ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನಲ್ಲಿ ಕ್ಷುಲ್ಲಕ ಕಾರಣಕ್ಕೆ ತಾಯಿ ಮತ್ತು ಮಗ ಸೇರಿ ಮಲತಂದೆಯ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ ಘಟನೆ ತಾಲೂಕಿನ ತಟ್ಟಿಹಳ್ಳಿಯಲ್ಲಿ ಗುರುವಾರ ನಡೆದಿದೆ.
ಆರೋಪಿಗಳಾದ ಶಿವರಾಜ ಕಲಕಟ್ಟಿ ಹಾಗೂ ಆತನ ತಾಯಿ ನಾಗಮ್ಮ ಎಂಬುವವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಘಟನೆಯ ವಿವರ: ಶಿವಾನಂದ ಗುಡಿಹಾಳ ಎಂಬುವವರು ತಟ್ಟಿಹಳ್ಳಿಯಲ್ಲಿ ವಾಸವಾಗಿದ್ದು, ಇತ್ತೀಚಿನ ದಿನಗಳಲ್ಲಿ ಅವರ ಎರಡನೇ ಪತ್ನಿ ನಾಗಮ್ಮ ಅವರೊಂದಿಗೆ ಸಂಸಾರಿಕ ವಿಚಾರದಲ್ಲಿ ಆಗಾಗ ಜಗಳವಾಡುತ್ತಿದ್ದರು. ಇದೇ ಸಿಟ್ಟಿನಲ್ಲಿದ್ದ ನಾಗಮ್ಮ, ಜನವರಿ 15ರಂದು ಮಧ್ಯಾಹ್ನ ಶಿವಾನಂದ ಅವರು ತಮ್ಮ ಲಾರಿ ಮಾಲೀಕ ಹಾಗೂ ಅವರ ಮಗನೊಂದಿಗೆ ಮನೆಗೆ ಬಂದಾಗ ಮತ್ತೆ ಜಗಳ ತೆಗೆದಿದ್ದಾರೆ.
ಬಳಿಕ ತನ್ನ ಮೊದಲನೇ ಗಂಡನ ಮಗನಾದ ಶಿವರಾಜ ಕಲಕಟ್ಟಿಗೆ ಫೋನ್ ಮಾಡಿ ಕರೆಸಿಕೊಂಡಿದ್ದಾರೆ. ಇವನಿಗೆ ಬಂದು ಬುದ್ಧಿ ಹೇಳಿ ಸೇರಿ ಮಾಡ್ತೀಯಾ ಅಥವಾ ಇಲ್ಲಾ ಅಂತ ಹೇಳಿದಾಗ ಆರೋಪಿತನು ಹಾನಗಲ್ ತಾಲೂಕಿನ ಮಹಾರಾಜ ಪೇಟೆ ಯಿಂದ ಕಾರಿನಲ್ಲಿ ಸ್ಥಳಕ್ಕೆ ಬಂದು ಶಿವಾನಂದ ಅವರೊಂದಿಗೆ ಮಾತಿಗೆ ಮಾತು ಬೆಳೆಸಿದ್ದಾನೆ.
ಈ ಸಂದರ್ಭದಲ್ಲಿ ನಾಗಮ್ಮ ಅವರು “ನನ್ನ ಗಂಡನ ಕಾಟ ಹೆಚ್ಚಾಗಿದೆ, ಇವನನ್ನು ಇಂದು ಜೀವಸಹಿತ ಬಿಡಬೇಡ” ಎಂದು ಮಗನಿಗೆ ಪ್ರಚೋದನೆ ನೀಡಿದ್ದಾರೆನ್ನಲಾಗಿದೆ. ತಾಯಿಯ ಮಾತಿನಿಂದ ಪ್ರೇರೇಪಿತಗೊಂಡ ಶಿವರಾಜ, ತಾನು ತಂದಿದ್ದ ಕಂದಲಿ (ಕತ್ತಿ)ಯಿಂದ ಶಿವಾನಂದ ಅವರನ್ನು ಕೊಲೆ ಮಾಡುವ ಉದ್ದೇಶದಿಂದ ಹಲ್ಲೆ ನಡೆಸಿದ್ದಾನೆ.
ಈ ಸುದ್ದಿ ಓದಿದ್ದೀರಾ? ಉತ್ತರ ಕನ್ನಡ | ಆರ್‌ಸಿಬಿ ಪಾಲಾದ ಗೋಕರ್ಣದ ಕುವರಿ: ಪ್ರತ್ಯೂಷಾ ಕುಮಾರ್ ಡಬ್ಲ್ಯೂಪಿಎಲ್‌ಗೆ ಆಯ್ಕೆ
ದಾಳಿಯ ಪರಿಣಾಮ ಶಿವಾನಂದ ಅವರ ಕುತ್ತಿಗೆಯ ಹಿಂಭಾಗ, ಎಡ ಕೆನ್ನೆ ಹಾಗೂ ಬಲಗಣ್ಣಿನ ಕೆಳಭಾಗಕ್ಕೆ ಗಂಭೀರ ಗಾಯಗಳಾಗಿದ್ದು, ಸ್ಥಳದಲ್ಲಿ ಭಾರೀ ರಕ್ತಸ್ರಾವ ಉಂಟಾಗಿದೆ. ಕೃತ್ಯ ಎಸಗಿದ ಬಳಿಕ ಆರೋಪಿ ಶಿವರಾಜ ಸ್ಥಳದಿಂದ ಪರಾರಿಯಾಗಿದ್ದಾನೆ.
ಗಾಯಗೊಂಡ ಶಿವಾನಂದ ಅವರನ್ನು ಸ್ಥಳೀಯರು ಹಾಗೂ ಪೊಲೀಸರ ಸಹಾಯದಿಂದ ಆಂಬ್ಯುಲೆನ್ಸ್ ಮೂಲಕ ಮುಂಡಗೋಡ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಗಳ ಸಮ್ಮುಖದಲ್ಲಿ ಗಾಯಾಳು ನೀಡಿದ ಹೇಳಿಕೆಯನ್ನಾಧರಿಸಿ ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.





