ಮುಂಡಗೋಡ: ತಾಲ್ಲೂಕಿನ ಮಳಗಿ ಸಮೀಪದ ಕೊಳಗಿ ಅರಣ್ಯ ವಲಯದಲ್ಲಿ ಅಂದಾಜು 35 ರಿಂದ 40 ವರ್ಷ ವಯಸ್ಸಿನ ಅಪರಿಚಿತ ಮಹಿಳೆಯೊಬ್ಬರ ಶವ ಪತ್ತೆಯಾಗಿದ್ದು, ಇಡೀ ಭಾಗದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಶವವು ಸಂಪೂರ್ಣವಾಗಿ ವಿವಸ್ತ್ರಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿರುವುದು ಹಲವು ಗಂಭೀರ ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ.
ಘಟನೆಯ ವಿವರ: ಅರಣ್ಯ ಪ್ರದೇಶದ ನಿರ್ಜನ ಪ್ರದೇಶದಲ್ಲಿ ಬಿದ್ದಿದ್ದ ಮಹಿಳೆಯ ದೇಹವನ್ನು ಕಂಡ ಸ್ಥಳೀಯರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಮುಂಡಗೋಡ ಪೊಲೀಸರು ಪ್ರಾಥಮಿಕ ಪರಿಶೀಲನೆ ನಡೆಸಿದ್ದಾರೆ.
ದುಷ್ಕರ್ಮಿಗಳು ಮಹಿಳೆಯನ್ನು ಬೇರೆಡೆ ಕೊಲೆ ಮಾಡಿ, ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಇಲ್ಲಿ ತಂದು ಎಸೆದಿರಬಹುದು ಅಥವಾ ಇದೇ ಸ್ಥಳದಲ್ಲಿ ಕೃತ್ಯ ನಡೆಸಿರಬಹುದು ಎಂಬ ದಟ್ಟ ಸಂಶಯ ವ್ಯಕ್ತವಾಗಿದೆ.
ಈ ಸುದ್ದಿ ಓದಿದ್ದೀರಾ? ದಾಂಡೇಲಿ | ಆರ್.ವಿ. ದೇಶಪಾಂಡೆ ವಿರುದ್ಧದ ಟೀಕೆ ‘ಬಾಲಿಶತನದ ಪರಮಾವಧಿ’: ಸುನೀಲ ಹೆಗಡೆಗೆ ಮೋಹನ ಹಲವಾಯಿ ತಿರುಗೇಟು
ಶವ ಪತ್ತೆಯಾದ ಸ್ಥಳದಲ್ಲಿ ಕತ್ತಲೆ ಆವರಿಸಿದ್ದರಿಂದ, ಪೊಲೀಸರು ಕೃತಕ ಬೆಳಕಿನ ವ್ಯವಸ್ಥೆ ಮಾಡಿಕೊಂಡು ಸ್ಥಳ ಮಹಜರು ನಡೆಸುತ್ತಿದ್ದಾರೆ. ಮೃತ ಮಹಿಳೆಯ ಗುರುತು ಇನ್ನೂ ಪತ್ತೆಯಾಗಿಲ್ಲ. ಕೊಲೆಗೆ ನಿಖರ ಕಾರಣವೇನು? ಕೃತ್ಯದ ಹಿಂದೆ ಯಾರ ಕೈವಾಡವಿದೆ? ಎಂಬ ಪ್ರಶ್ನೆಗಳಿಗೆ ಉತ್ತರ ಹುಡುಕಲು ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ.
ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದು, ಮುಂದಿನ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ಭೀಕರ ಘಟನೆಯು ಸ್ಥಳೀಯರಲ್ಲಿ ತಲ್ಲಣ ಮೂಡಿಸಿದ್ದು, ಪೊಲೀಸರ ತನಿಖೆಯ ನಂತರವಷ್ಟೇ ಸಾವಿನ ಅಸಲಿ ರಹಸ್ಯ ಹೊರಬರಬೇಕಿದೆ.





