ಮುಂಡಗೋಡ: ತಾಲ್ಲೂಕಿನ ಸಾಲಗಾಂವ ಗ್ರಾಮದಲ್ಲಿ ರೈತನ ಜಮೀನಿನಿಂದ ಭತ್ತ ಹಾಗೂ ಭತ್ತದ ಹುಲ್ಲನ್ನು ರಾತ್ರಿ ವೇಳೆಯಲ್ಲಿ ಯಾರು ಇಲ್ಲದ ಸಮಯ ನೋಡಿ ಬೆಳೆದ ಬೆಳೆಯನ್ನು ಕತ್ತರಿಸಿ ಕಳುವು ಮಾಡಿಕೊಂಡ ಹೋದ ಘಟನೆ ಬೆಳಕಿಗೆ ಬಂದಿದೆ. ರೈತ ಮಹಿಳೆ ನೀಡಿದ ದೂರಿನನ್ವಯ ಮೂವರು ಮಹಿಳೆಯರು ಹಾಗೂ ಅವರ ಮಕ್ಕಳು ಈ ಕೃತ್ಯ ಮಾಡಿದ್ದಾರೆ ಎಂದು ಆರೋಪಿಸಿ ಅವರು ವಿರುದ್ಧ ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿದ್ದಾರೆ.
ಫಿರ್ಯಾದಿಯವರ ದೂರಿನ ಪ್ರಕಾರ, ಆರೋಪಿತರಾದ ನೀಲವ್ವ ಕೋಂ. ಫಕ್ಕೀರಸ್ವಾಮಿ ಹರಿಜನ, ಕುಸಮಾ ಕೋಂ. ಫಕ್ಕೀರಸ್ವಾಮಿ ಹರಿಜನ ಹಾಗೂ ರೇಣುಕಾ ಕೋಂ. ನಾಗಪ್ಪ ಹರಿಜನ, ಸಾಲಗಾಂವ ನಿವಾಸಿಗಳು—ಇವರು ತಮ್ಮ ಮಕ್ಕಳೊಂದಿಗೆ ಸೇರಿಕೊಂಡು, ನವೆಂಬರ್ 15ರ ರಾತ್ರಿ 8 ಗಂಟೆಯಿಂದ ನವೆಂಬರ್ 16ರ ಬೆಳಿಗ್ಗೆ 10 ಗಂಟೆ ಸಮಯದೊಳಗೆ ಸರ್ವೆ ನಂ.217ರ, ಜಾಗ 4–38 ಎಕರೆ ಭತ್ತದ ಜಮೀನಿಗೆ ಅಕ್ರಮವಾಗಿ ಪ್ರವೇಶಿಸಿ ಈ ಕೃತ್ಯ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಉತ್ತರ ಕನ್ನಡ | ನಿಷೇಧವಿದ್ದರೂ ನಿಲ್ಲದ ಮರಳು ದಂಧೆ; ಎನ್ಜಿಟಿ ಆದೇಶಕ್ಕೂ ಕಿಮ್ಮತ್ತಿಲ್ಲ
ಈ ಸಂದರ್ಭದಲ್ಲಿ, ಜಮೀನಿನಲ್ಲಿ ಬೆಳೆದಿದ್ದ ಸುಮಾರು 120 ಚೀಲ ಭತ್ತ (ಅದರ ಮೌಲ್ಯ ರೂ. 1,60,000) ಹಾಗೂ 160 ಪೆಂಡಿ ಭತ್ತದ ಹುಲ್ಲು (ಅದರ ಮೌಲ್ಯ ರೂ. 16,000)ಗಳನ್ನು ಕತ್ತರಿಸಿ ಕಳವು ಮಾಡಿಕೊಂಡು ಹೋಗಿದ್ದಾರೆ, ಹಾಗೂ ಕಳ್ಳತನ ಮಾಡಿದ ಭತ್ತವನ್ನು ಮಾಲತೇಶ ತೊಂಡರು (ಅಜ್ಜಿಹಳ್ಳಿ) ಇವರ ಟ್ರಾಕ್ಟರ್ ಮೂಲಕ ಸಾಗಿಸಲಾಗಿದೆ ಎಂದು ದೂರಿನಲ್ಲಿ ಹೇಳಲಾಗಿದೆ.
ಘಟನೆಯ ಬಗ್ಗೆ ಪ್ರಕರಣ ದಾಖಲಿಸಿ ಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದು, ಕಳುವಾದ ಬೆಳೆಸಾಮಾನುಗಳ ಬಗ್ಗೆ ಪರಿಶೀಲನೆ ಮುಂದುವರಿಸಿದ್ದಾರೆ.





