ಮುಂಡಗೋಡ: ಸ್ಥಳೀಯ ಲೊಯೋಲ ವಿಕಾಸ ಕೇಂದ್ರದಲ್ಲಿ ಇಂದು ಕ್ರಿಸ್ತ ಜಯಂತಿ ಹಾಗೂ ಹೊಸ ವರ್ಷದ ಸಂಭ್ರಮದ ಅಂಗವಾಗಿ ತಾಲೂಕಿನ ವಿವಿಧ ಪ್ರಗತಿಪರ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ‘ಅಂತರ್ ಧರ್ಮೀಯ ಬಹುತ್ವ ಆಚರಣೆ’ ಕಾರ್ಯಕ್ರಮವು ಅತ್ಯಂತ ಸೌಹಾರ್ದಯುತವಾಗಿ ಜರುಗಿತು.
ಸಿಸಿಎಫ್ ಲೊಯೋಲ ಜನಸ್ಪೂರ್ತಿ ಮಹಿಳಾ ಒಕ್ಕೂಟ, ಉತ್ತರ ಕನ್ನಡ ಜಿಲ್ಲೆಯ ಕಲ್ಪವೃಕ್ಷ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಯೂನಿಯನ್, ತಾಲೂಕು ಭೂ ಹಕ್ಕುದಾರರ ಹಿತರಕ್ಷಣಾ ವೇದಿಕೆ, ಯುವರತ್ನ ಯುವ ಒಕ್ಕೂಟ, ಜನ ವೇದಿಕೆ ಹಾಗೂ ಸಿದ್ಧಿ ಅಭಿವೃದ್ಧಿ ಯೋಜನೆಯ ಸಹಯೋಗದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡಿದ್ದ ಮೌಲಾನ ಹಜರತ್ ಸರ್ಪರಾಜ್ ಅವರು ಮಾತನಾಡಿ, “ಕುರಾನ್‌ನಲ್ಲಿ ಪ್ರವಾದಿಗಳು ಬೋಧಿಸಿರುವಂತೆ ಒಗ್ಗಟ್ಟು, ಶಾಂತಿ ಮತ್ತು ಪ್ರೀತಿಯಿಂದ ಪರಸ್ಪರ ಹಂಚಿ ಬಾಳುವುದೇ ಜೀವನದ ಸಾರ. ಪ್ರಸ್ತುತ ನಮ್ಮ ದೇಶದಲ್ಲಿ ಒಗ್ಗಟ್ಟಿನ ಕೊರತೆ ಎದ್ದು ಕಾಣುತ್ತಿದ್ದು, ನಾವೆಲ್ಲರೂ ವಿವಿಧತೆಯಲ್ಲಿ ಏಕತೆಯನ್ನು ಸಾರುವ ದಿಸೆಯಲ್ಲಿ ಕಾರ್ಯಪ್ರವೃತ್ತರಾಗಬೇಕಿದೆ” ಎಂದು ಕರೆ ನೀಡಿದರು.
ಮತ್ತೋರ್ವ ಅತಿಥಿ ಶ್ರೀಮತಿ ನಾಗರತ್ನ ಶೆಟ್ಟಿ ಅವರು ಭಗವದ್ಗೀತೆಯ ತತ್ವಗಳನ್ನು ಉಲ್ಲೇಖಿಸುತ್ತಾ, “ಮಾನವೀಯ ಮೌಲ್ಯಗಳೇ ಎಲ್ಲ ಧರ್ಮಗಳ ಮೂಲಾಧಾರ. ಕವಿಗಳು ಮತ್ತು ಸಾಹಿತಿಗಳು ತಮ್ಮ ಸಾಹಿತ್ಯದ ಮೂಲಕ ಮಾನವೀಯತೆಯ ಮಹತ್ವವನ್ನು ಸಾರಿದ್ದಾರೆ. ನಾವೆಲ್ಲರೂ ಪರಸ್ಪರ ಗೌರವದಿಂದ ಮಾನವೀಯತೆಯ ದಾರಿಯಲ್ಲಿ ಸಾಗಬೇಕು” ಎಂದು ಹೇಳಿದರು.
