ಮುಂಡಗೋಡ ತಾಲ್ಲೂಕಿನ ಸಾಲಗಾಂವ ಗ್ರಾಮದ ಸರ್ವೆ ನಂಬರ್ 217ರಲ್ಲಿರುವ 4.38 ಎಕರೆ ಜಮೀನು ನಮ್ಮ ತಂದೆಯವರು ಖರೀದಿ ಮಾಡಿದ್ದರು. ಈಗ ಯಾರೋ ಬಂದು ಅದು ನಮ್ಮ ಜಮೀನು; ಅದಕ್ಕೆ ನಾವು ವಾರಸುದಾರರು ಎಂದು ನಮ್ಮ ಮೇಲೆ ಜಗಳ ಮಾಡುತ್ತಿದ್ದಾರೆ. ನಮ್ಮ ಜಮೀನಿಗೆ ನಾವೇ ಹೋಗಲು ಸಾಧ್ಯವಾಗುತ್ತಿಲ್ಲ. ಕಾಲಿಟ್ಟರೆ ಕಳ್ಳತನದ ಕೇಸ್ ದಾಖಲಿಸುತ್ತಿದ್ದಾರೆ ಎಂದು ಗ್ರಾಮದ ದಲಿತ ಮಹಿಳೆಯರು ಆರೋಪಿಸಿದ್ದಾರೆ.
ಈ ದಿನ ಮಾಧ್ಯಮದ ಮೂಲಕ ಮನವಿ ಮಾಡಿರುವ ದಲಿತ ಮಹಿಳೆಯರಾದ ನೀಲವ್ವ ಫಕ್ಕೀರಸ್ವಾಮಿ ಹರಿಜನ, ಕುಸಮಾ ಫಕ್ಕೀರಸ್ವಾಮಿ ಹರಿಜನ ಹಾಗೂ ರೇಣುಕಾ ನಾಗಪ್ಪ ಹರಿಜನ ಇವರುಗಳು “ನಮಗೆ ನ್ಯಾಯ ಬೇಕು. ನಾವು ಸತ್ತರೂ ಇದ್ದರೂ ನಮ್ಮ ಹೊಲದಲ್ಲಿಯೇ. ಕೋರ್ಟ್ ತೀರ್ಪು ಬರುವ ತನಕವಾದರೂ ನಮ್ಮ ಹೊಲಕ್ಕೆ ನಮಗೆ ಹೋಗಲು ಅವಕಾಶ ನೀಡಬೇಕು. ನಮ್ಮ ತಂದೆ ಖರೀದಿ ಮಾಡಿದ ಜಮೀನಿನಲ್ಲಿ ನಾವು ಕಾಲು ಇಟ್ಟರೆ ಕಳ್ಳತನದ ಕೇಸ್ ದಾಖಲಿಸುತ್ತಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು”
“ತಂದೆಯವರು ಸದರಿ ಜಮೀನನ್ನು ಖರೀದಿ ಮಾಡಲು ನಮ್ಮ ಹತ್ತಿರ ಇದ್ದ ಜಮೀನನ್ನು ಮಾರಿ, ಕೈ ಸಾಲ ಪಡೆದು, ಮನೆಯಲ್ಲಿದ್ದ ಬಂಗಾರ ಮಾರಿ 20 ವರ್ಷಗಳ ಹಿಂದೆಯೆ 3 ಲಕ್ಷ ರೂಪಾಯಿ ಹಣ ಹೊಂದಿಸಿ ಹೊಲದ ಮಾಲೀಕ ಚಂದ್ರಶೇಖರ ಪೆದ್ದಣ್ಣ ಭೋವಿ ಅವರಿಗೆ ನೀಡಲಾಗಿತ್ತು. ಆಗಲೇ ಸಬ್ ರಿಜಿಸ್ಟ್ರಾರ್ ಆಫೀಸ್ ನಲ್ಲಿ ನೋಂದಣಿ ಮಾಡಿಕೊಂಡು ಮಾರುವುದಕ್ಕೆ ತೆಗೆದುಕೊಂಡಿದ್ದರು. ಈಗ, ʼಅದೆಲ್ಲಾ ಸುಳ್ಳು, ಇದು ನಮ್ಮ ಜಮೀನುʼ ಎಂದು ಹೇಳಿಕೊಂಡು ವರ್ಷಕ್ಕೆ ಒಬ್ಬರಂತೆ ಬಂದು ತೊಂದರೆ ಕೊಡುತ್ತಿದ್ದಾರೆ. ತಂದೆ ಇದ್ದ ಸಮಯದಲ್ಲಿ ಯಾವ ತೊಂದರೆಯೂ ಇರಲಿಲ್ಲ. ಅವರು ತೀರಿಕೊಂಡ ನಂತರ ಯಾರೋ ಬಂದು ನಮ್ಮ ಜಮೀನು ಎನ್ನುತ್ತಿದ್ದಾರೆ. ಗಂಡು ದಿಕ್ಕಿಲ್ಲ ಎಂದು ತಿಳಿದು ನಮ್ಮ ಮೇಲೆ ಈ ರೀತಿ ದೌರ್ಜನ್ಯ ನಡೆಸುತ್ತಿದ್ದಾರೆ” ಎಂದು ಆರೋಪಿಸಿದರು.
ಘಟನೆಯ ವಿವರ: ಮೃತ ನಾಗಪ್ಪ ಫಕ್ಕೀರಪ್ಪ ಹರಿಜನ ಎಂಬುವವರು 2008ರಲ್ಲಿ ಅವರ ಸ್ನೇಹಿತ ಚಂದ್ರಶೇಖರ ಪೆದ್ದಣ್ಣ ಭೋವಿ ಎಂಬುವವರಿಂದ ಮುಂಡಗೋಡ ತಾಲೂಕಿನ ಸಾಲಗಾಂವ ಗ್ರಾಮದ ಸರ್ವೆ ನಂಬರ 217ರ 4.38 ಎಕರೆ ಹೊಲವನ್ನು ಖರೀದಿ ಮಾಡಿಕೊಂಡಿದ್ದರು. ನಾಗಪ್ಪ ಅವರ ಮಗ ಕೂಡ ಅಕಾಲಿಕ ಮರಣ ಹೊಂದಿದಕ್ಕೆ ಜಮೀನನ್ನು ಅವರು ಸಬ್ ರಿಜಿಸ್ಟ್ರಾರ್ ಆಫೀಸ್ ನಲ್ಲಿ ಜನರಲ್ ಪವರ್ ಆಫ್ ಅಟಾರ್ನಿ ಮಾಡಿಸಿಕೊಂಡಿರುತ್ತಾರೆ. 2018ರಲ್ಲಿ ನಾಗಪ್ಪ ಅವರು ಸಾವನ್ನಪ್ಪಿದ ನಂತರ, ನಾಗಪ್ಪ ಅವರ ಹೆಣ್ಣು ಮಕ್ಕಳು ಮತ್ತು ಅವರ ಸೊಸೆ ಆ ಜಮೀನಿನಲ್ಲಿ ಉಳಿಮೆ ಮಾಡಿ ಅದರಿಂದ ಬಂದ ಆದಾಯದಿಂದ ಜೀವನ ನಡೆಸಿಕೊಂಡು ಬರುತ್ತಿರುತ್ತಾರೆ.
