ಮುಂಡಗೋಡ ಪಟ್ಟಣದ ಕಿಲ್ಲೆ ಓಣಿಯಲ್ಲಿ ಇಂದು ಮುಂಜಾನೆ ನಡೆದ ಅಗ್ನಿ ಅವಘಡದಿಂದ ವುಡ್ ಫರ್ನಿಚರ್ ಅಂಗಡಿ ಸಂಪೂರ್ಣ ಸುಟ್ಟು ಅಪಾರ ಪ್ರಮಾಣದ ಹಾನಿಯಾಗಿರುವ ವಿಷಯ ತಿಳಿಯುತ್ತಿದ್ದಂತೆಯೇ ಯಲ್ಲಾಪುರ-ಮುಂಡಗೋಡ ಕ್ಷೇತ್ರದ ಶಾಸಕರಾದ ಶಿವರಾಮ ಹೆಬ್ಬಾರ್ ಅವರು ಸ್ಥಳಕ್ಕೆ ಭೇಟಿ ನೀಡಿ ಘಟನೆಯ ಭೀಕರತೆಯ ಬಗ್ಗೆ ಮಾಹಿತಿ ತಿಳಿದು ಪರಿಸ್ಥಿತಿಯನ್ನು ಪರಿಶೀಲಿಸಿದರು.
ಶಾಸಕರು ಹಾನಿಗೊಳಗಾದ ಘಟಕದ ಭಾಗಗಳನ್ನು ಅವಲೋಕಿಸಿ, ಮಾಲಿಕರಿಗೆ ಧೈರ್ಯ ತುಂಬಿದರು. ಸರ್ಕಾರದಿಂದ ಸೂಕ್ತ ಪರಿಹಾರವನ್ನು ಶೀಘ್ರದಲ್ಲಿ ಒದಗಿಸುವ ಭರವಸೆಯನ್ನು ಈ ಸಂದರ್ಭದಲ್ಲಿ ನೀಡಿದರು
ಘಟನೆ ವಿವರ: ಮುಂಡಗೋಡ ಪಟ್ಟಣದ ಕಿಲ್ಲೆ ಓಣಿಯಲ್ಲಿರುವ ವುಡ್ ಫರ್ನಿಚರ್ ತಯಾರಿಕಾ ಘಟಕವೊಂದರಲ್ಲಿ ಇಂದು (ಭಾನುವಾರ) ಮುಂಜಾನೆ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಸುಮಾರು 50 ಲಕ್ಷ ರೂ. ಮೌಲ್ಯದ ಆಸ್ತಿಪಾಸ್ತಿ ನಾಶವಾಗಿದೆ ಎಂದು ಅಂದಾಜಿಸಲಾಗಿದೆ. ಈ ಅಗ್ನಿ ದುರಂತದಲ್ಲಿ ಪೀಠೋಪಕರಣಗಳ ಮಳಿಗೆ ಸಂಪೂರ್ಣವಾಗಿ ಸುಟ್ಟು ಭಸ್ಮ ವಾಗಿತ್ತು.
ಮಾಹಿತಿಯಂತೆ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡ ಪರಿಣಾಮ ಅಪಾರ ಪ್ರಮಾಣದ ಬೆಲೆಬಾಳುವ ಕಟ್ಟಿಗೆ ತುಂಡುಗಳು, ತಯಾರಿಸಿದ ಪೀಠೋಪಕರಣಗಳು ಹಾಗೂ ಒಂದು ಕಾರು ಬೆಂಕಿಗಾಹುತಿಯಾಗಿವೆ. ಘಟನೆ ಕಿಲ್ಲೆ ಓಣಿಯ ಖಾದರ್ ಲಿಂಗ ದೇವಸ್ಥಾನ ಬಳಿ ನಡೆದಿದೆ.
ಕಿಲ್ಲೆ ಓಣಿಯಲ್ಲಿ ಮುಂಜಾನೆ ಹೊತ್ತಿದ ಈ ಬೆಂಕಿ ಅಕ್ಕಪಕ್ಕದ ಮಳಿಗೆಗಳಿಗೂ ವ್ಯಾಪಿಸಿದೆ. ಯೂನಸ್ ಹೊಸಕೊಪ್ಪ ಅವರಿಗೆ ಸೇರಿದ ಪೀಠೋಪಕರಣದ ಮಳಿಗೆ. ಅಯಾನ್ ಹಾನಗಲ್ ಅವರಿಗೆ ಸೇರಿದ ಹಾರ್ಡ್‌ವೇರ್ ಮಳಿಗೆ. ಈ ಎರಡೂ ಮಳಿಗೆಗಳಿಗೆ ದೊಡ್ಡ ಪ್ರಮಾಣದಲ್ಲಿ ಬೆಂಕಿ ತಗಲಿ ಭಾರೀ ಹಾನಿ ಸಂಭವಿಸಿತ್ತು.
ಈ ಸುದ್ದಿ ಓದಿದ್ದೀರಾ? ಕಾರವಾರ | ಮಾದಕ ವಸ್ತು ನಿಷೇಧಿಸಿದ್ದಕ್ಕೆ ಪ್ರತೀಕಾರ: ಜೈಲರ್ ಸೇರಿ 3 ಸಿಬ್ಬಂದಿ ಮೇಲೆ ರೌಡಿಗಳ ಮಾರಣಾಂತಿಕ ಹಲ್ಲೆ!
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸಿದರು. ಇದರಿಂದಾಗಿ ಬೆಂಕಿ ಮತ್ತಷ್ಟು ಪ್ರದೇಶಗಳಿಗೆ ಹರಡುವುದು ತಪ್ಪಿದ್ದು, ದೊಡ್ಡ ಪ್ರಮಾಣದ ಅನಾಹುತವನ್ನು ಅಗ್ನಿಶಾಮಕ ದಳದ ಸಿಬ್ಬಂದಿಗಳು ತಡೆದಿದ್ದಾರೆ.
ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಶಾಸಕರಾದ ಶಿವರಾಮ ಹೆಬ್ಬಾರ್ ಅವರು ಭೇಟಿ ನೀಡಿದ್ದಾರೆ ಈ ಸಂದರ್ಭದಲ್ಲಿ ತಹಶೀಲ್ದಾರ್ ಶಂಕರ ಗೌಡಿ, ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೃಷ್ಣ ಹಿರೇಹಳ್ಳಿ, ಉಪಾಧ್ಯಕ್ಷರಾದ ಮಹಮ್ಮದ್ ರಜಾ, ಗೌಸ್ ಮಕಾನದಾರ್, ರಫೀಕ ಇನಾಮದಾರ್, ಶಾರದಾ ರಾಠೋಡ ಇತರ ಅಧಿಕಾರಿಗಳು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.





