ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಶಿರೋಳ ಗ್ರಾಮದ ಬೆಟಗೇರಿ ತೋಟದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯು ತನ್ನ ಸರಳತೆ, ಶಾಂತ ವಾತಾವರಣ ಮತ್ತು ಹಸಿರುಮಯ ಪರಿಸರದ ಮೂಲಕ ಗಮನ ಸೆಳೆಯುತ್ತಿದೆ. ಶಿರೋಳ ಗ್ರಾಮದಿಂದ ಸುಮಾರು ಮೂರು ಕಿಲೋಮೀಟರ್ ದೂರದಲ್ಲಿರುವ ಈ ಶಾಲೆ, ಸುತ್ತಮುತ್ತಲಿನ ತೋಟಗಳು ಹಾಗೂ ಗಿಡಮರಗಳ ಮಧ್ಯೆ ನೆಲೆಸಿದ್ದು, ಮಕ್ಕಳಿಗೆ ಕಲಿಕೆಗೆ ಅನುಕೂಲಕರವಾದ ಸಹಜ ವಾತಾವರಣವನ್ನು ಒದಗಿಸುತ್ತಿದೆ. ಸಮುದಾಯದ ಬೆಂಬಲ ಪಡೆದು ಶಾಲೆಯನ್ನು ಅಭಿವೃದ್ಧಿಯತ್ತ ಕೊಂಡೊಯ್ಯುತ್ತಿದೆ. ಈ ಮೂಲಕ ತಾಲೂಕಿನಲ್ಲಿ ಮಾದರಿ ಶಾಲೆ ಎನಿಸಿಕೊಂಡಿದೆ.
ತೋಟಗಳ ನಡುವೆ ಸ್ಥಿತವಾಗಿರುವ ಈ ಶಾಲೆಯ ಆವರಣ ಸಂಪೂರ್ಣವಾಗಿ ಮರಗಳಿಂದ ಆವೃತವಾಗಿದ್ದು, ಪ್ರಕೃತಿಯ ಮಡಿಲಲ್ಲೇ ಮಕ್ಕಳು ಪಾಠ ಕಲಿಯುತ್ತಿರುವ ಅನುಭವವನ್ನು ನೀಡುತ್ತದೆ. ವಾಹನಗಳ ಗದ್ದಲದಿಂದ ದೂರವಾಗಿರುವ ಕಾರಣ, ಇಲ್ಲಿ ಶಾಂತ ಹಾಗೂ ಆರೋಗ್ಯಕರ ವಾತಾವರಣವಿದ್ದು, ಮಕ್ಕಳ ಗಮನ ಸಂಪೂರ್ಣವಾಗಿ ಶಿಕ್ಷಣದತ್ತ ಕೇಂದ್ರೀಕೃತವಾಗಲು ಸಹಕಾರಿಯಾಗುತ್ತಿದೆ. ಹಸಿರುಮಯ ಪರಿಸರ ಮಕ್ಕಳಲ್ಲಿ ಪರಿಸರ ಜಾಗೃತಿ ಮೂಡಿಸುವುದರ ಜೊತೆಗೆ, ಶಾಲೆಯ ಮೇಲಿನ ಆಸಕ್ತಿಯನ್ನೂ ಹೆಚ್ಚಿಸಿದೆ.
ಸರಕಾರಿ ಶಾಲೆಯಾದರೂ, ಇಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಶಿಕ್ಷಕರು ಶ್ರಮಿಸುತ್ತಿದ್ದಾರೆ. ಪ್ರಕೃತಿಯೊಂದಿಗೆ ಬೆಸೆದ ಈ ಶಿಕ್ಷಣ ಕೇಂದ್ರದಲ್ಲಿ ಮಕ್ಕಳು ಪಠ್ಯ ಜ್ಞಾನ ಮಾತ್ರವಲ್ಲದೆ, ಶಿಸ್ತು, ಸಹಬಾಳ್ವೆ ಮತ್ತು ಪರಿಸರ ಪ್ರೀತಿಯ ಪಾಠಗಳನ್ನೂ ಕಲಿಯುತ್ತಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಇದ್ದರೂ, ಶಿಕ್ಷಣಕ್ಕೆ ಸೂಕ್ತವಾದ ವಾತಾವರಣ ಹೊಂದಿರುವ ಈ ಶಾಲೆ, ಸರಕಾರಿ ಶಾಲೆಗಳ ಮಹತ್ವವನ್ನು ಮತ್ತೊಮ್ಮೆ ಸಾಬೀತುಪಡಿಸುತ್ತಿದೆ.
ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಈ ಶಾಲೆಯಲ್ಲಿ ಒಟ್ಟು 34 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇಲ್ಲಿ ಕೇವಲ ಪಠ್ಯಾಧಾರಿತ ಶಿಕ್ಷಣಕ್ಕಷ್ಟೇ ಸೀಮಿತವಾಗದೇ, ಶ್ರಮ ಸಂಸ್ಕೃತಿ, ಸಂಸ್ಕಾರ ಮತ್ತು ಶಿಸ್ತುಗಳ ಜೊತೆಗೆ ಮಕ್ಕಳಿಗೆ ಆಟ–ಪಾಠದ ಮೂಲಕ ಕಲಿಕೆ ನೀಡಲಾಗುತ್ತಿದೆ. ನಲಿಕಲಿ ವಿಧಾನ ಹಾಗೂ ತಂತ್ರಜ್ಞಾನ ಆಧಾರಿತ ಬೋಧನೆ ಮೂಲಕ ಮಕ್ಕಳಲ್ಲಿ ಕಲಿಕೆಯ ಆಸಕ್ತಿಯನ್ನು ಹೆಚ್ಚಿಸುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ. ಜೊತೆಗೆ ಭವಿಷ್ಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಅಗತ್ಯವಿರುವ ಮೂಲ ಸೌಲಭ್ಯಗಳು ಮತ್ತು ಅಭ್ಯಾಸಗಳನ್ನೂ ಮಕ್ಕಳಿಗೆ ಒದಗಿಸಲಾಗುತ್ತಿದೆ.
ಶಿಕ್ಷಣ ಇಲಾಖೆಯ ವಿವಿಧ ಕಾರ್ಯಕ್ರಮಗಳಲ್ಲಿ ಈ ಶಾಲೆಯ ಮಕ್ಕಳು ಅತ್ಯಂತ ಉತ್ಸಾಹದಿಂದ ಭಾಗವಹಿಸುತ್ತಿದ್ದು, ತಮ್ಮ ಕ್ರಿಯಾಶೀಲತೆ ಮತ್ತು ಪ್ರತಿಭೆಯನ್ನು ಪ್ರದರ್ಶಿಸುತ್ತಿದ್ದಾರೆ. ವಿವಿಧ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಪಾಲ್ಗೊಂಡು ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿರುವುದು ಶಾಲೆಗೆ ಹೆಮ್ಮೆಯ ವಿಷಯವಾಗಿದೆ. ವಿಶೇಷವಾಗಿ ಈ ವರ್ಷದ ಸ್ವಾತಂತ್ರೋತ್ಸವದ ಅಂಗವಾಗಿ ಶಿರೋಳ ಗ್ರಾಮದ ಶಾಲೆಯಲ್ಲಿ ಆಯೋಜಿಸಲಾದ ನೃತ್ಯ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಗಳಿಸುವ ಮೂಲಕ, ಬೆಟಗೇರಿ ತೋಟ ಶಾಲೆಯ ಮಕ್ಕಳು ಶಾಲೆಯ ಕೀರ್ತಿಯನ್ನು ಮತ್ತಷ್ಟು ಹೆಚ್ಚಿಸಿದ್ದಾರೆ.
ಈ ಶಾಲೆ 2001ರಲ್ಲಿ ಆರಂಭಗೊಂಡಿದ್ದು, ಆರಂಭಿಕ ದಿನಗಳಲ್ಲಿ ಸಾಕಷ್ಟು ತೊಂದರೆಗಳನ್ನು ಎದುರಿಸಬೇಕಾಯಿತು. ಆದರೂ ಸ್ಥಳೀಯ ಸಮುದಾಯದ ಮುಖಂಡರು ಹಾಗೂ ಶಿಕ್ಷಣ ಪ್ರೇಮಿಗಳ ಸಹಕಾರದಿಂದ ಶಾಲೆ ಇಂದು ಉತ್ತಮ ಸ್ಥಿತಿಗೆ ಬಂದಿದೆ. ಶಾಲೆಗೆ ಅಗತ್ಯವಿರುವ ಜಾಗವನ್ನು ಲಕ್ಷ್ಮಣ ಬೆಟಗೇರಿ ಅವರು ದಾನವಾಗಿ ನೀಡಿದ್ದು, ಅವರ ಉದಾರತೆ ಶಾಲೆಯ ಬೆಳವಣಿಗೆಗೆ ಭದ್ರ ಅಡಿಪಾಯವಾಗಿದೆ. ನಂತರ ಶಿಕ್ಷಣ ಪ್ರೇಮಿಗಳು ಹಾಗೂ ಗ್ರಾಮಸ್ಥರ ಸಹಾಯದಿಂದ ಸದ್ಯ ಸುಸಜ್ಜಿತ ಶಾಲಾ ಕಟ್ಟಡ ನಿರ್ಮಾಣಗೊಂಡಿದ್ದು, ವಿದ್ಯಾರ್ಥಿಗಳಿಗೆ ಓದಲು ಅನುಕೂಲಕರ ವಾತಾವರಣ ಸೃಷ್ಟಿಯಾಗಿದೆ.