ಆದರೆ, ಕಳೆದ ಮೂರ್ನಾಲ್ಕು ವರ್ಷಗಳಿಂದ “ನಾವು ಮೃತ ಚಂದ್ರಶೇಖರ ಪೆದ್ದಣ್ಣ ಭೋವಿ ಅವರು ವಾರಸುದಾರರುʼ ಎಂದು ಹೇಳಿಕೊಂಡು ಹಾವೇರಿ ಮೂಲದ ಶಾಖಾಂಬರಿ ಅವರು ಬಂದಿರುತ್ತಾರೆ. ಈ ಜಮೀನು ನಮ್ಮದು, ನಮ್ಮ ಜಮೀನು ಬಿಟ್ಟುಕೊಡಿ ಎಂದು ಜಗಳವಾಡುತ್ತಿದ್ದರು. ಈ ಜಗಳ ಕೋರ್ಟ್ ಮೆಟ್ಟಿಲೇರಿದಾಗ ವಾರಸುದಾರರು ಅಂತ ಹೇಳಿಕೊಂಡು ಬಂದವರು ಮತ್ತೆ ಬರಲಿಲ್ಲ. ಆದರೆ ಕೋರ್ಟಿಗೆ ಸರಿಯಾದ ದಾಖಲೆ ಕೊಡದೆ ಇದ್ದದ್ದರಿಂದ ಮತ್ತು ಎಲ್ಲಾ ದಾಖಲೆಗಳು ನಮ್ಮ ಪರವಾಗಿ ಇರುವುದನ್ನು ನೋಡಿ ಅವರು ಕೋರ್ಟಿಗೆ ಹಾಜರಾಗದೆ ಹೋದರು” ಎಂದು ನಾಗಪ್ಪ ಹರಿಜನ ಅವರ ಮಗಳು ಹೇಳಿದರು.
“ನಂತರ ಈಗ ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಚಿನ್ನಮ್ಮ ಬಸಪ್ಪ ಮಡಿವಾಳರ ಅವರು ಬಂದು ನಾನು ಅವರ ಮಗಳು ನಾನು ನಿಜವಾದ ವಾರಸುದಾರಳು ಎಂದು ಹೇಳಿಕೊಂಡು ಬಂದಿದ್ದಾರೆ. ಇದು ಕೂಡ ಕೋರ್ಟ್ ಮೆಟ್ಟಿಲೇರಿ ವಿಚಾರಣೆ ಹಂತದಲ್ಲಿದೆ. ಆದರೆ ಚಿನ್ನಮ್ಮ ಮತ್ತು ಅವರ ಪತಿಯು ಕೋರ್ಟ್ ತೀರ್ಪು ಬರುವುದಕ್ಕೂ ಮುಂಚೆಯೇ ನಮ್ಮ ಮೇಲೆ ದೌರ್ಜನ್ಯ ಮಾಡುತ್ತಿದ್ದಾರೆ. ರಾತ್ರಿ ಸಮಯದಲ್ಲಿ ಮಹಿಳೆಯರು ಹೊಲದಲ್ಲಿ ಹಾಕಿರುವ ಬೆಳೆಗಳ ಸಂರಕ್ಷಣೆ ಮಾಡಲು ಜಮೀನಿನಲ್ಲಿ ಮಲಗಿದಾಗ ಅವರ ಸುತ್ತಲೂ ಬಂದು ಮೊಬೈಲ್ ಚಿತ್ರೀಕರಣ ಮಾಡುತ್ತಾರೆ ಎಂದು ಆರೋಪಿಸಿದರು. ಹೊಲದಲ್ಲಿ ಹೆಂಗಸರು ಕೆಲಸ ಮಾಡುತ್ತಾರೆ ಎಂದು ತಿಳಿದಿದ್ದರೂ ಅವರು ಚಲನವಲನ ಗಮನಿಸಲು ಸಿಸಿಟಿವಿ ಕ್ಯಾಮರಾ ಅಳವಡಿಸಿದ್ದಾರೆ ಇದರಿಂದ ನಮ್ಮ ಖಾಸಗಿತನಕ್ಕೆ ಧಕ್ಕೆ ಉಂಟಾಗುತ್ತಿದೆ” ಎಂದು ತಿಳಿಸಿದರು.
