ಕೊಡಗು ಜಿಲ್ಲೆ, ಮಡಿಕೇರಿ ತಾಲ್ಲೂಕಿನ ಹೊದ್ದೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕಡಬಗೇರಿಯಲ್ಲಿ ನಿವೇಶನ ರಹಿತರಿಗೆ ನೀಡಲಾದ ನೂತನ ಬಡಾವಣೆಗೆ ಡಾ. ಮಂತರ್ ಗೌಡ ಬಡಾವಣೆ ಎಂದು ನಾಮಕರಣ ಮಾಡಲು ಫಲಾನುಭವಿಗಳು ಕೋರಿದ್ದನ್ನು ಶಾಸಕರು ನಿರಾಕರಿಸಿದ್ದು, ಬದಲಿಗೆ ಡಾ ಬಿ.ಆರ್. ಅಂಬೇಡ್ಕರ್ ಹೆಸರಿಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಕೊಡಗು ಜಿಲ್ಲಾಡಳಿತ ಹಾಗೂ ಹೊದ್ದೂರು ಗ್ರಾಮ ಪಂಚಾಯ್ತಿ ಸಹಯೋಗದಲ್ಲಿ ಕಡಬಗೇರಿಯಲ್ಲಿ ನಡೆದ ಹಕ್ಕುಪತ್ರ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಮಂತರ್ ಗೌಡ, ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ರವರು ನಾವೆಲ್ಲ ಹತ್ತು ಜನ್ಮ ಎತ್ತಿದರೂ ಸಾಧಿಸಲು ಸಾಧ್ಯವಾಗದಂತಹ ಮಹಾನ್ ಸಾಧನೆಯನ್ನು ಈ ದೇಶದ ಜನತೆಗಾಗಿ ಮಾಡಿದ್ದಾರೆ. ಅಂತಹ ಮಹಾನ್ ವ್ಯಕ್ತಿಯ ಹೆಸರನ್ನು ಬಡಾವಣೆಗೆ ನಾಮಕರಣ ಮಾಡುವುದು ಸೂಕ್ತ ಎಂದರು. ಒಟ್ಟು 60 ಜನ ಅರ್ಹ ಮತ್ತು ಆಯ್ದ ಫಲಾನುಭವಿಗಳನ್ನು ಗುರುತಿಸಿ ನಿವೇಶನ ನೀಡಲಾಗಿದ್ದು, ಸದ್ಯದಲ್ಲಿ ಮನೆ ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದರು. ಈ ನಿವೇಶನಗಳು ಸರ್ಕಾರದ ಯೋಜನೆ ಅನುಸಾರ ಉಚಿತವಾಗಿ ನೀಡಲಾಗಿದ್ದು ಯಾರಿಗೂ ಕೂಡ ಒಂದು ರೂಪಾಯಿಯನ್ನು ನೀಡಬಾರದು.
ಅಧಿಕಾರಿಗಳು ಅಥವಾ ಯಾವುದೇ ವಕ್ತಿಯಾಗಲಿ ಹಣಕ್ಕೆ ಬೇಡಿಕೆ ಇಟ್ಟಲ್ಲಿ ನೇರವಾಗಿ ಜಿಲ್ಲಾಧಿಕಾರಿಗಳಿಗೆ ದೂರು ನೀಡುವಂತೆ ಸಲಹೆ ನೀಡಿದರು. ಯಾರು ಕೂಡ ನಿವೇಶನವನ್ನು ಇತರರಿಗೆ ಮಾರಾಟ ಮಾಡಬಾರದು. ಮಾರಾಟ ಮಾಡಿದಲ್ಲಿ ಕಾನೂನು ರೀತಿ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.
ಕೊಡಗು ಜಿಲ್ಲಾಧಿಕಾರಿ ಎಸ್.ಜೆ. ಸೋಮಶೇಖರ್ ಮಾತನಾಡಿ, ಶಾಸಕರ ಪ್ರಯತ್ನ ಮತ್ತು ಹೊದ್ದೂರು ಗ್ರಾಮ ಪಂಚಾಯತ್ ಸರ್ವ ಸದಸ್ಯರು, ಕಂದಾಯ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆಯ ಅಧಿಕಾರಿಗಳ ಪರಿಶ್ರಮದಿಂದ ಉತ್ತಮ ಕೆಲಸ ಆಗಿದ್ದು, ಶ್ರಮಿಸಿದ ಪ್ರತಿಯೊಬ್ಬರು ಅಭಿನಂದನಾರ್ಹರು
ಎಂದು ಶ್ಲಾಘಿಸಿದರು.
