ಖಾಸಗಿ ಶಾಲೆಗಳನ್ನು ಮೀರಿಸಬಲ್ಲ ಶಿಕ್ಷಕ ಬಳಗ ನಮ್ಮಲ್ಲಿದೆ. ಮಕ್ಕಳ ಕಲಿಕೆಯಲ್ಲಿ ನವೀನ ಪ್ರಯೋಗಗಳನ್ನು ಮಾಡುತ್ತಿದ್ದು, ನಮ್ಮ ಶಿಕ್ಷಕರು ಹೆಚ್ಚಿನ ಶ್ರಮ ವಹಿಸಿ ಮಕ್ಕಳ ಭವಿಷ್ಯ ರೂಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಲತವಾಡ ಪಟ್ಟಣದ ಉರ್ದು ಸ್ಕೂಲ್ ಮುಖ್ಯ ಶಿಕ್ಷಕ ಎ ಎಚ್ ಖಾಜಿ ಹೇಳಿದರು.
ಮಕ್ಕಳ ದಿನಾಚರಣೆ ಹಾಗೂ ಪೋಷಕರ ಸಭೆಯಲ್ಲಿ ಮಾತನಾಡಿ ಅವರು, “ನಮ್ಮ ಶಾಲೆಯಲ್ಲಿ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿದ್ದು, ಸರ್ಕಾರದಿಂದ ದೊರೆಯುವ ಎಲ್ಲಾ ಸೌಲಭ್ಯಗಳನ್ನು ಸಮರ್ಥವಾಗಿ ಬಳಸುತ್ತಿದ್ದೇವೆ. ಪಾಲಕರು ಶಾಲೆಯೊಂದಿಗೆ ಕೈಜೋಡಿಸಿ ಮಕ್ಕಳ ಜವಾಬ್ದಾರಿಯನ್ನು ಅರಿತುಕೊಂಡು ದಿನನಿತ್ಯ ಶಾಲೆಯಲ್ಲಿ ನಡೆಯುವ ಕಲಿಕೆಯ ಬಗ್ಗೆ ಮನೆಯಲ್ಲಿ ಮಾಹಿತಿ ಪಡೆದುಕೊಳ್ಳಬೇಕು. ಮಕ್ಕಳೊಂದಿಗೆ ಕುಳಿತು ಶಿಕ್ಷಕರು ಕಲಿಸಿದ ಪಾಠಗಳನ್ನು ಮರು ಓದಿಸಿದರೆ ಅವರ ಜ್ಞಾನ ಮತ್ತಷ್ಟು ವೃದ್ಧಿಯಾಗುತ್ತದೆ. ನಲಿಕಲಿ ವಿಧಾನ ಮಕ್ಕಳಿಗೆ ಬಹಳ ಉಪಯುಕ್ತವಾಗಿದ್ದು, ಇಂತಹ ಕಲಿಕೆ ಖಾಸಗಿ ಶಾಲೆಗಳಲ್ಲಿ ಲಭ್ಯವಿರುವುದಿಲ್ಲ” ಎಂದು ತಿಳಿಸಿದರು.
ಬಹುಮಾನ ವಿತರಣೆ: ಮಕ್ಕಳ ದಿನಾಚರಣೆ ಪ್ರಯುಕ್ತ ಶಾಲೆಯಲ್ಲಿ ಹಮ್ಮಿಕೊಂಡ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಇದನ್ನೂ ಓದಿ: ಮುದ್ದೇಬಿಹಾಳ | ಸ್ಮಶಾನ ಜಾಗದ ಅತಿಕ್ರಮಣ ಕಟ್ಟಡಗಳ ತೆರವಿಗೆ ವಿಳಂಬ: ತಪ್ಪಿತಸ್ಥರ ವಿರುದ್ಧ ಶಿವಾನಂದ ವಾಲಿ ದೂರು
ಕಾರ್ಯಕ್ರಮದಲ್ಲಿ ಪತ್ರಕರ್ತ ಮಹ್ಮದ್ ಯೂನುಸ್ ಮೂಲಿಮನಿ, ಶಿಕ್ಷಕಿ ಹಾಸಿಂಬಿ ನದಾಫ, ಶಿಕ್ಷಕಿ ಸಾಯಿಮಾ ತಹಸೀನ ಹ ವಾಲ್ದಾರ, ಶಿಕ್ಷಕಿ ಶಂಶಾದ್ ಬೇಗಂ ಸಿಕ್ಕಲಗಾರ, ಎಸ್ಡಿಎಂಸಿ ಅಧ್ಯಕ್ಷ ಅಲ್ತಾಫ ಕೊಣ್ಣೂರ, ಅಂಜುಮನ್ ಅಧ್ಯಕ್ಷ ಲಾಳೆಮಶಾಕ್ ಅವಟಿ, ಉಪಾಧ್ಯಕ್ಷ ಬಾಷೇಸಾಬ್ ತೆಗ್ಗಿನಮನಿ, ಅಬ್ದುಲ್ ಗನಿ ಖಾಜಿ, ಎಸ್ಡಿಎಂಸಿ ಸ್ವಾಲೇಹಾ ಬೇಗಂ ಮುಲ್ಲಾ, ಮಾನಬಿ ಖಾಜಿ, ರೇಷ್ಮಾ ಆರೇಶಂಕರ, ರುಬಿನಾ ಬೇಗಂ ಸೂಳಿಬಾಯಿ, ಲಾಳೆಮಶಾಕ್ ಅವ ಟಿ, ರಫೀಕ್ ಖಾಜಿ, ಮೈಬುಬ, ಪಕ್ರುದ್ದೀನ್ ಬಿದರಕೋಟಿ, ಪಾಲಕರಾದ ಮಹ್ಮದ ಖಾಜಿ, ಜಾಫರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.





