ಮುಂಡಗೋಡ: ದಲಿತ ಯುವಕನನ್ನು ಪ್ರೀತಿಸಿ ಮದುವೆ ಆದಳು ಎಂಬ ಏಕೈಕ ಕಾರಣಕ್ಕೆ ಸ್ವಂತ ಮಗಳನ್ನೇ ಬಲಿಪಡೆದ ಹುಬ್ಬಳ್ಳಿಯ ಮರ್ಯಾದಾ ಹತ್ಯೆ ಪ್ರಕರಣವು ಮಾನವೀಯ ಕುಲಕ್ಕೇ ಅಂಟಿದ ಕಪ್ಪುಚುಕ್ಕೆಯಾಗಿದೆ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ಧ್ವನಿ, ಕಾದ್ರೊಳ್ಳಿ ಬಣ) ತೀವ್ರವಾಗಿ ಖಂಡಿಸಿದೆ.

ಈ ಘಟನೆಯ ಕುರಿತು ಆಕ್ರೋಶ ವ್ಯಕ್ತಪಡಿಸಿದ ಸಮಿತಿಯ ಉತ್ತರ ಕನ್ನಡ ಜಿಲ್ಲಾಧ್ಯಕ್ಷ ಬಸವರಾಜ ಸಂಗಮೇಶ್ವರ ಅವರು, “ಅಂತರ್ಜಾತಿ ವಿವಾಹವಾದ ಗರ್ಭಿಣಿ ಮಗಳನ್ನು ಹತ್ಯೆ ಮಾಡಿದ ತಂದೆಯ ಕೃತ್ಯ ಅಕ್ಷಮ್ಯ. ಜಾತಿ ವ್ಯವಸ್ಥೆಯ ಈ ವಿಷಜಂತುಗಳು ಸಮಾಜದ ಸ್ವಾಸ್ಥ್ಯ ಕೆಡಿಸುತ್ತಿದ್ದಾರೆ. ಗಡಿಯಾಚೆಗಿನ ಉಗ್ರಗಾಮಿಗಳಿಗೂ ಮತ್ತು ಜಾತಿ ಹೆಸರಿನಲ್ಲಿ ರಕ್ತ ಹರಿಸುವ ಈ ‘ಸ್ಥಳೀಯ ಉಗ್ರರಿಗೂ’ ಯಾವುದೇ ವ್ಯತ್ಯಾಸವಿಲ್ಲ.
ಇಂತಹ ಮನಸ್ಥಿತಿಯವರು ದೇಶದ ಪ್ರಗತಿಗೆ ಮಾರಕವಾಗಿದ್ದಾರೆ,” ಎಂದು ಕಿಡಿಕಾರಿದರು. “ಹುಟ್ಟಿಸಿದ ತಂದೆಗೆ ಜೀವ ಕೊಡುವ ಹಕ್ಕಿದೆಯೇ ಹೊರತು ಜೀವ ತೆಗೆಯುವ ಅಧಿಕಾರವಿಲ್ಲ. ಇಂತಹ ನೀಚ ಕೃತ್ಯ ಎಸಗಿದವರಿಗೆ ಕೇವಲ ಜೈಲು ಶಿಕ್ಷೆಯಾದರೆ ಸಾಲದು, ಸರ್ಕಾರವು ವಿಶೇಷ ಆಸಕ್ತಿ ವಹಿಸಿ ಆರೋಪಿಗಳಿಗೆ ‘ಮರಣದಂಡನೆ’ ಶಿಕ್ಷೆಯಾಗುವಂತೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಸಿದ್ದಾಪುರ | ರೈತರ ಸಂಕಷ್ಟದ ನಡುವೆ ಕೋಟಿ ವೆಚ್ಚದ ಉತ್ಸವ ಬೇಕಿತ್ತೇ?; ಜಿಲ್ಲಾಡಳಿತದ ವಿರುದ್ಧ ಶಾಸಕ ಭೀಮಣ್ಣ ನಾಯ್ಕ ಆಕ್ರೋಶ
ಅಟ್ರಾಸಿಟಿ ಕಾಯ್ದೆ ಹಾಗೂ ಕಠಿಣ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಿ, ತಕ್ಷಣವೇ ನ್ಯಾಯ ಒದಗಿಸಬೇಕು. ಅಷ್ಟೇ ಅಲ್ಲದೆ, ಪ್ರೀತಿಪಾತ್ರರನ್ನು ಕಳೆದುಕೊಂಡು ಕಂಗಾಲಾಗಿರುವ ಸಂತ್ರಸ್ತ ಕುಟುಂಬಕ್ಕೆ ಸರ್ಕಾರ 1 ಕೋಟಿ ರೂ.ಗಳ ಆರ್ಥಿಕ ನೆರವು ನೀಡಬೇಕು. ಒಂದು ವೇಳೆ ಈ ಪ್ರಕರಣದಲ್ಲಿ ನ್ಯಾಯ ವಿಳಂಬವಾದರೆ ಜಿಲ್ಲೆಯಾದ್ಯಂತ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು,” ಎಂದು ಬಸವರಾಜ ಸಂಗಮೇಶ್ವರ ಅವರು ಹೇಳಿದರು.