“ಬಿತ್ತಿರುವ ಬೆಳೆಯನ್ನು ಕಟಾವು ಮಾಡಲು ಇಲ್ಲವೇ ಕಾಯಲು ಹೊಲದತ್ತ ಹೋದರೆ ಕಳ್ಳತನ ಮಾಡಲು ಬಂದಿದ್ದಾರೆ ಎಂದು ಆರೋಪಿಸಿ ಸುಳ್ಳು FIR ಹಾಕುವುದು, ಜಮೀನಿನಲ್ಲಿ ಕಟ್ಟಿದ ಗುಡಿಸಲನ್ನು ಕೆಡವುವಾಗ ನಮ್ಮ ಮಕ್ಕಳು ಮೊಬೈಲ್ ನಲ್ಲಿ ಚಿತ್ರೀಕರಣ ಮಾಡುವಾಗ ಹೆಂಗಸರ ವಿಡಿಯೋ ತೆಗೆಯುತ್ತಿಯಾ ಎಂದು ಅವರ ಮೇಲೂ ಠಾಣೆಯಲ್ಲಿ ದೂರು ದಾಖಲಿಸುವುದು ಮಾಡುತ್ತಿದ್ದಾರೆ. ಇದಕ್ಕೆ ಹೆದರಿ ಶಾಲೆ ಕಲಿಯುವ ನಮ್ಮ ಮಕ್ಕಳು ಹೆದರಿ ಜಮೀನಿಗೆ ಕಾಲಿಡದೆ ಮಾನಸಿಕವಾಗಿ ಕುಗ್ಗಿ ಹೋಗಿದ್ದಾರೆ” ಎಂದು ರೇಣುಕಾ ಅವರು ತಮ್ಮ ಅಳಲನ್ನು ತೋಡಿಕೊಂಡರು.
ಇದನ್ನೂ ಓದಿ: ಉತ್ತರ ಕನ್ನಡ | ಜಿಲ್ಲಾಡಳಿತ ವತಿಯಿಂದ ಆದಿವಾಸಿ ನಾಯಕ ಬಿರ್ಸಾ ಮುಂಡಾ ಜಯಂತಿ ಆಚರಣೆ
ಮೃತ ನಾಗಪ್ಪ ಹರಿಜನ ಅವರ ಮಕ್ಕಳು ಮತ್ತು ಸೊಸೆ ಹೇಳುವಂತೆ, “ಕಳೆದ 20 ವರ್ಷಗಳಿಂದ ಇಲ್ಲದ ವಾರಸುದಾರರು, ಈಗ ಏಕಾಏಕಿ ಬಂದು ಮೃತ ಚಂದ್ರಶೇಖರ ಅವರು ನಮ್ಮ ತಂದೆ. ಅವರ ಜಮೀನು ನಮಗೆ ಸೇರಬೇಕು ಅಂತ ಹೇಳ್ತಾರೆ. ನಮ್ಮ ಅಪ್ಪ ನಮ್ಮ ಸ್ವಂತ ಜಮೀನು ಮಾರಿ ಬಡ್ಡಿ ಸಾಲ ತೆಗೆದು 20 ವರ್ಷಗಳ ಹಿಂದೆನ 3 ಲಕ್ಷ ರೂಪಾಯಿ ಹಣ ನೀಡಿರುವುದಕ್ಕೆ ಬೆಲೆ ಇಲ್ಲವೇ? ಮೃತ ಚಂದ್ರಶೇಖರ ಪೆದ್ದಣ್ಣ ಭೋವಿ ಅವರು ಸಬ್ ರಿಜಿಸ್ಟ್ರಾರ್ ಆಫೀಸ್ನಲ್ಲಿ ನಿಂತು ನೊಂದಣಿ ಮಾಡಿ ಕೊಟ್ಟಿದ್ದಾರೆ. ಅವರ ಹೆಂಡತಿಗೆ ಆರಾಮ ಇಲ್ಲದೆ ಇದ್ದಾಗ 10-20 ಸಾವಿರದಷ್ಟು ಉಪಕಾರ ಮಾಡಿದರು ನಮಗೆ ಯಾಕಿಷ್ಟು ತೊಂದರೆ ಕೊಡುತ್ತಿದ್ದಾರೆಂದು ತಿಳಿಯುತ್ತಿಲ್ಲ” ಎಂದರು.
