ಮುಂಡಗೋಡ : ಉಪನೋಂದಣಿ ಹಾಗೂ ವಿವಾಹ ನೋಂದಣಿ ಕಚೇರಿಯಲ್ಲಿ ಅಕ್ರಮ ವ್ಯವಹಾರಗಳ ಆರೋಪ ಮತ್ತೆ ತಲೆದೋರಿದೆ. ಬುಧವಾರ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಿದ್ರೂ, ಜನರಲ್ಲಿ ಏಳುತ್ತಿರುವ ಪ್ರಶ್ನೆ ಒಂದೇ — ಇಷ್ಟು ದೂರುಗಳು, ಇಷ್ಟು ವಿವಾದಗಳ ನಡುವೆಯೂ ಅಧಿಕಾರಿಗಳ ಮೇಲೆ ಕ್ರಮ ಏಕೆ ಕೈಗೊಳ್ಳಲಾಗುತ್ತಿಲ್ಲ? ಎಂಬುದು.
ಇತ್ತೀಚೆಗೆ ನಕಲಿ ದಾಖಲೆಗಳ ಆಧಾರದ ಮೇಲೆ ವಿವಾಹ ನೋಂದಣಿ ಹಾಗೂ ಜಮೀನು ವ್ಯವಹಾರ ನಡೆದಿರುವುದು ಬಹಿರಂಗವಾದ ಬಳಿಕ, ಕಚೇರಿಯ ಅಧಿಕಾರಿಗಳ ವಿರುದ್ಧ ಜನರ ಆಕ್ರೋಶ ಹೆಚ್ಚಾಗಿದೆ. ಈ ಕುರಿತು ಹಿಂದೆಯೂ ಹಲವು ಬಾರಿ ಆರೋಪಗಳು ಕೇಳಿಬಂದಿದ್ದರೂ, ಅಧಿಕಾರಿಗಳನ್ನು ವರ್ಗಾವಣೆ ಮಾಡದೇ ಅಥವಾ ಅಮಾನತು ಮಾಡದೇ ಇರಿಸಿರುವುದು ಗಂಭೀರ ಪ್ರಶ್ನೆ ಎಬ್ಬಿಸಿದೆ.
ಲೋಕಾಯುಕ್ತದ ದಾಳಿ – ದಾಖಲೆಗಳ ವಶಕ್ಕೆ ಪಡೆದು ತನಿಖೆ ಮುಂದುವರಿಕೆ ಬುಧವಾರ ಇನ್ಸ್‌ಪೆಕ್ಟರ್ ಎಸ್.ಎಸ್. ತೇಲಿ ನೇತೃತ್ವದ ಲೋಕಾಯುಕ್ತ ತಂಡವು ಉಪನೋಂದಣಿ ಕಚೇರಿಯ ದಾಖಲೆಗಳನ್ನು ಪರಿಶೀಲಿಸಿ, ನಕಲಿ ದಾಖಲಾತಿ ಪ್ರಕರಣಗಳ ಕುರಿತು ವಿಚಾರಣೆ ನಡೆಸಿತು. ಕಳೆದ ಎರಡು ವರ್ಷಗಳಲ್ಲಿ ನಡೆದ ವಿವಾಹ ನೋಂದಣಿ ಹಾಗೂ ಜಮೀನು ವ್ಯವಹಾರಗಳ ದಾಖಲೆಗಳಲ್ಲಿ ಲೋಪದೋಷ ಪತ್ತೆಯಾಗಿವೆ. ಕೆಲವು ದಾಖಲೆಗಳನ್ನು ವಶಕ್ಕೆ ಪಡೆದು ತನಿಖೆಗೆ ಕಳುಹಿಸಲಾಗಿದೆ.

