ಮುಂಡಗೋಡ: ಸಂವಿಧಾನ ನಮಗೆ ನೀಡಿರುವ ಹಕ್ಕುಗಳನ್ನು ಅರಿತುಕೊಳ್ಳುವುದು ನಮ್ಮೆಲ್ಲರ ಮೊದಲ ಕರ್ತವ್ಯವಾಗಬೇಕು. ಮಾನವ ಹಕ್ಕುಗಳು ಹಾಗೂ ಮೂಲಭೂತ ಹಕ್ಕುಗಳ ಅರಿವಿನೊಂದಿಗೆ ನಮ್ಮ ಬದುಕನ್ನು ರೂಪಿಸಿಕೊಳ್ಳುವ ಪ್ರಯತ್ನ ಮಾಡಬೇಕು ಎಂದು ಸಿವಿಲ್ ನ್ಯಾಯಾಧೀಶರು ಹಾಗೂ ತಾಲೂಕು ಕಾನೂನು ಸೇವಾ ಸಮಿತಿಯ ಸದಸ್ಯ ಕಾರ್ಯದರ್ಶಿಗಳಾದ ಮಾನ್ಯ ಅಕ್ಷತಾ ಸಿ.ಆರ್ ಅವರು ಕರೆ ನೀಡಿದರು.
ಪಟ್ಟಣದ ನೆಹರು ನಗರದಲ್ಲಿರುವ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯದಲ್ಲಿ ಸಂವಿಧಾನ ಸಂರಕ್ಷಕರ ಪಡೆ, ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರ, ಸಾಧನಾ ಮಹಿಳಾ ಸಾಂತ್ವನ ಕೇಂದ್ರ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಮುಂಡಗೋಡ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ. ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ದಿನಾಚರಣೆ ಮತ್ತು ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಮಹಾಪರಿನಿಬ್ಬಾಣ ದಿನದ ಅಂಗವಾಗಿ ಯುವತಿಯರಿಗಾಗಿ ಏರ್ಪಡಿಸಿದ್ದ ‘ಪೋಕ್ಸೋ ಕಾಯ್ದೆ ಜಾಗೃತಿ ಹಾಗೂ ಸಂವಿಧಾನದ ಮಹತ್ವ’ ಕುರಿತ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಸಂವಿಧಾನದ ಪೀಠಿಕೆಯನ್ನು ಓದಿಸುವ ಮೂಲಕ ಡಾ. ಅಂಬೇಡ್ಕರ್ ಅವರನ್ನು ಸ್ಮರಿಸಲಾಯಿತು. ಇದೇ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ವಸತಿ ನಿಲಯದ ಮೇಲ್ವಿಚಾರಕರಾದ ಶ್ರೀಮತಿ ಶಿವಲೀಲಾ ಘಂಟಾಮಠ ಅವರು ಮಾನ್ಯ ನ್ಯಾಯಾಧೀಶರಿಗೆ ಸಂವಿಧಾನ ಪೀಠಿಕೆಯ ಫ್ರೇಮ್ ಅನ್ನು ಸಮರ್ಪಿಸಿದರು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಡಾ. ಇಸಬೆಲಾ ಝೇವಿಯರ್ ಅವರು ಸಂವಿಧಾನದ ಪೀಠಿಕೆಯನ್ನು ವಿವರಿಸಿ, “ಭಾರತವು ಸುಂದರ ಮನಸ್ಸುಗಳ, ವಿವಿಧ ಧರ್ಮ ಮತ್ತು ಜಾತಿಗಳ ವಿಭಿನ್ನತೆಯಲ್ಲಿ ಏಕತೆಯನ್ನು ಸಾರುವ ದೇಶವಾಗಿದೆ. ಈ ದೇಶಕ್ಕೆ ಸಂವಿಧಾನವೇ ಧರ್ಮ ಗ್ರಂಥವಿದ್ದಂತೆ. ಸಂವಿಧಾನದ ಆಶಯಗಳಿಂದಲೇ ನಾವೆಲ್ಲರೂ ಇಂದು ಒಂದಾಗಿ ಬದುಕುತ್ತಿದ್ದೇವೆ,” ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಸಾಪ ತಾಲೂಕು ಅಧ್ಯಕ್ಷ ವಸಂತ ಎಸ್. ಕೊಣಸಾಲಿ ಅವರು ಮಾತನಾಡಿ, “ಇತ್ತೀಚಿನ ದಿನಗಳಲ್ಲಿ ಸಂಸ್ಕಾರದ ಕೊರತೆ ಮತ್ತು ಮೊಬೈಲ್ ಹಾವಳಿಯಿಂದಾಗಿ ಯುವಜನತೆ ದಾರಿ ತಪ್ಪುತ್ತಿದೆ. ಅವಿಭಕ್ತ ಕುಟುಂಬಗಳ ಮಾನ್ಯತೆ ಕಡಿಮೆಯಾಗುತ್ತಿರುವುದು ಮತ್ತು ಕೌಟುಂಬಿಕ ಮೌಲ್ಯಗಳ ಕುಸಿತವು ಮಕ್ಕಳು ಬಾಲ್ಯದಲ್ಲೇ ದಾರಿ ತಪ್ಪಲು ಪ್ರಮುಖ ಕಾರಣವಾಗಿದೆ,” ಎಂದು ವಿಷಾದ ವ್ಯಕ್ತಪಡಿಸಿದರು.

