ಮುಂಡಗೋಡ: ಶಾಸಕರ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಇಲ್ಲಿ ದಿನಾಂಕ 28-11-2025 ರಂದು ಮಧ್ಯಾಹ್ನದ ಬಿಸಿಯೂಟ ಸೇವಿಸಿದ ನಂತರ ಕೆಲವು ವಿದ್ಯಾರ್ಥಿಗಳು ಹೊಟ್ಟೆನೋವು ಎಂದು ವಾಂತಿ ಮಾಡಿಕೊಂಡಿದ್ದು ಅದರಲ್ಲಿ 24 ವಿದ್ಯಾರ್ಥಿಗಳನ್ನು ತಕ್ಷಣ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗಿತ್ತು.
ನಂತರ ಸಂಜೆಯ ವೇಳೆಗೆ ಇನ್ನೂ 20 ವಿದ್ಯಾರ್ಥಿಗಳು ಹೊಟ್ಟೆನೋವು ಎಂದಿದ್ದು ಅವರನ್ನು ಸಹ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಿದ್ದು ಆಸ್ಪತ್ರೆಗೆ ದಾಖಲಾದ 44 ವಿದ್ಯಾರ್ಥಿಗಳಲ್ಲಿ 17 ವಿದ್ಯಾರ್ಥಿಗಳು ಗುಣಮುಖರಾಗಿ ಮನೆಗೆ ಹೋಗಿದ್ದು ಉಳಿದ 27 ವಿದ್ಯಾರ್ಥಿಗಳನ್ನು ರಾತ್ರಿ ಆಸ್ಪತ್ರೆಯಲ್ಲಿ ವೈದ್ಯರು ಚಿಕಿತ್ಸೆ ನೀಡಿದ್ದು ಅದರಲ್ಲಿ 4 ವಿದ್ಯಾರ್ಥಿಗಳು ಒಂದು ಬಾರಿ ವಾಂತಿ ಮಾಡಿಕೊಂಡಿದ್ದು ಉಳಿದ ಎಲ್ಲಾ ಮಕ್ಕಳು ಆರೋಗ್ಯವಾಗಿರುವುದಾಗಿ ವೈದ್ಯಾಧಿಕಾರಿಗಳು ತಿಳಿಸಿದ್ದಾರೆ ಎಂದು, ಶಿರಸಿ ಡಿಡಿಪಿಐ ತಿಳಿಸಿದ್ದಾರೆ.
ಸುದ್ದಿ ತಿಳಿದ ತಕ್ಷಣ ಶಾಸಕರಾದ ಶಿವರಾಮ ಹೆಬ್ಬಾರ ಅವರು, ಸಹಾಯಕ ಆಯುಕ್ತರು ಶಿರಸಿ, ತಹಶೀಲ್ದಾರ ಮುಂಡಗೋಡ, ಕಾರ್ಯನಿರ್ವಾಹಕ ಅಧಿಕಾರಿಗಳು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿ ವೈದ್ಯರೊಂದಿಗೆ ಸಮಾಲೋಚನೆ ನಡೆಸಿರುತ್ತಾರೆ. ಮಕ್ಕಳ ಆರೋಗ್ಯದ ಕುರಿತು ನಿಗಾ ವಹಿಸಿದ್ದು ವೈದ್ಯರೊಂದಿಗೆ ಸಂಪರ್ಕದಲ್ಲಿದ್ದು ಮಕ್ಕಳ ಆರೋಗ್ಯ ಸ್ಥಿರವಾಗಿರುವುದಾಗಿ ವೈದ್ಯಾಧಿಕಾರಿಗಳು ತಿಳಿಸಿದ್ದು ಮಕ್ಕಳ ಆರೋಗ್ಯದ ಕುರಿತು ಅನುಪಾಲನೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ದಿನಾಂಕ 28-11-2025 ರಂದು ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮುಂಡಗೋಡ ಈ ಶಾಲೆಯ 452 ವಿದ್ಯಾರ್ಥಿ ಹಾಗೂ ಮೌಲಾನಾ ಆಜಾದ್ ಮಾದರಿ ಶಾಲೆ ಮುಂಡಗೋಡ ಇಲ್ಲಿನ 235 ವಿದ್ಯಾರ್ಥಿಗಳು ಬಿಸಿಯೂಟವನ್ನು ಸೇವಿಸಿರುತ್ತಾರೆ. ಮೌಲಾನಾ ಆಜಾದ್ ಮಾದರಿ ಶಾಲೆ ಮುಂಡಗೋಡ ಈ ಶಾಲೆಗೆ, ಶಾಸಕರ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮುಂಡಗೋಡ ಇಲ್ಲಿಂದ ಬಿಸಿಯೂಟ ಸರಬರಾಜು ಮಾಡಲಾಗುತ್ತಿದ್ದು , ಮೌಲಾನಾ ಆಜಾದ್ ಮಾದರಿ ಶಾಲೆಯ ಯಾವುದೇ ಮಕ್ಕಳಿಗೆ ಬಿಸಿಯೂಟ ಸೇವಿಸಿದ ನಂತರ ಯಾವುದೇ ತೊಂದರೆಯಾಗಿರುವುದಿಲ್ಲ.
ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮುಂಡಗೋಡ ಇಲ್ಲಿನ 44 ಮಕ್ಕಳು ಅನಾರೋಗ್ಯದಿಂದ ಬಳಲಿರುವುದು ಕಂಡು ಬಂದಿರುತ್ತದೆ. ಮಕ್ಕಳು ಸೇವಿಸಿದ ಬಿಸಿಯೂಟವನ್ನು ಶಾಲೆಯಿಂದ ಸಂಗ್ರಹಿಸಿ ಪರೀಕ್ಷೆಗಾಗಿ ಕಳುಹಿಸಲಾಗಿದೆ ಎಂದು ಹೇಳಿದರು.ಇಂದು ಬೆಳಿಗ್ಗೆ 8.00 ಗಂಟೆಗೆ ಆಸ್ಪತ್ರೆಗೆ ಭೇಟಿ ನೀಡಿ ಮಕ್ಕಳು, ಪೋಷಕರು ಹಾಗೂ ವೈದ್ಯರೊಂದಿಗೆ ಸಮಾಲೋಚನೆ ನಡೆಸಿ. ಮಕ್ಕಳ ಆರೋಗ್ಯದ ಕುರಿತು ಆತಂಕ ಪಡದಂತೆ ಪೋಷಕರಿಗೆ ಮನವರಿಕೆ ಮಾಡಲಾಗಿದೆ. ಜಿಲ್ಲಾ ವೈದ್ಯಾಧಿಕಾರಿಗಳು ಇಂದು ಬೆಳಿಗ್ಗೆ ಆಸ್ಪತ್ರೆಗೆ ಹಾಗೂ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಎಲ್ಲಾ ಮಕ್ಕಳು ಆರೋಗ್ಯವಾಗಿದ್ದು ಸಂಜೆಯ ವೇಳೆಗೆ ಆಸ್ಪತ್ರೆಯಿಂದ ಬಿಡುಗಡೆ ಮಾಡುವುದಾಗಿ ತಿಳಿಸಿರುತ್ತಾರೆ.
ಈ ಸುದ್ದಿ ಓದಿದ್ದೀರಾ? ಮುಂಡಗೋಡ | ಶಾಲೆಯ ಅಡುಗೆ ಕೋಣೆ ಬಳಿಯೇ ಗಬ್ಬು ನಾರುತ್ತಿದೆ ಚರಂಡಿ; ಬಿಸಿಯೂಟ ಸೇವಿಸಿ 26 ಮಕ್ಕಳು ಅಸ್ವಸ್ಥ
ನಂತರ ಶಾಲೆಗೆ ಭೇಟಿ ನೀಡಿದ್ದು ಎಲ್ಲಾ ಮಕ್ಕಳೊಂದಿಗೆ ಸಮಾಲೋಚನೆ ನಡೆಸಿ ಯಾವುದೇ ಆತಂಕ ಪಡದಂತೆ ಸೂಕ್ತ ತಿಳುವಳಿಕೆ ನೀಡಲಾಗಿರುತ್ತದೆ. ಅಡುಗೆ ಕೊಠಡಿ, ದಾಸ್ತಾನು ಕೊಠಡಿ, ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಇವುಗಳನ್ನು ಪರಿಶೀಲಿಸಿ ಸ್ವಚ್ಛತೆ ಮತ್ತು ಸುರಕ್ಷತೆಗೆ ವಿಶೇಷ ಗಮನ ನೀಡುವಂತೆ ಶಿಕ್ಷಕರು ಮತ್ತು ಅಡುಗೆ ಸಿಬ್ಬಂದಿಗಳಿಗೆ ಸೂಚನೆ ನೀಡಿ. ಶಿಕ್ಷಕರ ಸಭೆ ನಡೆಸಿ ಬಿಸಿಯೂಟ ನಿರ್ವಹಣೆಯಲ್ಲಿ ಗರಿಷ್ಠ್ಠ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸುವಂತೆ ನಿರ್ದೇಶನ ನೀಡಲಾಗಿರುತ್ತದೆ. ನಿರ್ಲಕ್ಷ್ಯ ವಹಿಸಿದ ಕುರಿತು ಶಾಲೆಯ ಮುಖ್ಯ ಶಿಕ್ಷಕರಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿದ್ದು, ಅಗತ್ಯ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಡಿಡಿಪಿಐ ಅವರು ತಿಳಿಸಿದ್ದಾರೆ.





