ಮುಂಡಗೋಡ: ಪ್ರಸುತ್ತ ಸಾಲಿನ ಆರ್ಥಿಕ ವರ್ಷ ಕೊನೆಗೊಳ್ಳಲು ಇನ್ನು ಮೂರುವರೆ ತಿಂಗಳು ಬಾಕಿ ಇರುವಾಗಲೇ ಗ್ರಾಮ ಪಂಚಾಯತ್ ಮಟ್ಟದ ಕರ ಸಂಗ್ರಹಣೆಯಲ್ಲಿ ಒಟ್ಟು ಬೇಡಿಕೆಗೆ ಎದುರಾಗಿ ಶೇ.100ರಷ್ಟು ವಸೂಲಾತಿ ಮಾಡುವ ಮೂಲಕ ಪಾಳಾ ಗ್ರಾಮ ಪಂಚಾಯತ್ ಉತ್ತಮ ಸಾಧನೆ ಮಾಡಿದೆ ಎಂದು ತಾಲೂಕು ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿ ಟಿ.ವಾಯ್. ದಾಸನಕೊಪ್ಪ ಹೇಳಿದರು.
ಅವರು ಬುಧವಾರ ಮುಂಡಗೋಡ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಪಾಳಾ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ತಾರಾಮಣಿ ಜಿ. ಮತ್ತು ಸಿಬ್ಬಂದಿಯನ್ನು ಸನ್ಮಾನಿಸಿ, ಮಾತನಾಡಿದರು.
ಪ್ರಸಕ್ತ ಆರ್ಥಿಕ ವರ್ಷದಲ್ಲಿ 6,98,485 ರೂ. ಪ್ರಸ್ತುತ ಬೇಡಿಕೆಗೆ ಎದುರಾಗಿ ಶೆ. 100 ರಷ್ಟು ವಸೂಲಾತಿ ಮಾಡುವ ಮೂಲಕ ತಾಲೂಕಿಗೆ ಪ್ರಥಮ ಸ್ಥಾನದಲ್ಲಿದೆ. ಪಿಡಿಒ ಅವರು ಪ್ರತಿದಿನ ನಸು ಮುಂಜಾನೆಯಿಂದಲೇ ತೆರಿಗೆ ಸಂಗ್ರಹ ಅಭಿಯಾನದಲ್ಲಿ ಅತ್ಯುತ್ಸಾಹದಿಂದ ಪಾಲ್ಗೊಳ್ಳುತ್ತಿದ್ದರು ಹಾಗೂ ಸಿಬ್ಬಂದಿಯನ್ನು ಪ್ರೇರೇಪಿಸುತ್ತಿದ್ದರು.
ಅತಿ ಕಡಿಮೆ ಅವಧಿಯಲ್ಲಿ ಈ ಸಾಧನೆ ಮಾಡಿರುವುದಕ್ಕೆ ಪಂಚಾಯತ್ ಸಿಬ್ಬಂದಿ ಶ್ರಮ ಕಾರಣ ಎಂದು ಅವರು ಶ್ಲಾಘಿಸಿದರು. ಮುಂಡಗೋಡ ತಾಲೂಕು ಪ್ರಸ್ತುತ ಬೇಡಿಕೆಗೆ ಎದುರಾಗಿ ಶೇ. 67% ಮತ್ತು ಒಟ್ಟು ಬೇಡಿಕೆಗೆ ಎದುರಾಗಿ ಶೇ. 56% ರಷ್ಟು ಗುರಿ ಸಾಧಿಸುವ ಮೂಲಕ ಜಿಲ್ಲೆಯಲ್ಲಿ ಮೂರನೇ ಸ್ಥಾನದಲ್ಲಿದೆ.
ಪಾಳಾ ಗ್ರಾಪಂ ನಂತೆ ಉಳಿದ ಗ್ರಾಮ ಪಂಚಾಯತಿಗಳು ಸಹ ಸಕ್ರಿಯವಾಗಿ ತೆರಿಗೆ ಸಂಗ್ರಹ ಅಭಿಯಾನದಲ್ಲಿ ಭಾಗವಹಿಸಬೇಕು. ತಾಲೂಕು ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಗಳಿಸಲು ಶ್ರಮವಹಿಸಬೇಕು ಎಂದರು.
ಈ ಸುದ್ದಿ ಓದಿದ್ದೀರಾ ? ಮುಂಡಗೋಡ | ಬೆಂಗಳೂರು ತ್ಯಜಿಸಿ ಬಂದ ಸುಭಾಸ್‌ಚಂದ್ರ ನಾಯ್ಕ್‌ಗೆ ನರೇಗಾ ಕೈ ಹಿಡಿತು: ಕುರಿ ಸಾಕಾಣಿಕೆಯಲ್ಲಿ ಲಕ್ಷಗಳ ಆದಾಯ!
ಈ ಸಂದರ್ಭದಲ್ಲಿ ತಾಲೂಕು ಪಂಚಾಯತಿಯ ಸಹಾಯಕ ನಿರ್ದೇಶಕ (ಗ್ರಾಉ & ಪಂ.ರಾಜ್) ಸೋಮಲಿಂಗಪ್ಪ ಛಬ್ಬಿ, ವ್ಯವಸ್ಥಾಪಕ ಪ್ರಕಾಶ್ ಎಂ.ಕೆ., ಎಲ್ಲಾ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು, ತಾಲೂಕು ಮಟ್ಟದ ವಿಷಯ ನಿರ್ವಾಹಕರು, ಕರ ವಸೂಲಿಗಾರರು ಹಾಗೂ ತಾಪಂ ಸಿಬ್ಬಂದಿ ಉಪಸ್ಥಿತರಿದ್ದರು.