ಲೊಯೋಲ ವಿಕಾಸ ಕೇಂದ್ರದ ಸಿದ್ದಿ ಅಭಿವೃದ್ಧಿ ಯೋಜನೆಯ ನಿರ್ದೇಶಕರಾದ ಫಾದರ್ ಆಲ್ವಿನ್ ಡಿಸೋಜ ಅವರು ಮಾತನಾಡಿ, “ಕ್ರಿಸ್ಮಸ್ ಎಂದರೆ ಕೇವಲ ಅಲಂಕಾರಿಕ ವಸ್ತುಗಳಲ್ಲ, ಅದು ಪ್ರೀತಿ ಮತ್ತು ಕರುಣೆಯ ಸಂಕೇತ. ಕ್ರಿಸ್ತನ ಶಾಂತಿ ಮತ್ತು ಸಹಕಾರದ ಸಂದೇಶವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಮಾಜದ ಏಳಿಗೆಗೆ ಶ್ರಮಿಸೋಣ” ಎಂದು ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಲೊಯೋಲ ವಿಕಾಸ ಕೇಂದ್ರದ ನಿರ್ದೇಶಕ ಫಾದರ್ ಅನಿಲ್ ಡಿಸೋಜ ಅವರು ಮಾತನಾಡಿ, “ಭಾರತವು ವಿವಿಧ ಜಾತಿ, ಧರ್ಮ ಮತ್ತು ಸಂಸ್ಕೃತಿಗಳ ಸುಂದರ ತೋಟವಾಗಿದೆ. ಈ ವೈವಿಧ್ಯತೆಯೇ ನಮ್ಮ ಶಕ್ತಿ. ವಿವಿಧತೆಯಲ್ಲಿ ಏಕತೆಯ ಭಾವನೆಯನ್ನು ನಾವು ಸದಾ ಎತ್ತಿ ಹಿಡಿಯಬೇಕಿದೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಶಿರಸಿ | ಹುಬ್ಬಳ್ಳಿ ‘ಮರ್ಯಾದಾ ಹತ್ಯೆ’ ಪ್ರಕರಣ; ಆರೋಪಿಗಳ ಮರಣ ದಂಡನೆಗೆ ಭೀಮಘರ್ಜನೆ ಆಗ್ರಹ
ಕಾರ್ಯಕ್ರಮದ ಆರಂಭದಲ್ಲಿ ಸ್ಮಿತಾ, ಬ್ರದರ್ ಕಿರಣ್ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಹಳಿಯಾಳದ ಸಿದ್ಧಿ ಅಭಿವೃದ್ಧಿ ಯೋಜನೆ ಹಾಗೂ ಎಲ್.ವಿ.ಕೆ ಮುಂಡಗೋಡಿನ ಸಿಬ್ಬಂದಿ ವರ್ಗದವರು ಕ್ರಿಸ್ಮಸ್ ಗೀತೆಗಳನ್ನು ಹಾಡಿದರು. ಬ್ರದರ್ ಕಿರಣ್ ಮತ್ತು ಪ್ರದೀಪ್ ಅವರು ನೆರೆದಿದ್ದವರಿಗಾಗಿ ವಿವಿಧ ಆಟಗಳನ್ನು ಆಯೋಜಿಸಿದರು.
ಶ್ರೀಮತಿ ಮಂಗಳ ಕಾರ್ಯಕ್ರಮ ನಿರೂಪಿಸಿದರು, ಶ್ರೀ ನಾಗರಾಜ್ ಕಟ್ಟಿಮನಿ ಸ್ವಾಗತಿಸಿದರು ಮತ್ತು ತೇಜಸ್ವಿನಿ ಬೇಗೂರ್ ವಂದಿಸಿದರು. ಶ್ರೀ ಭರಮಣ್ಣ ಚಕ್ರಸಾಲಿ, ಶ್ರೀಮತಿ ಮಲ್ಲಮ್ಮ ನೀರಲಗಿ ಹಾಗೂ ಶ್ರೀ ತನ್ವೀರ್ ಮಿರ್ಜಾನಕರ್ ಅವರು ಸಂಪನ್ಮೂಲ ವ್ಯಕ್ತಿಗಳನ್ನು ಪರಿಚಯಿಸಿದರು.





