ಮುಂಡಗೋಡ : ಕಳೆದ ಕೆಲವು ದಿನಗಳಿಂದ ಪಟ್ಟಣದಲ್ಲಿ ದನಗಳ್ಳರ ಹಾವಳಿ ಹೆಚ್ಚಾಗಿದ್ದು ರಾತ್ರಿ ವೇಳೆಯಲ್ಲಿ ಮಲಗಿರುವ ದನ ಕರುಗಳನ್ನು ಕಾರಿನಲ್ಲಿ ಕಳುವು ಮಾಡಿಕೊಂಡು ಹೊಗುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ, ಇದರಿಂದ ಸ್ಥಳೀಯರಲ್ಲಿ ಮತ್ತು ಜಾನುವಾರು ಮಾಲೀಕರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಕಂದು ಬಣ್ಣದ ರೆನಾಲ್ಟ್ ಡಸ್ಟರ್ ಕಾರಿನ ಹಾಗೆ ಕಾಣುವ ವಾಹನದಲ್ಲಿ ಅಪರಿಚಿತ ವ್ಯಕ್ತಿಗಳು ರಾತ್ರಿ ಹೊತ್ತು ಬಂದು, ಈ ಕೃತ್ಯ ಎಸಗುತ್ತಿದ್ದಾರೆ ಎಂದು ಪ್ರಾಣಿಗಳ ಮಾಲಿಕರು ತಿಳಿಸಿದ್ದಾರೆ.
ಇದುವರೆಗೆ ಮೂರು ದನ ಕಳುವಾಗಿರುವುದಾಗಿ ತಿಳಿದುಬಂದಿದೆ. ಜಗದೀಶ ಭರಮಣ್ಣ ಗೌಳಿ ಅವರಿಗೆ ಸೇರಿದ ಸಣ್ಣ ಕರು, ಜಗದೀಶ ಅಗಡಿ ಅವರಿಗೆ ಸೇರಿದ ಆಕಳು, ಹಾಗೂ ಹಜರತ ಅಲಿ ಅಬ್ದುಲ್ ರೆಹಮಾನ್ ಚೋಪದಾರ, ಅವರಿಗೆ ಸೇರಿದ ದನವನ್ನು ಕಳವು ಮಾಡಿಕೊಂಡು ಹೋಗಿದ್ದಾರೆ ಎಂದು ಮಾಲಿಕರು ಮುಂಡಗೋಡ ಪೊಲೀಸ್ ಠಾಣೆಯಲ್ಲಿ ದೂರನ್ನು ಸಲ್ಲಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮುಂಡಗೋಡ | ಅಕ್ರಮವಾಗಿ ಮದ್ಯ ಮಾರಾಟ ಹೆಚ್ಚಳ: ಅಬಕಾರಿ ಇಲಾಖೆಯ ನಿರ್ಲಕ್ಷ್ಯಕ್ಕೆ ಬಡ ಕುಟುಂಬಗಳು ಬೀದಿಪಾಲು
ರಾತ್ರಿ ವೇಳೆ ಸಂಶಯಾಸ್ಪದವಾಗಿ ಸಂಚರಿಸುತ್ತಿದ್ದ ಕಂದು ರೂಪದ ಕಾರಿನ ಚಿತ್ರವು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಸಿಕ್ಕಿದ್ದೆ, ದನಗಳ ಮಾಲಿಕರು ತಮ್ಮ ದನಗಳನ್ನು ಸುರಕ್ಷಿತವಾಗಿ ಕಾಯ್ದುಕೊಳ್ಳುವಂತೆ, ಮತ್ತು ಸಂಜೆ ನಂತರ ಬೀದಿಗೆ ಬಿಡದಂತೆ ಕೊಟ್ಟಿಗೆಯಲ್ಲಿ ಕಟ್ಟಿ ಹಾಕುವಂತೆ ಹಾಗೂ ಯಾವುದೇ ಅನುಮಾನಾಸ್ಪದ ವಾಹನ ಅಥವಾ ವ್ಯಕ್ತಿಗಳನ್ನು ಗಮನಿಸಿದ ತಕ್ಷಣ ಪೊಲೀಸ್ ಇಲಾಖೆಗೆ ಮಾಹಿತಿ ನೀಡುವಂತೆ ಮನವಿ ಮಾಡಲಾಗಿದೆ. ಪೊಲೀಸರು ಶೀಘ್ರದಲ್ಲೇ ಆರೋಪಿಗಳನ್ನು ಗುರುತಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.





