ಮುಂಡಗೋಡ: ಟಿಬೆಟಿಯನ್ನರ ಆಧ್ಯಾತ್ಮಿಕ ಗುರುಗಳಾದ ಪರಮಪೂಜ್ಯ ದಲೈ ಲಾಮಾ ಅವರು ಮುಂಡಗೋಡಿನಲ್ಲಿರುವ ಟಿಬೆಟಿಯನ್ ನಿರಾಶ್ರಿತರ ಕೇಂದ್ರಕ್ಕೆ (ಕ್ಯಾಂಪ್) ಆಗಮಿಸುತ್ತಿರುವ ಹಿನ್ನೆಲೆಯಲ್ಲಿ, ಭದ್ರತಾ ವ್ಯವಸ್ಥೆಗಳನ್ನು ಬಲಪಡಿಸುವ ದೃಷ್ಟಿಯಿಂದ ಇಂದು ಜಿಲ್ಲಾ ವರಿಷ್ಠಾಧಿಕಾರಿಗಳು (SP) ಟಿಬೆಟಿಯನ್ ಮುಖಂಡರೊಂದಿಗೆ ಪೂರ್ವಭಾವಿ ಸಭೆ ನಡೆಸಿದರು.
ಉತ್ತರ ಕನ್ನಡ ಜಿಲ್ಲಾಡಳಿತವು ಭದ್ರತೆಯನ್ನು ಅತಿ ಗಂಭೀರವಾಗಿ ಪರಿಗಣಿಸಿದ್ದು, ಸ್ವತಃ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಅವರೇ ಇಂದು ಮುಂಡಗೋಡ ತಾಲೂಕು ಮತ್ತು ಟಿಬೆಟಿಯನ್ ಕ್ಯಾಂಪ್‌ಗೆ ಭೇಟಿ ನೀಡಿದರು. ಅವರೊಂದಿಗೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (Addl SP), ಸ್ಥಳೀಯ ಸಹಾಯಕ ಆಯುಕ್ತರು (AC), ಮತ್ತು ಉಪ ಪೊಲೀಸ್ ವರಿಷ್ಠಾಧಿಕಾರಿಗಳು (DYSP) ಸಹ ಆಗಮಿಸಿದ್ದರು.
ಅಧಿಕಾರಿಗಳ ತಂಡವು ಟಿಬೆಟಿಯನ್ ಕ್ಯಾಂಪ್‌ನ ಮುಖ್ಯದ್ವಾರದಿಂದ ಆರಂಭಿಸಿ ಒಳಭಾಗದ ಪ್ರಮುಖ ಪ್ರದೇಶಗಳು, ಸಭೆಗಳು ನಡೆಯುವ ಸ್ಥಳಗಳು ಮತ್ತು ದಲೈ ಲಾಮಾ ಅವರು ತಂಗುವ ಸ್ಥಳದ ಸುತ್ತಮುತ್ತಲಿನ ಪರಿಸರವನ್ನು ಪರಿಶೀಲಿಸಿದರು. ಇದೇ ಸಂದರ್ಭದಲ್ಲಿ ಎಲ್ಲಾ ತಾಲೂಕು ಮಟ್ಟದ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು. ಸಭೆಯಲ್ಲಿ ಪ್ರಮುಖವಾಗಿ HESCOM, PWD ಕಾಮಗಾರಿಗಳು, ಕಟ್ಟಡಗಳಿಗೆ ಅಗ್ನಿಶಾಮಕ ಸುರಕ್ಷತಾ ಪ್ರಮಾಣಪತ್ರ (Fire Fitness Certificate), ಮತ್ತು ಲಿಫ್ಟ್‌ಗಳ ಸುರಕ್ಷತೆ (Lift Bagge) ಕುರಿತು ಚರ್ಚಿಸಲಾಯಿತು.
ಅಲ್ಲದೆ, ತಾಲೂಕಿನಲ್ಲಿ ಭದ್ರತೆ ಹೆಚ್ಚಿಸಲು ಚೆಕ್ ಪೋಸ್ಟ್‌ಗಳು ಮತ್ತು ಪಟ್ಟಣ ವ್ಯಾಪ್ತಿಯಲ್ಲಿ CCTV ಅಳವಡಿಕೆ ಮತ್ತು ದುರಸ್ತಿ ಮಾಡುವಂತೆ ಪಟ್ಟಣ ಪಂಚಾಯಿತಿ ಅಧಿಕಾರಿಗಳಿಗೆ ತಿಳಿಸಿದರು. ಹಾಗೂ ಪಟ್ಟಣ ಪಂಚಾಯತ್ ಮತ್ತು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸ್ವಚ್ಛತಾ ಕಾಮಗಾರಿಗಳು ಹಾಗೂ ಕುಡಿಯುವ ನೀರಿನ ಶುಚಿತ್ವದ ಕುರಿತು ಕಡ್ಡಾಯವಾಗಿ ಕ್ರಮ ಕೈಗೊಳ್ಳಲು ಎಲ್ಲ ತಾಲೂಕು ಮಟ್ಟದ ಅಧಿಕಾರಿಗಳಿಗೆ ಸೂಚಿಸಲಾಯಿತು.
ಈ ಸುದ್ದಿ ಓದಿದ್ದೀರಾ? ಉತ್ತರ ಕನ್ನಡ | ಜಿಲ್ಲೆಯಲ್ಲಿ ಭರ್ಜರಿ ಕಾರ್ಯಾಚರಣೆ: ಅಕ್ರಮ ಮದ್ಯ ಜಪ್ತಿ, 38 ಸಾವಿರ ರೂ. ಮೌಲ್ಯದ ಸರಕು ವಶ
ಕ್ಯಾಂಪ್‌ನ ಎಲ್ಲಾ ಮೂಲೆಗಳಲ್ಲೂ ಸೂಕ್ತ ಸಿಸಿಟಿವಿ ಕಣ್ಗಾವಲು ಮತ್ತು ಭದ್ರತಾ ಸಿಬ್ಬಂದಿಯ ನಿಯೋಜನೆಯ ಬಗ್ಗೆ ಮಾಹಿತಿ ಪಡೆದರು. ದಲೈ ಲಾಮಾ ಅವರ ಆಗಮನದ ಸಂದರ್ಭದಲ್ಲಿ ಯಾವುದೇ ಲೋಪವಾಗದಂತೆ ಬಿಗಿ ಭದ್ರತೆ ಕಲ್ಪಿಸಲು, ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಹಾಗೂ ದೇಶೀಯ ಮತ್ತು ವಿದೇಶಿ ಭಕ್ತರ ಸುರಕ್ಷತೆ ಬಗ್ಗೆ ನಿಗಾ ವಹಿಸಲು ಸೂಚನೆ ನೀಡಿದರು.
ಪೂರ್ವಭಾವಿ ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ., ಹೆಚ್ಚುವರಿ ಎಸ್ಪಿಗಳಾದ ಕೃಷ್ಣಮೂರ್ತಿ ಮತ್ತು ಜಗದೀಶ್ ಎಂ.ಎನ್., ಹಾಗೂ ಶಿರಸಿ ಡಿವೈಎಸ್ಪಿ ಗೀತಾ ಪಾಟೀಲ್ ಉಪವಿಭಾಗಾಧಿಕಾರಿಗಳಾದ ಕಾವ್ಯ ರಾಣಿ ಅವರು ತಹಶೀಲ್ದಾರ್ ಶಂಕರ ಗೌಡಿ, ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.