ಈ ಶಾಲೆಯಲ್ಲಿ ಕಲಿತಿರುವ ವಿದ್ಯಾರ್ಥಿಯೊಬ್ಬರು ಭಾರತದ ನೇವಿಯಲ್ಲಿ ಸೇವೆ ಸಲ್ಲಿಸುತ್ತಿರುವುದು ಗ್ರಾಮಕ್ಕೂ ಶಾಲೆಗೆ ಹೆಮ್ಮೆಯ ಸಂಗತಿಯಾಗಿದೆ. ಇಲ್ಲಿ ಅಭ್ಯಾಸ ಮಾಡುತ್ತಿರುವ ಮಕ್ಕಳಿಗೆ ಅಂತಹ ಹಳೆ ವಿದ್ಯಾರ್ಥಿಗಳ ಸಾಧನೆಗಳೇ ಸ್ಪೂರ್ತಿ ಮತ್ತು ಶಕ್ತಿ ಎನ್ನುತ್ತದೆ ಶಾಲೆಯ ಭೋದಕ ವರ್ಗ.
ಈ ಶಾಲೆಯ ಗ್ರಂಥಾಲಯದಲ್ಲಿ ಸುಮಾರು 3 ಸಾವಿರ ಪುಸ್ತಕಗಳಿವೆ. ಪ್ರತಿವಾರ ಮಕ್ಕಳಿಗೆ ಒಂದು ಪುಸ್ತಕದ ಪರಿಚಯ ಮಾಡಿಕೊಡಲಾಗುತ್ತದೆ. ಸ್ಮಾರ್ಟ್ ಟಿವಿಯಲ್ಲಿ ಹಲವು ತರಗತಿಗಳನ್ನು ನಡೆಸಲಾಗುತ್ತದೆ. ಪ್ರತಿ ಶನಿವಾರ ಮಕ್ಕಳಿಗೆ ಕ್ವಿಜ್, ಕವನ ವಾಚನ, ಸಾಂಸ್ಕೃತಿಕ ಚಟುವಟಿಕೆಗಳು ಸೇರಿದಂತೆ ವಿವಿಧ ರೀತಿಯ ಪಠ್ಯೇತರ ಕಾರ್ಯಕ್ರಮಗಳನ್ನು ನಡೆಸಿ ಮಕ್ಕಳನ್ನು ಕ್ರಿಯಾಶೀಲರನ್ನಾಗಿ ಮಾಡಲು ಎಲ್ಲಾ ರೀತಿ ಕ್ರಮ ಕೈಗೊಳ್ಳಲಾಗುತ್ತದೆ.
ಎಸ್‌ಡಿಎಂಸಿ ಹಾಗೂ ಪಾಲಕರ ಸಹಕಾರದಿಂದ, ಈ ಶೈಕ್ಷಣಿಕ ವರ್ಷದಲ್ಲಿ ಇಲಾಖೆಯ ನಿಯಮಿತ ಸಮವಸ್ತ್ರಕ್ಕೆ ಬದಲಾಗಿ ಟ್ರ್ಯಾಕ್ ಪ್ಯಾಂಟ್ ಮತ್ತು ಟೀ ಶರ್ಟ್ ಅನ್ನು ಶಾಲೆಯ ವಿಶೇಷ ಸಮವಸ್ತ್ರವಾಗಿ ಅಳವಡಿಸಲಾಗಿದೆ. ಇದರಿಂದ ಮಕ್ಕಳು ಹೆಚ್ಚು ಆರಾಮದಾಯಕವಾಗಿ ಚಟುವಟಿಕೆಗಳಲ್ಲಿ ಭಾಗವಹಿಸುವುದರ ಜೊತೆಗೆ, ಆಟ–ಪಾಠ ಹಾಗೂ ಶೈಕ್ಷಣಿಕ ಚಟುವಟಿಕೆಗಳಲ್ಲಿ ಉತ್ಸಾಹದಿಂದ ತೊಡಗಿಸಿಕೊಳ್ಳಲು ಸಹಕಾರಿಯಾಗಿದೆ.
