ಕೋಲಾರದ ಮುಳಬಾಗಿಲು ನಗರದ ನ್ಯಾಯಾಲಯದ ಆವರಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘದ ವತಿಯಿಂದ ಜುಲೈ 12 ರಂದು ರಾಷ್ಟ್ರೀಯ ಲೋಕ ಅದಾಲತ್ ಹಮ್ಮಿಕೊಳ್ಳಲಾಗಿದೆ ಇದನ್ನು ಸಾರ್ವಜನಿಕರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಜೆಎಂಎಫ್‌ಸಿ ಹಿರಿಯ ನ್ಯಾಯಾಧೀಶ ಗೌಡ ಜಗದೀಶ್ ರುದ್ರೆ ತಿಳಿಸಿದರು.
ವಿವಾದಗಳನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಲು ರಾಷ್ಟ್ರೀಯ ಲೋಕ ಅದಾಲತ್ ಒಂದು ಉತ್ತಮ ಅವಕಾಶ. ನ್ಯಾಯಾಲಯದಲ್ಲಿ ಬಾಕಿ ಇರುವ ರಾಜಿಯಾಗಬಲ್ಲ ಹಾಗೂ ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಇತ್ಯರ್ಥ ಪಡಿಸಿಕೊಂಡು ನೆಮ್ಮದಿಯ ಜೀವನ ರೂಪಿಸಿಕೊಳ್ಳಬೇಕು ಎಂದರು.
ಜೆಎಂಎಫ್‌ಸಿ ನ್ಯಾಯಮೂರ್ತಿಗಳಾದ ಜಿ.ಹರೀಶ್ ಮಾತನಾಡಿ, ವಿವಾದಗಳನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಲು ರಾಷ್ಟ್ರೀಯ ಲೋಕ ಅದಾಲತ್ ಒಂದು ಉತ್ತಮ ಅವಕಾಶವಾಗಿದ್ದು ತಾಲೂಕಿನ ಹಾಗೂ ನ್ಯಾಯಾಲಯದ ವ್ಯಾಪ್ತಿಯ ಕಕ್ಷಿದಾರರು ಸದುಪಯೋಗ ಪಡೆದು ಶಾಶ್ವತ ಪರಿಹಾರ ಕಂಡುಕೊಳ್ಳಬೇಕು. ವ್ಯಾಜ್ಯ ಪೂರ್ವ ಹಾಗೂ ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳನ್ನು ಜುಲೈ 12 ರಂದು ನಿಗದಿಯಾಗಿರುವ ಲೋಕ್ ಅದಾಲತ್ ಮೂಲಕ ತಕ್ಷಣ ಬಗೆಹರಿಸಿಕೊಳ್ಳಬಹುದು ಎಂದು ತಿಳಿಸಿದರು.
ಇದನ್ನೂ ಓದಿ: ಕೋಲಾರ | ಕೋಮುಲ್ ಸರ್ಕಾರಿ ನಾಮ ನಿರ್ದೇಶಕರಾಗಿ ಯೂನುಸ್ ಶರೀಫ್ ನೇಮಕ
ಅಡಿಷನಲ್ ನ್ಯಾಯಾಧೀಶರಾದ ಡಿ.ರೋಹಿಣಿ ಮಾತನಾಡಿ, ಯಾವುದೇ ಶುಲ್ಕವಿಲ್ಲದೇ ರಾಜಿಯಾಗುವ ಪ್ರಕರಣಗಳನ್ನು ತ್ವರಿತವಾಗಿ ವಿಲೇವಾರಿ ಮಾಡುವ ಸಲುವಾಗಿ ರಾಷ್ಟ್ರಮಟ್ಟದಿಂದ ತಾಲೂಕು ಮಟ್ಟದದವರೆವಿಗೂ ಅದಾಲತ್ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ. ಬ್ಯಾಂಕ್, ಅಪಘಾತ, ಸಣ್ಣ ಪುಟ್ಟ ಜಗಳ, ಜನನ ಪ್ರಮಾಣ ಪತ್ರ ದಂತಹ ಪ್ರಕರಣ ಸೇರಿದಂತೆ ಕಕ್ಷಿದಾರರು ಇಚ್ಛಿಸಿದಲ್ಲಿ ಕಾನೂನು ವ್ಯಾಪ್ತಿಯಲ್ಲಿ ಅವಕಾಶವಿರುವ ಎಲ್ಲಾ ರೀತಿಯ ಪ್ರಕರಣಗಳನ್ನು ಅದಾಲತ್ ನಲ್ಲಿ ವಿಲೇವಾರಿ ಮಾಡಲಾಗುವುದು. ಕಕ್ಷಿದಾರರು ರಾಜಿ ಸಂಧಾನದ ಮೂಲಕ ಪ್ರಕರಣಗಳನ್ನು ಸುಲಭವಾಗಿ ಮತ್ತು ಶಿಘ್ರವಾಗಿ ಯಾವುದೇ ಶುಲ್ಕವಿಲ್ಲದೇ ಇತ್ಯಾರ್ಥ ಪಡಿಸಿಕೊಳ್ಳಬಹುದು ಎಂದರು.





