ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ಕ್ಷೇತ್ರದ ಶಾಸಕರಾದ ಹೆಚ್.ಟಿ. ಮಂಜು ತಮ್ಮ ಹುಟ್ಟೂರಿನಲ್ಲಿ ದಾಖಲಾತಿ ಇಲ್ಲದೆ ಮುಚ್ಚಿಹೋಗಿದ್ದ ಸರ್ಕಾರಿ ಶಾಲೆಯನ್ನು ಪುನರ್ ಆರಂಭಿಸಲು ತಮ್ಮದೇ ಖಾಸಗಿ ಶಾಲೆಯನ್ನು ಮುಚ್ಚಿ ಅಲ್ಲಿದ್ದ ಮಕ್ಕಳನ್ನೆಲ್ಲ ಸರ್ಕಾರಿ ಶಾಲೆಗೆ ದಾಖಲಿಸುವುದರ ಮೂಲಕ ಕನ್ನಡ ಶಾಲೆಯೊಂದನ್ನು ಉಳಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವೈ.ಕೆ. ತಿಮ್ಮೇಗೌಡ ಪ್ರಸಂಶಿಸಿದ್ದಾರೆ.
ತಾಲ್ಲೂಕಿನ ಶೀಳನೆರೆ ಹೋಬಳಿಯ ಹರಳಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2025–26ನೇ ಸಾಲಿನ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಬಹುತೇಕ ರಾಜಕಾರಣಿಗಳು ಸರ್ಕಾರಿ ಶಾಲೆಗಳ ಅಭಿವೃದ್ಧಿ ಬಗ್ಗೆ ಮಾತನಾಡುವುದಷ್ಟೇ ಮಾಡುತ್ತಾರೆ. ಆದರೆ, ಶಾಸಕ ಹೆಚ್.ಟಿ. ಮಂಜು ಪ್ರಾಥಮಿಕ ವಿದ್ಯಾಭ್ಯಾಸ ಮಾಡಿದ ಹುಟ್ಟೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಎರಡು ವರ್ಷಗಳಿಂದ ಮಕ್ಕಳ ದಾಖಲಾತಿ ಇಲ್ಲದೆ ಮುಚ್ಚಿಹೋಗಿದ್ದನ್ನು ಕಂಡು ಪುನರ್ ಆರಂಭಿಸಲು ಮುಂದಾಗಿದ್ದಾರೆ.
ತಮ್ಮದೇ ಮಾಲೀಕತ್ವದ ನೀತಿಮಂಗಲದ ಆದರ್ಶ ಕಾನ್ವೆಂಟ್ ನ್ನು ಮುಚ್ಚಿಸಿ, ಶಾಲೆಯಲ್ಲಿದ್ದ ಎಲ್ಲಾ ಮಕ್ಕಳನ್ನು ಹರಳಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ದಾಖಲಿಸುವ ಮೂಲಕ ಕನ್ನಡ ಶಾಲೆ ಉಳಿಸಿದ ಹೆಗ್ಗಳಿಕೆ ಅವರದ್ದಾಗಿದೆ. ಜೊತೆಗೆ ವಿವಿಧ ಶಾಲೆಗಳಲ್ಲಿ ಉತ್ತಮ ಶಿಕ್ಷಕರಾಗಿ ಹೆಸರು ಮಾಡಿರುವ ಶಿಕ್ಷಕರನ್ನು ನೇಮಕ ಮಾಡಿಸುವ ಮೂಲಕ ಉತ್ತಮ ಶೈಕ್ಷಣಿಕ ವಾತಾವರಣ ನಿರ್ಮಿಸಿದ್ದಾರೆ ಎಂದು ಹೇಳಿದರು.
ಅಗತ್ಯವಿರುವ ಗ್ರಾಮಗಳಲ್ಲಿ ಮಕ್ಕಳ ಮನೆ ಹಾಗೂ ಪೂರ್ವ ಪ್ರಾಥಮಿಕ ಶಾಲೆಗಳನ್ನು ಆರಂಭಿಸಲು ಶಿಕ್ಷಣ ಇಲಾಖೆಗೆ ಸೂಚನೆ ನೀಡಲಾಗಿದೆ. ಅದರಂತೆ, ದಾಖಲಾತಿ ಹೆಚ್ಚಿಸಲು ಶಿಕ್ಷಣ ಇಲಾಖೆ ಗ್ರಾಮಸ್ಥರು ಹಾಗೂ ಹಿರಿಯ ವಿದ್ಯಾರ್ಥಿಗಳ ಸಹಕಾರದೊಂದಿಗೆ ಕ್ರಮ ಕೈಗೊಳ್ಳುತ್ತಿದೆ ಎಂದರು.