ಶಾಲೆಯಲ್ಲಿನ ಯಾವುದೇ ಕುಂದುಕೊರತೆಗಳ ಕುರಿತು ಎಸ್‌ಡಿಎಂಸಿ ಸದಸ್ಯರು ಮತ್ತು ಪಾಲಕರು ಪ್ರತೀ ತಿಂಗಳ ಸಭೆಯಲ್ಲಿ ಚರ್ಚೆ ನಡೆಸುತ್ತಾರೆ. ಈ ಸಭೆಗಳಲ್ಲಿ ಮಕ್ಕಳ ಶೈಕ್ಷಣಿಕ ಬೆಳವಣಿಗೆ, ಶಿಕ್ಷಕರ ಬೋಧನಾ ವಿಧಾನ ಮತ್ತು ಕಲಿಕೆಯ ಗುಣಮಟ್ಟ ಕುರಿತು ವಿಮರ್ಶೆ ಮಾಡಲಾಗುತ್ತಿದ್ದು, ಅಗತ್ಯ ಸುಧಾರಣೆಗಳನ್ನು ಜಾರಿಗೆ ತರಲು ಖಚಿತಪಡಿಸಿಕೊಳ್ಳಲಾಗುತ್ತಿದೆ. ಇಂತಹ ನಿರಂತರ ಸಂವಾದ ಮತ್ತು ಸಮನ್ವಯದ ಮೂಲಕ, ಈ ಶಾಲೆಯಲ್ಲಿ ವಿದ್ಯಾರ್ಥಿಗಳ ಗ್ರಹಿಕೆ, ಯೋಚನಾ ಲಹರಿ ಮತ್ತು ಕಲಿಕೆಯ ಗುಣಮಟ್ಟವನ್ನು ಹೆಚ್ಚಿಸುವ ಕೆಲಸ ಕ್ರಮಬದ್ಧವಾಗಿ ನಡೆಯುತ್ತಿದೆ.
ಶಾಲೆಯ ಹಳೆ ವಿದ್ಯಾರ್ಥಿ ಹಾಗೂ ಪರಿಸರ ಪ್ರೇಮಿ ಸಂಜು ಕುರಿನ್ನವರ ಮಾತನಾಡಿ, “ನಾನು ಈ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಕಾಲದಲ್ಲಿ ಈ ಶಾಲೆ ಬಿದಿರಿನ ಶೆಡ್ಡು ಹಾಗೂ ಪತ್ರಾಸು ಸುತ್ತಲೂ ತೆಂಗಿನ ನಾರಿನಿಂದ ಕೂಡಿತ್ತು. ಅದರೊಳಗೆ ಸಗಣಿ ರಾಡಿ ಸಾರಿಸಿ ಕುಳಿತುಕೊಳ್ಳುತ್ತಿದ್ದೆವು. ಆದರೆ ಈಗ ಶಾಲೆ ಸ್ವಂತ ಕಟ್ಟಡವನ್ನು ಹೊಂದಿದೆ. ಈ ಸ್ವಂತ ಕಟ್ಟಡವನ್ನು ಹೊಂದಲು ನಮ್ಮ ತೋಟದ ಶಾಲೆಯ ಶಿಕ್ಷಣ ಪ್ರೇಮಿ ಲಕ್ಷ್ಮಣ ಬೆಟಿಗೇರಿ ಅವರು ಜಾಗವನ್ನು ದಾನವಾಗಿ ಕೊಟ್ಟಿದ್ದಾರೆ. ಅದರಿಂದ ನಮ್ಮ ಮಕ್ಕಳು ಸುಸಜ್ಜಿತ ಕಟ್ಟಡದಲ್ಲಿ ಓದುತ್ತಿರುವುದು ಹೆಮ್ಮೆಯ ವಿಷಯ” ಎಂದರು.