ಹೊದ್ದೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಹೆಚ್.ಎ. ಹಂಸ ಮಾತನಾಡಿ, ಡಾ. ಮಂತರ್ ಗೌಡ ರವರು ಶಾಸಕರಾಗಿ ಆಯ್ಕೆಗೊಂಡ ಎರಡೂವರೆ ವರ್ಷದಲ್ಲಿ ₹9 ಕೋಟಿ ರೂಪಾಯಿಗಳಿಗೂ ಹೆಚ್ಚಿನ ಅನುದಾನವನ್ನು ಪಂಚಾಯತ್ ವ್ಯಾಪ್ತಿಯ ಗ್ರಾಮಗಳ ಅಭಿವೃದ್ಧಿಗೆ ನೀಡಿದನ್ನು ವಿವರಿಸಿದರು. ಪಂಚಾಯತ್ ವ್ಯಾಪ್ತಿಯಲ್ಲಿ ಒಟ್ಟು 300 ಹಕ್ಕುಪತ್ರಗಳನ್ನು ಡಾ. ಮಂತರ್ ಗೌಡ ರವರ ಅವಧಿಯಲ್ಲಿ ವಿತರಿಸಿದ್ದು ಐತಿಹಾಸಿಕ ದಾಖಲೆ ಎಂದು ಬಣ್ಣಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಗ್ರಾಮ ಪಂಚಾಯತ್ ಸದಸ್ಯರಾದ ಪಾಲೆಮಾಡು ಮೊಣ್ಣಪ್ಪ, ಚುನಾವಣೆ ಸಂಧರ್ಭದಲ್ಲಿ ಹಕ್ಕುಪತ್ರ ನೀಡುವ ವಿಚಾರವನ್ನು ಡಾ. ಮಂತರ್ ಗೌಡ ರವರ ಮುಂದೆ ಇಟ್ಟಿದ್ದು, ಅಂದು ನೀಡಿದ ಭರವಸೆ ಈಡೇರಿಸುವ ಮೂಲಕ ನುಡಿದಂತೆ ನಡೆದಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ಪಾದಯಾತ್ರೆಗೂ ಸ್ಪಂದಿಸದ ಜಿಲ್ಲಾಡಳಿತ: ಆದಿವಾಸಿಗಳ ಹಕ್ಕುಗಳನ್ನು ಕೊಲ್ಲುತ್ತಿದೆಯೇ?
ಮಡಿಕೇರಿ ತಹಶೀಲ್ದಾರ್ ಶ್ರೀಧರ್, ತಾಲ್ಲೂಕು ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿ ಶೇಖರ್, ಗ್ಯಾರೆಂಟಿ ಅನುಷ್ಠಾನ ಸಮಿತಿ ತಾಲ್ಲೂಕು ಅಧ್ಯಕ್ಷ ಮಂದ್ರಿರ ಮೋಹನ್ ದಾಸ್, ಅಲ್ಪ ಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಹನೀಫ್, ಹೊದ್ದೂರು ಗ್ರಾಮ ಪಂಚಾಯತ್ ಪಿ.ಡಿ.ಒ ವತ್ಸಲಾ ಕುಮಾರಿ, ಹೊಸ್ಕೇರಿ ಪಿಡಿಒ ಅಬ್ದುಲ್ಲಾ, ಮುಖಂಡರಾದ ತೆನ್ನಿರ ಮೈನಾ, ವಿ.ಜಿ. ಮೋಹನ್, ಅಪ್ರು ರವೀಂದ್ರ, ಕೊಳುಮಂಡ ರಫೀಕ್, ಗ್ರಾಮ ಪಂಚಾಯತ್ ಸದಸ್ಯರಾದ ಚೌರೀರ ಅನಿತಾ, ಹಮೀದ್, ಕುಸುಮಾವತಿ, ಲಕ್ಷ್ಮೀ, ಅನುರಾಧ, ಕಡ್ಲೆರ ಟೈನಿ, ಮೊಯ್ದು, ಕೆ.ಆರ್. ಅನಿತಾ ಸೇರಿದಂತೆ ಕಂದಾಯ ಅಧಿಕಾರಿಗಳು, ಪಂಚಾಯತ್ ಸಿಬ್ಬಂದಿಗಳು,
ಫಲಾನುಭವಿ ಕುಟುಂಬದವರು ಮತ್ತು ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಇದ್ದರು.





