ಮುಂಡಗೋಡ ಪಟ್ಟಣದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಕಚೇರಿಯೊಳಗೆ ಕರ್ತವ್ಯ ನಿರ್ವಹಿಸುತ್ತಿದ್ದ ಮಹಿಳಾ ಸರ್ಕಾರಿ ನೌಕರರೊಬ್ಬರಿಗೆ ವ್ಯಕ್ತಿಯೊಬ್ಬರು ಜಾತಿ ನಿಂದನೆ ಮಾಡಿ, ಜೀವ ಬೆದರಿಕೆ ಹಾಕಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಘಟನೆಯೊಂದು ವರದಿಯಾಗಿದ್ದು, ಈ ಸಂಬಂಧ ಮುಂಡಗೋಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಡಿ.2ರಂದು ಸುಮಾರಿಗೆ ಈ ಘಟನೆ ನಡೆದಿದೆ. ಮುಂಡಗೋಡದ ಗಾಂಧಿನಗರದ ನಿವಾಸಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಡಿ-ದರ್ಜೆ ನೌಕರರಾಗಿರುವ 49 ವರ್ಷದ ನೀಲಗಂಗವ್ವಾ ಕೋಂ ಬಸವರಾಜ ಚಲವಾದಿ ಅವರು, ಕಚೇರಿಯಲ್ಲಿ ಕೆಲಸ ಮಾಡುತ್ತಿರುವಾಗ, ವೆಂಕಟೇಶ ತಂದೆ ಕೃಷ್ಣಾ ಶಿರಾಲಿ ಎಂಬ ವ್ಯಕ್ತಿ ಅಲ್ಲಿಗೆ ಬಂದಿದ್ದಾರೆ. ಅವರು ನೇರವಾಗಿ ಕಚೇರಿಗೆ ನುಗ್ಗಿ, ಮಹಿಳೆಯ ಕರ್ತವ್ಯಕ್ಕೆ ಅಡ್ಡಿಪಡಿಸಿ. “ನಿಮ್ಮ ಮನೆಯ ಪಕ್ಕದಲ್ಲಿರುವ ನನ್ನ ಜಾಗ (ಪ್ಲಾಟ್) ಬಳಿ ನಿಮ್ಮ ಮಗ ರೂಪೇಶ ಚಲವಾದಿ ಮತ್ತು ನಿನ್ನ ತಮ್ಮ ನಿಂಗಪ್ಪ ಹಾಕಿರುವ ಬೇಲಿಯನ್ನು ತೆಗೆದುಕೊಳ್ಳಲು ಹೇಳಿ. ಇಲ್ಲದಿದ್ದರೆ ಒಂದು ಗತಿ ಕಾಣಿಸಬೇಕಾಗುತ್ತದೆ, ನಿಮ್ಮನ್ನು ಕೋರ್ಟಿಗೆ ಎಳೆಯಬೇಕಾಗುತ್ತದೆ” ಎಂದು ಬೆದರಿಸಿದ್ದಾನೆ.
ಇಷ್ಟಕ್ಕೆ ಸುಮ್ಮನಾಗದೆ, ಮಹಿಳೆಯ ಜಾತಿ ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಜಾತಿ ನಿಂದನೆ ಮಾಡಿ ಬೈದಿದ್ದಾನೆ. ಜೊತೆಗೆ, “ನೀವು ಇನ್ನೊಮ್ಮೆ ಸಿಕ್ಕರೆ ನಿಮ್ಮ ಜೀವ ತೆಗೆದುಹಾಕುತ್ತೇನೆ,” ಎಂದು ಜೀವ ಬೆದರಿಕೆ ಹಾಕಿದ್ದಾನೆ ಎಂದು ಮಹಿಳೆಯು ಪೋಲಿಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಶಿರಸಿ | ನಕಲಿ ಜಾತಿ ಪ್ರಮಾಣ ಪತ್ರದಿಂದ ನೌಕರಿ ಪಡೆದವರು ಸತ್ಯ ಬಹಿರಂಗಪಡಿಸಬೇಕು: ಭೀಮ ಘರ್ಜನೆ ಆಗ್ರಹ
ಈ ಘಟನೆಯಿಂದ ತೀವ್ರ ಆಘಾತಕ್ಕೆ ಒಳಗಾದ ನೀಲಗಂಗವ್ವಾ ಅವರು, ತಮ್ಮ ಕುಟುಂಬದ ಸದಸ್ಯರು ಹಾಗೂ ಹಿರಿಯರೊಂದಿಗೆ ಚರ್ಚಿಸಿದ ನಂತರ ಠಾಣೆಗೆ ಬಂದು ಕಾನೂನು ಕ್ರಮ ಕೈಗೊಳ್ಳುವಂತೆ ಕೋರಿ ದೂರು ನೀಡಿದ್ದಾರೆ. ಈ ದೂರಿನ ಆಧಾರದ ಮೇಲೆ, ಮುಂಡಗೋಡ ಪೊಲೀಸರು ವೆಂಕಟೇಶ ಶಿರಾಲಿ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ. ಸರ್ಕಾರಿ ಕಚೇರಿಯಲ್ಲೇ ದಲಿತ ಮಹಿಳಾ ನೌಕರರ ಮೇಲೆ ನಡೆದಿರುವ ಈ ಜಾತಿ ನಿಂದನೆ ಮತ್ತು ಬೆದರಿಕೆ ಪ್ರಕರಣವು ಸ್ಥಳೀಯವಾಗಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.