ಎಸ್‌ಡಿಎಂಸಿ ಉಪಾಧ್ಯಕ್ಷ ಹಾಗೂ ಹಳೆ ವಿದ್ಯಾರ್ಥಿ ಮಾಯಪ್ಪ ದಡ್ಡಿಮನಿ ಮಾತನಾಡಿ, “ನಮ್ಮ ಕಾಲಕ್ಕೆ ಇಲ್ಲಿ ಮೂಲ ಸೌಲಭ್ಯಗಳಿರಲಿಲ್ಲ. ಅದರಿಂದ ಕೆಲವೇ ಕೆಲವರು ಓದನ್ನು ಮುಂದುವರೆಸಿದರು. ಬೇರೆ ಊರಿಗೆ ಹೋಗಬೇಕಾದ ಅನಿವಾರ್ಯತೆಯಿಂದ ಕೆಲವರು ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸಿದರು. ಆದರೆ ಈಗಿನ ಮಕ್ಕಳಿಗೆ ಈ ಸಮಸ್ಯೆ ಇಲ್ಲ. ಯಾವ ಮಗುವೂ ಶಿಕ್ಷಣದಿಂದ ವಂಚಿತವಾಗಬಾರದು ಎಂದು ಸಮಾನ ಮನಸ್ಕಿನ ಹಳೆ ವಿದ್ಯಾರ್ಥಿಗಳೆ ಸೇರಿ ಶಾಲೆಗೆ ಅಗತ್ಯ ವಸ್ತುಗಳನ್ನು ಕೊಡಿಸುವ ಪ್ರಯತ್ನ ಮಾಡಿದ್ದೇವೆ. ಹಾಗಾಗಿ ಮಕ್ಕಳು ಸುಂದರ ವಾತಾವರಣದಲ್ಲಿ ಕಳೆಯುತ್ತಿದ್ದಾರೆ. ಈ ಶಾಲೆ ನಮ್ಮೂರಿನ ಹೆಮ್ಮೆ” ಎಂದರು.
ಇದನ್ನೂ ಓದಿ: ಬಾಗಲಕೋಟೆ | ರೈಲು ಸೇವೆ ವಿಸ್ತರಣೆಗೆ ಒತ್ತಾಯಿಸಿ ಪ್ರತಿಭಟನೆ
ಶಿಕ್ಷಕ ವಿಜಯಕುಮಾರ ಕಂಬಾರ ಮಾತನಾಡಿ, “ನಾನು 2010ರಲ್ಲಿ ಈ ಶಾಲೆಗೆ ವರ್ಗವಾಗಿರುತ್ತೇನೆ. 15 ವರ್ಷಗಳ ಹಿಂದೆ ಮಕ್ಕಳ ಸಂಖ್ಯೆ ತೀರಾ ಕಡಿಮೆ ಇತ್ತು. ಆದರೆ ಪ್ರಸ್ತುತ 30ಕ್ಕಿಂತ ಹೆಚ್ಚು ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಶಾಲೆಯಲ್ಲಿ ಏನಾದರೂ ಸಮಸ್ಯೆಯಾದರೆ ಎಸ್‌ಡಿಎಂಸಿ ಅವರು ತಕ್ಷಣ ಬೆಂಬಲಕ್ಕೆ ಬರುತ್ತಾರೆ ಮತ್ತು ಆ ಸಮಸ್ಯೆಯನ್ನು ಬಗೆಹರಿಸುತ್ತಾರೆ. ಶಾಲೆಯ ಹಲವು ವಸ್ತುಗಳನ್ನು ಅವರು ಮತ್ತು ಹಳೆಯ ವಿದ್ಯಾರ್ಥಿಗಳು ಸೇರಿ ಕೊಡುಗೆ ನೀಡಿದ್ದಾರೆ. ಎಲ್ಲರ ಸಹಕಾರದಿಂದ, ವಿದ್ಯಾರ್ಥಿಗಳ ಕಲಿಕಾಸಕ್ತಿಯಿಂದ ಇಂದು ಈ ಶಾಲೆ ಮಾದರಿಯಾಗಿ ನಿಂತಿದೆ. ಮುಂದಿನ ದಿನಗಳಲ್ಲಿ ದಾಖಲಾತಿ ಹೆಚ್ಚಿಸಲು ಸಕಲ ಪ್ರಯತ್ನ ಮಾಡಲಾಗುತ್ತಿದೆ” ಎಂದರು.
ಸರ್ಕಾರಿ ಶಾಲೆಗಳು ಅಪಾಯದ ಅಂಚಿನಲ್ಲಿರುವ ಇಂತಹ ಸಂದರ್ಭದಲ್ಲಿ ಶಿರೋಳ ಗ್ರಾಮದ ಬೆಟಗೇರಿ ತೋಟದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ರಾಜ್ಯಕ್ಕೆ ಮಾದರಿಯಾಗಿದೆ. ಮುಂದಿನ ದಿನಗಳಲ್ಲಿ ದಾಖಲಾತಿ ಹೆಚ್ಚಾಗುವ ನಿರೀಕ್ಷೆಯೂ ಇದೆ.