ಸಾಧನಾ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯ ಹಾಗೂ ವಕೀಲರಾದ ಸುಜೀತ ಸದಾನಂದ ಅವರು ಮಾತನಾಡಿ, “ಪೋಕ್ಸೋ ಕಾಯ್ದೆಯು ಹೆಣ್ಣು ಮಕ್ಕಳಿಗೆ ರಕ್ಷಣೆ ನೀಡಿದರೆ, ತಪ್ಪು ಮಾಡಿದ ಪುರುಷರಿಗೆ ಕಠಿಣ ಶಿಕ್ಷೆ ವಿಧಿಸುತ್ತದೆ. ವಿದ್ಯಾರ್ಥಿಗಳು ಕಲಿಯುವ ವಯಸ್ಸಿನಲ್ಲಿ ಉತ್ತಮ ಶಿಕ್ಷಣ ಮತ್ತು ಸಂಸ್ಕಾರವನ್ನು ಮೈಗೂಡಿಸಿಕೊಳ್ಳಬೇಕು,” ಎಂದು ತಿಳಿಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಶ್ರೀಮತಿ ರೂಪಾ ಅಂಗಡಿ ಅವರು ಪೋಕ್ಸೋ ಕಾಯ್ದೆಯ ಸಾಧಕ-ಬಾಧಕಗಳು ಹಾಗೂ ಸವಾಲುಗಳ ಬಗ್ಗೆ ಸವಿಸ್ತಾರವಾಗಿ ಮಾಹಿತಿ ನೀಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಮತಿ ಸುಮಾ ಅವರು, ಮಹಿಳೆಯರು ಮನಸ್ಸು ಮಾಡಿದರೆ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಹೇಳಿದರು. ಸಾಧನಾ ಸಂಸ್ಥೆಯ ಮುಖ್ಯಸ್ಥ ಹಾಗೂ ಆದಿಜಾಂಭವ ಪ್ರೌಢಶಾಲೆ ಮುಖ್ಯೋಪಾಧ್ಯಾಯರಾದ ಎಸ್.ಡಿ. ಮುಡೆಣ್ಣವರ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಕಳೆದ ಮೂರು ದಶಕಗಳಿಂದ ಸಾಧನಾ ಸಂಸ್ಥೆಯು ಹಕ್ಕುಗಳ ರಕ್ಷಣೆಗಾಗಿ ಶ್ರಮಿಸುತ್ತಿದೆ ಎಂದರು. ಸಾಹಿತಿ ಹಾಗೂ ಶಿಕ್ಷಕ ರಮೇಶ ಪವಾರ್ ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ಅಕ್ಷತಾ ಬುದ್ನಿ ವಂದಿಸಿದರು.
ಈ ಸುದ್ದಿ ಓದಿದ್ದೀರಾ? ಮುಂಡಗೋಡ | ಅಗ್ನಿ ಅವಘಡ: ಅಂದಾಜು 50 ಲಕ್ಷ ರೂ. ನಷ್ಟ, ಘಟನಾ ಸ್ಥಳಕ್ಕೆ ಶಾಸಕ ಶಿವರಾಮ ಹೆಬ್ಬಾರ್ ಭೇಟಿ
ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಅಶೋಕ ಪವಾರ್, ಆದಿ ಜಾಂಬವ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಸ್. ಫಕೀರಪ್ಪ, ಕಸಾಪ ಸದಸ್ಯರು, ಎಲ್.ವಿ.ಕೆ ಸಂಸ್ಥೆಯ ಸಿಬ್ಬಂದಿಗಳು, ಸಂಗಪ್ಪ ಕೊಳೂರು, ಎಸ್.ಬಿ. ಹೂಗಾರ, ಎಸ್.ಕೆ. ಬೋರಕರ, ಎಚ್.ಎನ್. ತಪೇಲಿ, ಆನಂದ ಹೊಸೂರು, ಮಂಗಳಾ ಮೊರೆ, ವಿನಾಯಕ ಶೇಟ್, ಮಾಳಿ ಸರ್, ಗೌರಮ್ಮ ಕೊಳ್ಳಾನವರ, ಜ್ಯೋತಿ ಕೊರವರ ಸೇರಿದಂತೆ ವಸತಿ ನಿಲಯದ ವಿದ್ಯಾರ್ಥಿನಿಯರು ಮತ್ತು ಶಿಕ್ಷಕರು ಉಪಸ್ಥಿತರಿದ್ದರು.





