ಮುಂಡಗೋಡ ಪಟ್ಟಣದಲ್ಲಿರುವ ಲೊಯೋಲಾ ವಿಕಾಸ ಕೇಂದ್ರದಲ್ಲಿ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಹಾಗೂ ಕರ್ನಾಟಕ ಸರ್ಕಾರದ ಪ್ರಾಯೋಜಕತ್ವದಲ್ಲಿ, ಕರ್ನಾಟಕ ಉದ್ಯಮಶೀಲತಾ ಅಭಿವೃದ್ಧಿ ಕೇಂದ್ರ (ಸಿಡಾಕ್) ಧಾರವಾಡ ಜಿಲ್ಲಾ ಕೈಗಾರಿಕಾ ಕೇಂದ್ರ, ಸಿಡಾಕ್ ಕಾರವಾರ, ಲೊಯೋಲಾ ವಿಕಾಸ ಕೇಂದ್ರ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಹಾಗೂ ಸಿಸಿಎಫ್-ಲೊಯೋಲ ಜನಸ್ಫೂರ್ತಿ ಸ್ವಸಹಾಯ ಸಂಘಗಳ ಟ್ರಸ್ಟ್, ಮುಂಡಗೋಡ ಇವರ ಸಂಯುಕ್ತ ಆಶ್ರಯದಲ್ಲಿ ನವೆಂಬರ್.10 ರಿಂದ ನವೆಂಬರ 20ರವರೆಗೆ 10 ದಿನಗಳ ಕಾಲ ಬುಡಕಟ್ಟು ಉಪ ಯೋಜನೆಯಡಿ ಪರಿಶಿಷ್ಟ ಪಂಗಡದ ಪುರುಷ ಮತ್ತು ಮಹಿಳೆಯರಿಗಾಗಿ ನಡೆದ ಉದ್ಯಮಶೀಲತಾ ಅಭಿವೃದ್ಧಿ ಕಾರ್ಯಕ್ರಮದ ಸಮಾರೋಪ ಸಮಾರಂಭವು ಲೊಯೋಲಾ ವಿಕಾಸ ಕೇಂದ್ರ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಸಿ-ಡಾಕ್ ಉಪನಿರ್ದೇಶಕ ಶಿವಾನಂದ ಎಲಿಗಾರ ಮಾತನಾಡಿ, 10 ದಿನಗಳ ಉದ್ಯಮಶೀಲತಾ ತರಬೇತಿಯ ವರದಿಯನ್ನು ಮಂಡಿಸಿದರು. ಮುಂದಿನ ದಿನಗಳಲ್ಲಿ ತರಬೇತಿ ಪಡೆದ ಅಭ್ಯರ್ಥಿಗಳಿಗಾಗಿ ಅನುಸರಣಾ ಸಭೆಯನ್ನು ಆಯೋಜಿಸಲಾಗುವುದು ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಉತ್ತರ ಕನ್ನಡ | ಅಬಕಾರಿ ಇಲಾಖೆಯ ಕಾರ್ಯಾಚರಣೆ; ಅಕ್ರಮ ಮದ್ಯ ಸೇರಿ ₹7 ಲಕ್ಷ ಮೌಲ್ಯದ ವಸ್ತುಗಳು ಜಪ್ತಿ
ಲೊಯೋಲಾ ವಿಕಾಸ ಕೇಂದ್ರದ ನಿರ್ದೇಶಕ ಫಾದರ್ ಅನಿಲ್ ಡಿ’ಸೋಜ ಅವರು ಶಿಬಿರಾರ್ಥಿಗಳು 10 ದಿನಗಳ ಕಾಲ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಯಶಸ್ವಿಗೊಳಿಸಿದಕ್ಕಾಗಿ ಅಭಿನಂದಿಸಿ, ತರಬೇತಿ ಪಡೆದ ಪ್ರತಿಯೊಬ್ಬರೂ ಸ್ವಂತ ಉದ್ಯಮ ಆರಂಭಿಸುವಂತೆ ಹಾರೈಸಿದರು.
ಕಾರ್ಯಕ್ರಮದ ಅನುಭವವನ್ನು ನಿಂಗಪ್ಪ ಮೇದಾರ, ಕವಿತಾ ವಡಗೇರಿ ಮತ್ತು ಪ್ರಿಯಾ ಅಣ್ಣಿಗೇರಿ ಹಂಚಿಕೊಂಡರು. ಕಾರ್ಯಕ್ರಮದಲ್ಲಿ ವಿನಾಯಕ ಸುಣಗಾರ, ಎನ್‌ಆರ್‌ಎಲ್‌ಎಂ ಸಿಬ್ಬಂದಿ ಹಾಗೂ ಶಿಬಿರಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಮಲ್ಲಮ್ಮ ನೀರಲಗಿ ನಿರೂಪಿಸಿದ್ದು, ಕವಿತಾ ವಡಗೇರಿ ಸ್ವಾಗತಿಸಿದರು. ಸಿ-ಡಾಕ್ ತರಬೇತುದಾರ ಶಿವರಾಜಕುಮಾರ ಹೆಳವಿ ವಂದಿಸಿದರು.





