ಮುಂಡಗೋಡ: ಪಟ್ಟಣದ ಸಿಟಿ ಫಾರ್ಮ್ ಬಳಿ ಇರುವ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಕಸ ವಿಲೇವಾರಿ ಘಟಕದಲ್ಲಿ ಮಂಗಳವಾರ ದಿನ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು, ಲಕ್ಷಾಂತರ ರೂಪಾಯಿ ಮೌಲ್ಯದ ಹೊಸ ಉಪಕರಣಗಳು ಸುಟ್ಟು ಭಸ್ಮವಾಗಿವೆ.
ಈ ಘಟನೆಯ ಬೆನ್ನಲ್ಲೇ ಪಟ್ಟಣ ಪಂಚಾಯಿತಿಯಲ್ಲಿ ಸಿಬ್ಬಂದಿಗಳ ನಿಯೋಜನೆಯಲ್ಲಿ ಜಾತಿ ತಾರತಮ್ಯ ನಡೆಯುತ್ತಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿದ್ದು, ಸಂಚಲನ ಮೂಡಿಸಿದೆ
ಸಿಟಿ ಫಾರ್ಮ್ ಸಮೀಪವಿರುವ ಘಟಕದಲ್ಲಿ ಹಠಾತ್ತನೆ ಬೆಂಕಿ ಕಾಣಿಸಿಕೊಂಡಿದೆ. ಈ ಅವಘಡದಲ್ಲಿ ಘಟಕಕ್ಕೆ ಹೊಸದಾಗಿ ತರಲಾಗಿದ್ದ Plastic Baling Machine (ಪ್ಲಾಸ್ಟಿಕ್ ಒತ್ತಿ ಕಟ್ಟು ಮಾಡುವ ಯಂತ್ರ) ಹಾಗೂ Incinerator (ತ್ಯಾಜ್ಯ ಸುಡುವ ಯಂತ್ರ) ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿವೆ.
ಘಟನೆ ನಂತರ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿಗಳು ಬೆಂಕಿ ಆರಿಸುವ ಮೂಲಕ ದೊಡ್ಡ ಪ್ರಮಾಣದ ಹಾನಿಯನ್ನು ತಡೆಗಟ್ಟಿ ದ್ದಾರೆ.
ಆರಂಭದಲ್ಲಿ ಯಾರೋ ಕಿಡಿಗೇಡಿಗಳು ಬೆಂಕಿ ಹಚ್ಚಿರಬಹುದು ಎಂಬ ಶಂಕೆ ವ್ಯಕ್ತವಾಗಿತ್ತು. ಕಚೇರಿ ಸಿಬ್ಬಂದಿಗಳು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಘಟನಾ ಸ್ಥಳಕ್ಕೆ ಯಾರೂ ಬಂದಿರುವುದು ಕಂಡುಬಂದಿಲ್ಲ. ಹೀಗಾಗಿ, ಮೇಲ್ನೋಟಕ್ಕೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದಲೇ ಈ ಅನಾಹುತ ಸಂಭವಿಸಿರಬಹುದು ಎಂದು ಪಟ್ಟಣ ಪಂಚಾಯತ ಸಿಬ್ಬಂದಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ.
ಪಟ್ಟಣ ಪಂಚಾಯಿತಿಯಲ್ಲಿ ಜಾತಿ ತಾರತಮ್ಯದ ಆರೋಪ: ಒಂದೆಡೆ ಅಗ್ನಿ ಅವಘಡ ಸಂಭವಿಸಿದ್ದರೆ, ಇನ್ನೊಂದೆಡೆ ಮುಂಡಗೋಡ ಪಟ್ಟಣ ಪಂಚಾಯಿತಿಯ ಆಡಳಿತ ವೈಖರಿಯ ವಿರುದ್ಧ ದಲಿತ ಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.
ಕಸ ವಿಲೇವಾರಿ ಘಟಕ ಮತ್ತು ಪೌರಕಾರ್ಮಿಕ ಕೆಲಸಕ್ಕೆಂದು ನೇಮಕವಾದ ಸಿಬ್ಬಂದಿಗಳ ಬಳಕೆಯಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂಬ ದೂರುಗಳು ಕೇಳಿಬರುತ್ತಿವೆ. ತ್ಯಾಜ್ಯ ವಿಲೇವಾರಿ ಮತ್ತು ಪಟ್ಟಣದ ಸ್ವಚ್ಛತಾ ಕಾರ್ಯಕ್ಕೆ ಕೇವಲ ಪರಿಶಿಷ್ಟ ಜಾತಿಯ (SC) ಸಿಬ್ಬಂದಿಗಳನ್ನು ಮಾತ್ರ ಸೀಮಿತಗೊಳಿಸಲಾಗಿದೆ ಎಂಬ ಆರೋಪವಿದೆ.
ಈ ಸುದ್ದಿ ಓದಿದ್ದೀರಾ? ಶಿರಸಿ | ಕೆಡಿಸಿಸಿ ಬ್ಯಾಂಕ್ ಚುನಾವಣೆ: ಸಿದ್ದಾಪುರದಲ್ಲಿ ರಾಘವೇಂದ್ರ ಶಾಸ್ತ್ರಿಗೆ ಜಯ; ಹೆಬ್ಬಾರ್ ಬಣ ಮೇಲುಗೈ
ಕಸ ವಿಲೇವಾರಿ ಘಟಕಕ್ಕೆ ಕೆಲಸಕ್ಕೆಂದು ನೇಮಕಗೊಂಡಿರುವ ಮೇಲ್ಜಾತಿಗೆ ಸೇರಿದ ಸಿಬ್ಬಂದಿಗಳನ್ನು ನಿಯಮ ಬಾಹಿರವಾಗಿ ಪಟ್ಟಣ ಪಂಚಾಯಿತಿ ಕಚೇರಿಯ ಆರಾಮದಾಯಕ ಕೆಲಸಗಳಿಗೆ ಬಳಸಿಕೊಳ್ಳಲಾಗುತ್ತಿದೆ ಎಂದು ಸಂಘಟನೆಗಳು ದೂರಿದ್ದಾರೆ.
“ಸಮಾಜದಲ್ಲಿ ಸಮಾನತೆ ಇರಬೇಕಾದ ಕಾಲದಲ್ಲಿ, ಸರ್ಕಾರಿ ಸಂಸ್ಥೆಯಲ್ಲೇ ಇಂತಹ ಜಾತಿ ಆಧಾರಿತ ಕೆಲಸದ ಹಂಚಿಕೆ ನಡೆಯುತ್ತಿರುವುದು ಖಂಡನೀಯ. ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳು ಹಾಗೂ ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ತಕ್ಷಣ ಈ ಬಗ್ಗೆ ಗಮನಹರಿಸಿ, ಈ ತಾರತಮ್ಯವನ್ನು ಸರಿಪಡಿಸಬೇಕು,” ಎಂದು ದಲಿತ ಸಂಘಟನೆ ಮುಖಂಡರಾದ ಬಸವರಾಜ ಹಳ್ಳಮ್ಮನ್ನವರ ಅವರು ಒತ್ತಾಯಿಸಿದ್ದಾರೆ.
ಈ ಅಗ್ನಿ ಅವಘಡದ ನಷ್ಟದ ಅಂದಾಜು ಮತ್ತು ತಾರತಮ್ಯದ ಆರೋಪಗಳ ಕುರಿತು ಪಟ್ಟಣ ಪಂಚಾಯಿತಿ ಆಡಳಿತವು ಯಾವ ಕ್ರಮ ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.