ಮುಂಡಗೋಡ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಅಕ್ರಮಗಳ ಕುರಿತಾಗಿ ಹಲವು ಬಾರಿ ಆರೋಪ ಕೇಳಿಬಂದರೂ, ಅಧಿಕಾರಿಗಳ ಮೇಲೆ ಯಾವುದೇ ರೀತಿಯಲ್ಲೂ ಕ್ರಮ ಕೈಗೊಳ್ಳುತ್ತಿಲ್ಲ. ಇದಕ್ಕೆ ಕಾರಣವೇನು ಎಂಬ ಪ್ರಶ್ನೆ ತಾಲ್ಲೂಕಿನ ಜನರ ಮನಸ್ಸಿನಲ್ಲಿ ಮೂಡುತ್ತಿದೆ. ಕಚೇರಿಯ ಅಕ್ರಮ ವ್ಯವಹಾರಗಳಿಂದ ಮೇಲಿನ ಅಧಿಕಾರಿಗಳಿಗೆ ಇಂತಿಷ್ಟು ಅಂತ ಏನಾದ್ರೂ ಪಾಲು ಹೋಗುತ್ತಿದ್ದಿಯಾ ಎಂಬ ಅನುಮಾನ ಸಹ ಉಂಟಾಗಿದೆ. ಜನರು ಕೆಲಸಕ್ಕಾಗಿ ತೆರಳಿದರೆ ಅವರ ದಾಖಲೆಗಳು ಸರಿ ಇದ್ದರೆ ಕಾನೂನಿನ ಪ್ರಕಾರ ಅವರು ಕೆಲಸ ಮಾಡಿಕೊಡಬೇಕು ಆದರೆ ಲಂಚ ಕೊಡದೆ ದಾಖಲೆಗಳನ್ನೆ ಮುಟ್ಟುವುದಿಲ್ಲ. ಲಂಚ ಕೊಟ್ಟರೆ ಸುಳ್ಳು ದಾಖಲೆಗಳಿದ್ದರೂ ನೋಂದಣಿ ಮಾಡಿಕೊಡುತ್ತಾರೆ ಎನ್ನುವ ಸ್ಥಿತಿಗೆ ಉಪನೋಂದಣಾಧಿಕಾರಿ ಕಚೇರಿಯನ್ನು ಇಲ್ಲಿನ ಸಿಬ್ಬಂದಿಗಳು ತಂದಿದ್ದಾರೆ. ಇಂತಹ ಅಕ್ರಮಗಳು ಮುಂದುವರಿಯುತ್ತಿದ್ದರು ಹಿರಿಯ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿರುವುದು ಏಕೆ ಎಂದು ಶ್ರೀರಾಮ ಸೇನೆಯ ಅಧ್ಯಕ್ಷ ಮಂಜುನಾಥ್ ಎಚ್.ಪಿ. ಅವರು ಪ್ರಶ್ನಿಸಿದರು.
ಈ ಸುದ್ದಿ ಓದಿದ್ದೀರಾ? ಶಿರಸಿ | ಅಂಚೆ ಇಲಾಖೆಯಲ್ಲಿ ಉದ್ಯೋಗಾವಕಾಶ – ಏಜೆಂಟ್ ಹಾಗೂ ಫೀಲ್ಡ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ಸಾಮಾನ್ಯ ಜನರು ಪ್ರತಿನಿತ್ಯ ತಮ್ಮ ಕೆಲಸಕ್ಕೆ ನೋಂದಣಿ ಕಚೇರಿಗೆ ಆಗಮಿಸುತ್ತಾರೆ ಎಲ್ಲಾ ದಾಖಲೆಗಳು ಸರಿ ಇದ್ದರೂ ಅವರು ಕೇಳಿದಷ್ಟು ಕೊಡದೆ ಹೋದರೆ ಯಾವುದೇ ಕೆಲಸ ಆಗುವುದಿಲ್ಲ. ಹೆಚ್ಚುವರಿ ಹಣ ಕೊಟ್ಟರೆ ಮಾತ್ರ ಕೆಲಸ ಆಗುತ್ತದೆ ಎಂಬ ಆರೋಪ ಪ್ರತಿನಿತ್ಯ ಕಚೇರಿಗೆ ಭೇಟಿ ನೀಡುವ ಸಾರ್ವಜನಿಕರ ಹೇಳುವ ಸರ್ವೇಸಾಮಾನ್ಯ ಮಾತಾಗಿದೆ. ಕರ್ನಾಟಕ ದಲಿತ ರಕ್ಷಣಾ ವೇದಿಕೆ, ಹಿಂದು ಜಾಗರಣ ವೇದಿಕೆ, ಶ್ರೀರಾಮಸೇನೆ ಹಾಗೂ ಭಜರಂಗದಳದ ಮುಖಂಡರುಗಳು ಉಪ ತಹಶೀಲ್ದಾರ್ ಅವರಿಗೆ ಮನವಿ ಪತ್ರ ನಿಡಿ. ಮುಂಡಗೋಡ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ದೀಪಾ ಕರಮಡಿ ಅವರನ್ನು ಹಾಗೂ ಇಬ್ಬರು ಕಂಪ್ಯೂಟರ್ ಆಪರೇಟರ್ ಸಿಬ್ಬಂದಿಗಳನ್ನು ಅಮಾನತು ಮಾಡಿ ಇಲ್ಲವೇ ಬೇರೆ ಕಡೆ ವರ್ಗಾವಣೆ ಮಾಡಿ ಮುಂಡಗೋಡ ತಾಲ್ಲೂಕಿನಲ್ಲಿ ಮಾತ್ರ ಅವರು ಬೇಡ ಎಂಬ ಬೇಡಿಕೆ ಇಟ್ಟಿದ್ದಾರೆ. ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಕಚೇರಿಯ ಮುಂದೆ ತೀವ್ರ ಸ್ವರೂಪದ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ.





