ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನಲ್ಲಿರುವ ಲೋಯೋಲ ವಿಕಾಸ ಕೇಂದ್ರ ಹಾಗೂ ಯುವರತ್ನ ಯುವ ಒಕ್ಕೂಟದ ಸಂಯುಕ್ತ ಆಶ್ರಯದಲ್ಲಿ ಯುವಕ-ಯುವತಿಯರಿಗಾಗಿ ‘ಯುವಸಂಗಮ – 2026’ ಎಂಬ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಎರಡು ದಿನಗಳ ಕಾಲ ನಡೆದ ಈ ಶಿಬಿರದಲ್ಲಿ ನಾಯಕತ್ವ ತರಬೇತಿ, ವ್ಯಕ್ತಿತ್ವ ವಿಕಸನ, ಕ್ರೀಡೆ ಹಾಗೂ ಮನರಂಜನಾ ಚಟುವಟಿಕೆಗಳ ಮೂಲಕ ಯುವಜನರಲ್ಲಿ ಜಾಗೃತಿ ಮೂಡಿಸಲಾಯಿತು.ಕಾರ್ಯಕ್ರಮವನ್ನು ಉದ್ಘಾಟಿಸಿದ ಜ್ಯೋತಿ ಸಮಾಜ ಸೇವಾ ಸಂಸ್ಥೆಯ ವಂದನೀಯ ಸಿ|| ಸೋನಿಯಾ ಡಿ’ಸೋಜಾ ಅವರು, ಗಿಡಕ್ಕೆ ನೀರುಣಿಸುವ ಮೂಲಕ ಚಾಲನೆ ನೀಡಿ ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಿದ್ದಿ ಸಮುದಾಯ ಅಭಿವೃದ್ಧಿ ಸಂಸ್ಥೆಯ ನಿರ್ದೇಶಕರಾದ ಫಾ. ಅಲ್ವಿನ್ ಡಿ’ಸೋಜಾ ಅವರು ಮಾತನಾಡಿ, ಯುವಶಕ್ತಿ ದೇಶದ ದೊಡ್ಡ ಆಸ್ತಿ. ಯುವಜನರು ಇಂತಹ ತರಬೇತಿಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಜ್ಞಾನ ವೃದ್ಧಿಸಿಕೊಳ್ಳಬೇಕು.
ಆ ಮೂಲಕ ಸಮಾಜದಲ್ಲಿ ಧ್ವನಿ ಎತ್ತುವಂತಾಗಬೇಕು ಮತ್ತು ದೇಶದ ಕೀರ್ತಿ ಹೆಚ್ಚಿಸುವ ಕೆಲಸ ಮಾಡಬೇಕು ಎಂದು ಕರೆ ನೀಡಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಲೋಯೋಲ ವಸತಿ ನಿಲಯಗಳ ಮೇಲ್ವಿಚಾರಕ ಬ್ರದರ್ ಕಿರಣ್ ಬ್ರಾಂಕೋ ಅವರು ಮಾತನಾಡಿ, ಕೆರೆಯಲ್ಲಿ ಎಸೆದ ಕಲ್ಲು ಹೇಗೆ ಅಲೆಗಳನ್ನು ಸೃಷ್ಟಿಸಿ ದಡ ಸೇರುತ್ತದೆಯೋ, ಹಾಗೆಯೇ ಯುವಕರು ಇಲ್ಲಿ ಕಲಿತ ವಿಷಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಉನ್ನತ ಗುರಿ ತಲುಪಬೇಕು ಎಂದರು.
ಧಾರವಾಡದ ವಿದ್ಯಾನಿಕೇತನದ ಫಾ. ಧೀರಜ್ ಡಿ’ಸೋಜಾ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡು, ರಸಪ್ರಶ್ನೆ ಹಾಗೂ ವಿವಿಧ ಚಟುವಟಿಕೆಗಳ ಮೂಲಕ ನಾಯಕತ್ವದ ಗುಣಗಳ ಬಗ್ಗೆ ಮನವರಿಕೆ ಮಾಡಿಕೊಟ್ಟರು. ಏಕತೆ, ಪ್ರಾಮಾಣಿಕತೆ ಮತ್ತು ಸಾಮಾಜಿಕ ಸೌಹಾರ್ದತೆಯ ಬಗ್ಗೆ ಚರ್ಚೆ ನಡೆಸಿದ ಅವರು, ಜಾತಿ-ಧರ್ಮದ ಭೇದವಿಲ್ಲದೆ ಒಗ್ಗಟ್ಟಿನಿಂದ ಮುನ್ನಡೆಯುವಂತೆ ಕಿವಿಮಾತು ಹೇಳಿದರು.
ಶಿಬಿರದ ಎರಡನೇ ದಿನದಂದು ಶಿಬಿರಾರ್ಥಿಗಳು ಶಿರಸಿ ಮಾರಿಕಾಂಬಾ ದೇವಸ್ಥಾನ ಹಾಗೂ ಯಾಣಕ್ಕೆ ಶೈಕ್ಷಣಿಕ ಪ್ರವಾಸ ಕೈಗೊಂಡು ಸಂಭ್ರಮಿಸಿದರು. ಈ ಎರಡು ದಿನಗಳ ಕಾರ್ಯಾಗಾರದಲ್ಲಿ ಒಟ್ಟು 52 ಯುವಕ-ಯುವತಿಯರು ಹಾಗೂ ಲೋಯೋಲ ವಿಕಾಸ ಕೇಂದ್ರದ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.
ಈ ಸುದ್ದಿ ಓದಿದ್ದೀರಾ? ಮುಂಡಗೋಡ | ಕಸ ವಿಲೇವಾರಿ ಘಟಕದಲ್ಲಿ ಅಗ್ನಿ ಅವಘಡ; ಪಟ್ಟಣ ಪಂಚಾಯತ ವಿರುದ್ಧ ಜಾತಿ ತಾರತಮ್ಯದ ಗಂಭೀರ ಆರೋಪ
ಕಾರ್ಯಕ್ರಮದ ಆರಂಭದಲ್ಲಿ ಸಿಬ್ಬಂದಿ ವರ್ಗದವರು ಅಂಬೇಡ್ಕರ್ ಜಾಗೃತಿ ಗೀತೆಯನ್ನು ಹಾಡಿದರು. ಭೂಮಿಕಾ ಲಚ್ಚಿ ಸ್ವಾಗತಿಸಿದರೆ, ಪುನೀತ್ ಸವಪಳ್ಳ ಸಂವಿಧಾನದ ಪೀಠಿಕೆ ವಾಚಿಸಿದರು. ಭರಮಣ್ಣ ಚಕ್ರಸಾಲಿ ವಂದನಾರ್ಪಣೆ ಮಾಡಿದರು ಹಾಗೂ ಮಂಗಳಾ ಮೋರೆ ಕಾರ್ಯಕ್ರಮ ನಿರೂಪಿಸಿದರು. ತನ್ವೀರ್ ಅಹ್ಮದ್ ಮಿರ್ಜಾನಕರ್ ಅವರು ಯುವಕ ಯುವತಿಯರಿಗೆ ಮನೋರಂಜನೆ ಚಟುವಟಿಕೆ ಆಯೋಜನೆ ಮಾಡಿದ್ದರು.





