ವಿರೋಧಿಗಳಲ್ಲ. ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ಕುಸಿದಿದ್ದು, ಜನರ ಸಮಸ್ಯೆಗಳ ಬಗ್ಗೆ ಸರ್ಕಾರದ ಯಾರೊಬ್ಬರು ಗಮನಹರಿಸುತ್ತಿಲ್ಲ” ಎಂದು ಆರೋಪಿಸಿದರು.
ಮೈಸೂರಿನಲ್ಲೂ ಕಾನೂನು ಮತ್ತು ಸುವ್ಯವಸ್ಥೆ ಕುಸಿದಿದ್ದು, ರಾಜ್ಯ ಸರ್ಕಾರ ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳಬೇಕಿದೆ. ಮೈಸೂರಿನಲ್ಲಿ ಇತ್ತೀಚೆಗೆ ನಡೆದ ಅಪ್ರಾಪ್ತ ಬಾಲಕಿಯ ಕೊಲೆ ಪ್ರಕರಣದಲ್ಲಿ ರಾಜ್ಯ ಸರ್ಕಾರದ ನಡೆ ಬೇಸರ ಉಂಟು ಮಾಡಿದೆ. ಮೃತ ಬಾಲಕಿಯ ಕುಟುಂಬಕ್ಕೆ ರಾಜ್ಯ ಸರ್ಕಾರ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ವಿಶೇಷ ವಿಡಿಯೋ ವೀಕ್ಷಿಸಿ :https://www.facebook.com/share/v/17Ga2GtN2M/
ರಾಜ್ಯದಲ್ಲಿ ಸುರಿಯುತ್ತಿರುವ ಮಳೆಯಿಂದ ಉಂಟಾಗಿರುವ ಅನಾಹುತದ ಬಗ್ಗೆ ರಾಜ್ಯ ಸರ್ಕಾರ ತ್ವರಿತವಾಗಿ ಸರ್ವೇ ಮಾಡಬೇಕು. ಕಲಬುರ್ಗಿ ಹಾಗೂ ಇನ್ನಿತರ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಿಎಂ ಸಿದ್ದರಾಮಯ್ಯ ಅವರು ಖುದ್ದು ಪರಿಶೀಲನೆ ನಡೆಸಿದ್ದಾರೆ. ಆದರೆ ಈ ಭಾಗದಲ್ಲಿ ಉಂಟಾಗಿರುವ ಬೆಳೆ ನಷ್ಟದ ಕುರಿತು ಸರ್ವೇ ಮಾಡಿಸಿಲ್ಲ. ಸರ್ವೇ ಮಾಡದೇ ಪರಿಹಾರ ನಿಗದಿ ಮಾಡಲಾಗುವುದಿಲ್ಲ. ಆದ್ದರಿಂದ, ಸರ್ಕಾರ ಬೆಳೆ ಹಾನಿ ಕುರಿತು ತ್ವರಿತವಾಗಿ ಸರ್ವೇ ಕಾರ್ಯ ನಡೆಸಬೇಕೆಂದು ಒತ್ತಾಯಿಸಿದರು.





