ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ಬಡ ಕುಟುಂಬಗಳಿಗೆ ನಿರ್ಮಿಸಿಕೊಡುತ್ತಿರುವ ಮನೆಗಳ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸುವಂತೆ ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ, ವಕ್ಫ್ ಸಚಿವ ಜಮೀರ್ ಅಹಮ್ಮದ್ ಖಾನ್ ಸೂಚಿಸಿದ್ದಾರೆ.
ಮಂಗಳವಾರ ಬೀದರ ಜಿಲ್ಲಾ ಪಂಚಾಯತ್ ಕಛೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ ಬೀದರ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವಸತಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹಾಗೂ ವಕ್ಪ್ ಅದಾಲತ್ ಪ್ರಗತಿ ಪರಿಶೀಲನೆ ಸಭೆ ನಡೆಸಿ ಅಧಿಕಾರಿಗಳೊಂದಿಗೆ ಮಾತನಾಡಿದರು.
“ವಸತಿ ಹಾಗೂ ವಕ್ಫ್ ಇಲಾಖೆ ಪ್ರಗತಿ ಪರಿಶೀಲನೆ ನಡೆಸಿದ ಅವರು 1.82 ಲಕ್ಷ ಮನೆಗಳ ಪೈಕಿ ಎರಡನೇ ಕಂತಿನಲ್ಲಿ 42 ಸಾವಿರ ಮನೆಗಳ ಹಂಚಿಕೆಗೆ ಶೀಘ್ರ ದಿನಾಂಕ ನಿಗದಿಪಡಿಸಬೇಕಿದೆ. ಬೀದರ್‌ನಲ್ಲಿ 2,150 ಮನೆ ಹಂಚಿಕೆ ಮಾಡಲಾಗುವುದು” ಎಂದು ತಿಳಿಸಿದರು.
“ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ನಿರ್ಮಾಣ ಮಾಡಲಾಗುತ್ತಿರುವ ಒಟ್ಟು 3,497 ಮನೆಗಳ ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಂಡು ಮೂಲ ಸೌಕರ್ಯ ಸಹಿತ ಸುಸಜ್ಜಿತ ಮನೆಗಳ ನಿರ್ಮಾಣ ಮಾಡಬೇಕು” ಎಂದು ಹೇಳಿದರು.
ದೇ ಸಂದರ್ಭದಲ್ಲಿ ರಾಜೀವ್ ಗಾಂಧಿ ವಸತಿ ನಿಗಮದ ವತಿಯಿಂದ ಹಂಚಿಕೆಯಾದ ಮನೆಗಳ ಬಗ್ಗೆಯೂ ಸಚಿವರು ಮಾಹಿತಿ ಪಡೆದರು.
ಸೋಮವಾರ ನಡೆದ ʼವಕ್ಫ್ ಅದಾಲತ್ʼನಲ್ಲಿ ಸಲ್ಲಿಕೆಯಾದ 197 ಅರ್ಜಿಗಳ ಪೈಕಿ 14 ಖಾತೆ, 11 ಒತ್ತುವರಿ, 34 ಖಬರಾಸ್ಥಾನ್ ಸೇರಿದಂತೆ ಇತರೇ ಅರ್ಜಿಗಳನ್ನು ಒಂದು ತಿಂಗಳಲ್ಲಿ ವಿಲೇವಾರಿಗೊಳಿಸಬೇಕು ಎಂದು ಸಚಿವರು ಅಧಿಕಾರಿಗಳಿಗೆ ಗಡುವು ನೀಡಿದರು. ಕಾಲ ಮಿತಿಯಲ್ಲಿ ಇತ್ಯರ್ಥ ಮಾಡದಿದ್ದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ವಕ್ಪ್ ಬೋರ್ಡ್ ಅಧ್ಯಕ್ಷ ಅನ್ವರ ಬಾಷಾ ಮಾತನಾಡಿ, “ವಕ್ಪ್ ಆಸ್ತಿಯ ಬಹಳಷ್ಟು ಸಮೀಕ್ಷೆ ಕಾರ್ಯ ಬಾಕಿ ಇದೆ. ಇದನ್ನು ಡಿಡಿಎಲ್‌ಆರ್ ಮತ್ತು ಎಡಿಎಲ್‌ಆರ್‌ಗಳು ಆದಷ್ಟು ಬೇಗ ಸಮೀಕ್ಷೆ ಮಾಡಬೇಕು. ನಗರಸಭೆಯಲ್ಲಿ ಒಂದು ಸಾವಿರಕ್ಕಿಂತ ಹೆಚ್ಚು ಖಾತೆಗಳು ಅಪ್‌ಡೇಟ್ ಆಗುತ್ತಿಲ್ಲ. ಜಿಲ್ಲೆಯ ಎಲ್ಲ ತಾಲೂಕಿನಲ್ಲಿ ಪೆಂಡಿಂಗ್ ಇರುವ ಅರ್ಜಿಗಳ ವಿಲೇವಾರಿಗೊಳಿಸಬೇಕು” ಎಂದು ಹೇಳಿದರು.
ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಮಾತನಾಡಿ, “ವಕ್ಪ್ ಆಸ್ತಿಗೆ ಸಂಬಂಧಿಸಿದಂತೆ ನಮ್ಮಲ್ಲಿ ಬಂದ ಎಲ್ಲ ಅರ್ಜಿಗಳನ್ನು ವಿಲೇವಾರಿಗೊಳಿಸಲಾಗಿದೆ. ಇಂದಿನ ಸಭೆಯಲ್ಲಿ ಚರ್ಚಿಸಿದ ವಕ್ಪ್ ಆಸ್ತಿಗೆ ಸಂಬಂಧಿಸಿದ ವಿಷಯಗಳ ಸಮಸ್ಯೆಗಳನ್ನು ಬರುವ ಒಂದು ಅಥವಾ ಎರಡು ತಿಂಗಳಲ್ಲಿ ಎಲ್ಲ ಬಗೆಹರಿಸಲಾಗುವುದು” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಡಿಸೆಂಬರ್ 20, 21, 22 ರಂದು ಮಂಡ್ಯದಲ್ಲಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ
ಸಭೆಯಲ್ಲಿ ಪೌರಾಡಳಿತ ಮತ್ತು ಹಜ್ ಸಚಿವರಾದ ರಹೀಂಖಾನ್, ವಿಧಾನ ಪರಿಷತ್ ಸದಸ್ಯರ ಅಬ್ದುಲ ಜಬ್ಬಾರ್, ಬೀದರ ನಗರಸಭೆ ಅಧ್ಯಕ್ಷ ಮೊಹ್ಮದ್ ಗೌಸ್, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ನಿರ್ದೇಶಕ ಮೋಕಾಶಿ ಜಿಲಾನಿ, ಬೀದರ ಜಿಲ್ಲಾ ವಕ್ಪ್ ಬೋರ್ಡ್ ಅಧ್ಯಕ್ಷ ಫಿರೋಜ್ ಖಾನ್, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಗಿರೀಶ್ ಬದೋಲೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್. ಅಪರ ಜಿಲ್ಲಾಧಿಕಾರಿ ಶಿವಕುಮಾರ್ ಶೀಲವಂತ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಅವಿನಾಶ ಸೇರಿದಂತೆ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.





