ಮುದ್ದೇಬಿಹಾಳ ತಾಲೂಕಿನ ಶಿರೋಳ್ ಬಳಿ ಚಿಮ್ಮಲಗಿ ಎಡದಂಡೆ ಕಾಲುವೆಯಲ್ಲಿ ನಡೆದ ದುರಂತದಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬವನ್ನು ಭೇಟಿ ಮಾಡಿದ ಅಸ್ಕಿ ಫೌಂಡೋಶನ್ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ಸಿ ಬಿ ಅಸ್ಕಿ ಅವರು ಮೃತರ ತಂದೆ ಚಿನ್ನಪ್ಪ ಕೊಣ್ಣೂರಿಗೆ ಸಾಂತ್ವನ ಹೇಳಿ ₹50,000 ಗಳ ಆರ್ಥಿಕ ನೆರವು ನೀಡಿದ್ದಾರೆ.
ಅಲೆಮಾರಿ ಸಮುದಾಯಕ್ಕೆ ಸೇರಿದ ಈ ಕುಟುಂಬವು ಆಸ್ತಿಪಾಸ್ತಿ ಇಲ್ಲದೆ ದಿನನಿತ್ಯ ಊರು ತಿರುಗಾಡಿ ಬದುಕು ನಡೆಸುವ ಸ್ಥಿತಿಯಲ್ಲಿದೆ ಎಂದು ಅಸ್ಕಿ ವಿಷಾದ ವ್ಯಕ್ತಪಡಿಸಿದರು. ʼಇದು ಹೃದಯವಿದ್ರಾವಕ ದುರಂತ. ಸಮಾಜ ಕಲ್ಯಾಣ ಇಲಾಖೆಯು ಅಲೆಮಾರಿ ನಿಗಮದ ಮೂಲಕ ಕುಟುಂಬಕ್ಕೆ ಸಿಗಬೇಕಾದ ಸರ್ಕಾರಿ ಸೌಲಭ್ಯಗಳನ್ನು ತಕ್ಷಣ ವಹಿಸಿಕೊಡಬೇಕುʼ ಎಂದು ಅವರು ಬೇಡಿಕೆ ಇಟ್ಟರು.
ಕಾಲುವೆ ಮುದ್ದೇಬಿಹಾಳ ಪಟ್ಟಣದ ವರಹಲಯದಲ್ಲಿ ಬರುವುದರಿಂದ ಜನವಸತಿ ಪ್ರದೇಶಗಳ ಮೂಲಕ ಹಾದು ಹೋಗುತ್ತದೆ. ಈ ಹಿನ್ನೆಲೆಯಲ್ಲಿ ಪದೇಪದೇ ಅವಘಡಗಳು ಸಂಭವಿಸುತ್ತಿರುವುದನ್ನು ಉಲ್ಲೇಖಿಸಿದ ಅವರು, ತಂಗಡಗಿ ರಸ್ತೆಯಿಂದ ಪಟ್ಟಣದ ಉತ್ತರ ಭಾಗ ಸುತ್ತುವರೆಗೆ, ಸೀರೋಳ್ ರಸ್ತೆಯವರೆಗೆ ಕಾಲುವೆ ಬದಿಯಲ್ಲಿ ಕಬ್ಬಿಣದ ಫೆನ್ಸಿಂಗ್ ಅಳವಡಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಇದು ಕಡಿಮೆ ವೆಚ್ಚದಾದರೂ ಪರಿಣಾಮಕಾರಿ ಕ್ರಮ. ಜೊತೆಗೆ ಅಪಾಯಕಾರಿ ಜೋನ್ ಎಂದು ಘೋಷಿಸಿ ಎಚ್ಚರಿಕೆಯ ಬೋರ್ಡ್‌ಗಳನ್ನು ಎಲ್ಲೆಲ್ಲಿ ಅಗತ್ಯವೋ ಅಲ್ಲಿ ಅಳವಡಿಸಬೇಕು ಎಂದು ಹೇಳಿದರು.
ಇದನ್ನೂ ಓದಿ: ಮುದ್ದೇಬಿಹಾಳ | ಆಯತಪ್ಪಿ ಕಾಲುವೆಗೆ ಬಿದ್ದ ಯುವತಿ; ರಕ್ಷಿಸಲು ಹೋದ ಸಹೋದರರೂ ನೀರುಪಾಲು
ಈ ಸಂದರ್ಭದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕಾಮರಾಜ ಬಿರಾದಾರ, ವೈ ಎಚ್ ವಿಜಯಕರ, ಬಸಲಿಂಗಪ್ಪ ರಕ್ಕಸಿಗಿ ಸೇರಿದಂತೆ ಹಲವುರು ಉಪಸ್ಥಿತರಿದ್ದರು.