ಹರಳಹಳ್ಳಿ ಸರ್ಕಾರಿ ಶಾಲೆ ಯಾವುದೇ ಖಾಸಗಿ ಕಾನ್ವೆಂಟ್ ಶಾಲೆಯ ಮಕ್ಕಳಿಗಿಂತ ಕಡಿಮೆ ಇಲ್ಲ. ಬಯಸಿದರೆ ಬಂದು ಪರೀಕ್ಷೆ ನಡೆಸಿ ಬಳಿಕ ನಿಮ್ಮ ಮಕ್ಕಳನ್ನು ಇಲ್ಲಿ ಸೇರಿಸಬಹುದು. ಸರ್ಕಾರಿ ಶಾಲೆಗಳು ಉಳಿದರೆ ಮಾತ್ರ ಬಡ ಹಾಗೂ ಮಧ್ಯಮ ವರ್ಗದ ಮಕ್ಕಳಿಗೆ ಉತ್ತಮ ಶಿಕ್ಷಣ ಪಡೆಯಲು ಅವಕಾಶ ದೊರೆಯುತ್ತದೆ. ನನ್ನ ಅಧಿಕಾರಾವಧಿಯಲ್ಲಿ ತಾಲ್ಲೂಕಿನಲ್ಲಿ ಒಂದೇ ಒಂದು ಸರ್ಕಾರಿ ಶಾಲೆಯೂ ಮುಚ್ಚದಂತೆ ಅಗತ್ಯ ಸಹಕಾರ ನೀಡುತ್ತೇನೆ ಎಂದು ಶಾಸಕ ಹೆಚ್.ಟಿ. ಮಂಜು ಭರವಸೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಕೆ ಆರ್ ಪೇಟೆ | ಕೌಟುಂಬಿಕ ಕಲಹ; ದಂಪತಿಗಳ ಅಸಹಜ ಸಾವು
ಕಾರ್ಯಕ್ರಮದಲ್ಲಿ ತಾಲ್ಲೂಕು ಪಶುವೈದ್ಯ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಹೆಚ್.ಎಸ್. ದೇವರಾಜು, ಶಿಕ್ಷಣ ಸಂಯೋಜಕ ಸುರೇಶ್, ಸಿ.ಆರ್.ಪಿ. ಮಹೇಶ್, ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎನ್.ಆರ್. ಆನಂದಕುಮಾರ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪೂರ್ಣಚಂದ್ರ ತೇಜಸ್ವಿ, ಟಿಎಪಿಸಿಎಂಎಸ್ ನಿರ್ದೇಶಕ ಹೆಚ್.ಟಿ. ಲೋಕೇಶ್, ಎಂ.ಎನ್. ವೆಂಕಟೇಶ್, ಪಿಡಿಓ ಬಸವಶೆಟ್ಟಿ, ಶಿಕ್ಷಕ ವಿಜಯ್, ಸಹ ಶಿಕ್ಷಕರಾದ ಸಿ. ರಾಧಾ, ಅನುಸೂಯ, ಇಂದ್ರಾಕ್ಷಿ, ಮಂಜುಳಾ, ಗ್ರಾಪಂ ಮಾಜಿ ಅಧ್ಯಕ್ಷ ಅಶೋಕ್, ಉಮಾ ಶ್ರೀಧರ್, ಮುಖಂಡರಾದ ಸುರೇಶ್, ವಿಜಯೇಂದ್ರ, ನಂದೀಶ್, ಕೆ.ಎಲ್. ಮಹೇಶ್, ಶಿವಲಿಂಗಣ್ಣ, ಶಾಸಕರ ಆಪ್ತ ಸಹಾಯಕ ಅರಳಕುಪ್ಪೆ ಪ್ರತಾಪ್ ಇದ್ದರು.





