ಮುಂಡಗೋಡ ತಾಲ್ಲೂಕಿನ ಇಂದಿರಾನಗರ ಮಳಗಿ ಗ್ರಾಮದಲ್ಲಿ ರವಿವಾರದಂದು ಸಂವಿಧಾನ ದಿನಾಚರಣೆ ಅಂಗವಾಗಿ ಯುವರತ್ನ ಯುವ ಒಕ್ಕೂಟ, ಮತ್ತು ಲೊಯೋಲಾ ವಿಕಾಸ ಕೇಂದ್ರ ವಿಡಿಸಿ, ಇವರ ಸಂಯುಕ್ತ ಆಶ್ರಯದಲ್ಲಿ ಯುವತಿಯರಿಗಾಗಿ ರಂಗೋಲಿ ಸ್ಪರ್ಧೆ ಹಾಗೂ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಸ್ಥಳೀಯ ಮಹಿಳೆಯರು, ಊರಿನ ಹಿರಿಯರು ಮತ್ತು ಮಕ್ಕಳು ಸೇರಿದಂತೆ ಒಟ್ಟು 36 ಜನ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ರಂಗೋಲಿ ಸ್ಪರ್ಧೆಯಲ್ಲಿ ಭಾಗವಹಿಸಿದ ಯುವತಿಯರು ಸಂವಿಧಾನದ ಅಂಶಗಳನ್ನು ಪ್ರತಿಬಿಂಬಿಸುವ ಚಿತ್ರಗಳನ್ನು, ಸಂವಿಧಾನ ಪೀಠಿಕೆಯನ್ನು ಮತ್ತು ಬಾಬಾಸಾಹೇಬ ಅಂಬೇಡ್ಕರ್ ಅವರ ಭಾವಚಿತ್ರವನ್ನು ಸ್ಪರ್ಧಿಗಳು ಬಿಡಿಸಿದರು. ಈ ಸ್ಪರ್ಧೆಯ ಉದ್ದೇಶ ಮಹಿಳೆಯರಲ್ಲಿ ಸೃಜನಶೀಲತೆಯ ಜೊತೆಗೆ ಪ್ರಸ್ತುತ ದಿನಗಳಲ್ಲಿ ಸಂವಿಧಾನ ಎಷ್ಟು ಮಹತ್ವದ್ದಾಗಿದೆ ಎಂಬುದನ್ನು ತಿಳಿಸುವದಾಗಿತ್ತು ಎಂದು ಆಯೋಜಕರು ಹೇಳಿದರು.

ಕಾರ್ಯಕ್ರಮದಲ್ಲಿ ಶ್ರೀದೇವಿಯವರು ಸಂವಿಧಾನದ ಪೀಠಿಕೆಯನ್ನು ಓದಿ, ಸಂವಿಧಾನ ಮೌಲ್ಯಗಳ ಮಹತ್ವವನ್ನು ಹಂಚಿಕೊಂಡರು. ಸಂಯೋಜಕರಾದ ಮಂಗಳಾ ಮೋರೆ ಅವರು ಸಂವಿಧಾನದ ಉಗಮ, ಅದರ ತತ್ವಗಳು ಮತ್ತು ನಾಗರಿಕರ ಮೂಲಭೂತ ಕರ್ತವ್ಯಗಳ ಕುರಿತು ಮಾಹಿತಿ ನೀಡಿದರು. ದೀಪಾ ಕೊಳುರ ಅವರು ಬಾಬಾಸಾಹೇಬ ಡಾ. ಬಿ.ಆರ್. ಅಂಬೇಡ್ಕರ್ ಅವರ ಜಾಗೃತಿ ಗೀತೆಯನ್ನು ಹೇಳಿಕೊಟ್ಟರು. ಹಾಗೂ ಮಹಿಳೆಯರಿಗಾಗಿ ಇತರೆ ಮನರಂಜನಾ ಚಟುವಟಿಕೆಗಳನ್ನು ಸಹ ಆಯೋಜನೆ ಮಾಡಲಾಗಿತ್ತು.
ಈ ಸುದ್ದಿ ಓದಿದ್ದೀರಾ? ಯಲ್ಲಾಪುರ | ರಾತ್ರಿ ಪೂರ್ತಿ ಅಕ್ರಮವಾಗಿ ಮರಳು ಸಾಗಾಟ; ಅರಣ್ಯ ಇಲಾಖೆಯ ಮೌನಕ್ಕೆ ಸಾರ್ವಜನಿಕರ ಆಕ್ರೋಶ
ಕಾರ್ಯಕ್ರಮದಲ್ಲಿ ಚವಡಳ್ಳಿ BFT ಸದಸ್ಯ ಯುವರಾಜ ಆರ್.ಕೆ, ಲೀಲಾವತಿ ರಾಯ್ಕರ್, ಸ್ನೇಹ ಸ್ವಸಹಾಯ ಸಂಘದ ರೂಪ ಮಾಳೆನವರ್, ಹಿರಿಯರಾದ ಮೈಲಾರಪ್ಪ ಕಂಬಳಿ, ಹನುಮಂತಪ್ಪ ಗಂಜಿಗಟ್ಟಿ, ಚಿಗುರು ವಸತಿ ನಿಲಯದ ವಾರ್ಡನ್ ಜ್ಯೋತಿ ಹಾನಗಲ್, ಸಿಬ್ಬಂದಿಗಳಾದ ಮಂಗಳಾ ಮೋರೆ, ದೀಪಾ ಕೊಳುರ, ಶ್ರೀದೇವಿ ಭದ್ರಾಪುರ, ಸಮುದಾಯದ ವಿಡಿಸಿ ಸದಸ್ಯರು ಸೇರಿದಂತೆ ಮಹಿಳೆಯರು ಮತ್ತು ಮಕ್ಕಳು ಉಪಸ್ಥಿತರಿದ್ದರು.