“ಬೆಳೆದ ಬೆಳೆಯನ್ನು ಕಟಾವು ಮಾಡಕ, ಇಲ್ಲ ಕಾಯಕ ಹೋದ್ರ ನಮ್ಮ ಮ್ಯಾಗಾ ಕಳ್ಳತನ ಆರೋಪ ಮಾಡ್ತಾರಾ. ನಾವ ಬೆಳೆದ ಬೆಳೆನಾ ನಾವ ಹೆಂಗ ಕಳುವ ಮಾಡಕ ಬರ್ತೆತಿ? ಹೊಲ ಹಸನ ಮಾಡಬೇಕು ಅಂದ್ರ ಅಲ್ಲಿ ಇಲ್ಲಿ ಸಾಲ ತೆಗದಿರತ್ತಿವಿ ಅದನ್ನ ತೀರಸಬೇಕ ಅಂದ್ರ ಬೆಳೆನ ಮಾರಿ ತೀರಿಸಬೇಕು. ನಾವು ಖರ್ಚು ಮಾಡಿ ಬೆಳೆದ ಬೆಳೆನಾ ಕಟಾವು ಮಾಡಿದ್ರು ಕಳ್ಳತನ ಅಂತಾರ. ನಮ್ಮ ಮ್ಯಾಗಾ FIR ಮಾಡ್ಯಾರಾ, ಗಂಡು ದಿಕ್ಕು ಇಲ್ಲದ ನಮಗೆ ರಕ್ಷಣೆ ಕೊಡಲು ಯಾರೂ ಇಲ್ಲಾ ನಾವು ಕೀಳು ಜಾತಿ ಜನ ನಮಗೆ ವಿದ್ಯಾ ಬುದ್ಧಿ ಇಲ್ಲ, ನಮ್ಮ ಸಮಾಜದ ಮುಖಂಡರು ನಮ್ಮ ಸಹಾಯಕ್ಕೆ ಬಂದರೆ ಅವರ ಮೇಲೂ ಕಳ್ಳತನದ ಆರೋಪ ಮಾಡ್ತಾರಾ. ನಮ್ಮ ಅಪ್ಪ ನಮ್ಮ ಪಾಲಿಗೆ ಇದು ಒಂದು ಉಳಸ್ಯಾನ. ನಮಗ ನಮ್ಮ ಮಕ್ಕಳಿಗೆ ಈ ಜಮೀನು ಒಂದ ಆಸರ. ನಮಗ ಬೇರೆ ದುಡಿಮಿ ಗೊತ್ತಿಲ್ಲಾ. ನಮ್ಮ ಮಕ್ಕಳನ್ನ ಜೋಪಾನ ಮಾಡಾಕ ಆಗದ ಅವರನ್ನ ಹಾಸ್ಟೆಲ್ ಗೆ ಹಾಕೇವಿ. ಹೊಲದ ಕೇಸ್ ಕೋರ್ಟ್ ದಾಗ ಐತಿ. ಕೋರ್ಟ್ ಏನು ತೀರ್ಮಾನ ಕೊಟ್ಟರೂ ನಾವು ಅದಕ್ಕ ತಲಿ ಬಾಗ್ತೀವಿ. ಕೋರ್ಟ್ ತೀರ್ಪು ಬರೋ ತನಕ ಹೊಲದಾಗ ಉಳಿಮೆ ಮಾಡೋಕೆ ನಮಗ ಬಿಡ್ರಿ. ಯಾಕಂದ್ರ ಅದನ್ನ ಬಿಟ್ಟು ಬೇರೆ ದಾರಿಯಿಲ್ಲ. ಪೊಲೀಸ್ ಅವರು, ತಹಶೀಲ್ದಾರ್ ಸಾಹೇಬರು ಬಂದು ನಮಗೆ ದಾರಿ ತೊರಿಸಬೇಕು” ಎಂದು ಈ ದಿನ ಮಾಧ್ಯಮದ ಮೂಲಕ ಅಧಿಕಾರಿಗಳಲ್ಲಿ ಮನವಿ ಮಾಡಿದರು.





